ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವನಾಥ್ ರಾಜಕೀಯ ವ್ಯಾಪಾರಿ, ಅಳಿಯನಿಗೆ ಆಯಕಟ್ಟಿನ ಹುದ್ದೆ ಕೊಡಿಸಲು ಲಾಬಿ: ಆರೋಪ

9 ನಿಗಮಗಳ ಅಧ್ಯಕ್ಷರ ವಾಗ್ದಾಳಿ
Last Updated 19 ಜೂನ್ 2021, 2:18 IST
ಅಕ್ಷರ ಗಾತ್ರ

ಬೆಂಗಳೂರು: ‘ಎಚ್‌.ವಿಶ್ವನಾಥ್‌ ಒಬ್ಬ ರಾಜಕೀಯ ವ್ಯಾಪಾರಿಯಾಗಿದ್ದು, ಎಂಜಿನಿಯರ್ ಅಳಿಯನಿಗೆ ಆಯಕಟ್ಟಿನ ಹುದ್ದೆ ಕೊಡಿಸುವುದಕ್ಕೆ ಹಾಗೂ ಮಕ್ಕಳ ರಾಜಕೀಯ ಭವಿಷ್ಯ ರೂಪಿಸುವುದಕ್ಕೆ ಅವರ ರಾಜಕೀಯ ಜೀವನ ಮೀಸಲಾಗಿದೆ’ ಎಂದು 9 ನಿಗಮ–ಮಂಡಳಿಗಳ ಅಧ್ಯಕ್ಷರು ಜಂಟಿ ಹೇಳಿಕೆಯಲ್ಲಿ ಟೀಕಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಅಧ್ಯಕ್ಷರು ಸುದೀರ್ಘ ಹೇಳಿಕೆ ನೀಡಿದ್ದಾರೆ.

ಜೆಡಿಎಸ್‌ನ ಶಾಸಕ ಸ್ಥಾನಕ್ಕೆರಾಜೀನಾಮೆ ನೀಡುವಾಗ ಯಡಿಯೂರಪ್ಪನವರ ವಯಸ್ಸು, ಉತ್ಸಾಹ ನಿಮ್ಮ ಸಮಯಸಾಧಕತನದ ಮಬ್ಬಿನ ಕಣ್ಣಿಗೆ ಏಕೆ ಕಾಣಲಿಲ್ಲ ಎಂದು ಪ್ರಶ್ನಿಸಿರುವ ಅವರು, ನೆಂಟರಿಷ್ಟರಿಗೆ ಕಾಮಗಾರಿಗಳ ಗುತ್ತಿಗೆ ಕೊಡಿಸುವುದಕ್ಕೇ ನಿಮ್ಮ ಇಡೀ ರಾಜಕೀಯ ಜೀವನ ಮೀಸಲಾಗಿದೆ ಎಂದು ಹಂಗಿಸಿದ್ದಾರೆ.

ಸ್ವಾರ್ಥ ಮತ್ತು ಸ್ವಜನ ಪಕ್ಷಪಾತಕ್ಕೆ ರಾಜಕೀಯ ಕ್ಷೇತ್ರವನ್ನು ಮೀಸಲಾಗಿರಿಸಿಕೊಂಡಿರುವ ನೀವು, ಬಗ್ಗಿದರೆ ಜುಟ್ಟು ಹಿಡಿಯುವುದು, ಎದ್ದರೆ ಕಾಲು ಎಳೆಯುವ ನೈತಿಕ ದಿವಾಳಿತನದ ರಾಜಕಾರಣ ಮಾಡುತ್ತಲೇ ಬಂದಿದ್ದೀರಿ. ಇದನ್ನು ನೋಡುತ್ತಿದ್ದರೆ ನಿಮ್ಮ ಬಗ್ಗೆ ಮರುಕ ಪಡುವುದಕ್ಕೂ ಅಸಹವ್ಯವಾಗುತ್ತಿದೆ ಎಂದು ಟೀಕಿಸಿದ್ದಾರೆ.

ದೇವರಾಜ ಅರಸ್‌ ಅವರಿಂದ ಅಧಿಕಾರದ ಭಿಕ್ಷೆ ಪಡೆದ ನೀವು ಅವರ ಬೆನ್ನಿಗೇ ಇರಿದು ಉಂಡ ಮನೆಗೆ ದ್ರೋಹ ಬಗೆದವರು. ವೀರೇಂದ್ರ ಪಾಟೀಲ, ಬಂಗಾರಪ್ಪ, ವೀರಪ್ಪ ಮೊಯ್ಲಿ, ಎಸ್.ಎಂ.ಕೃಷ್ಣ, ಎಚ್.ಡಿ.ದೇವೇಗೌಡರಿಗೆ ಅದನ್ನೇ ಮಾಡಿದ ನೀವು, ರಾಜಕೀಯದಲ್ಲಿ ಪಾತಾಳಕ್ಕೆ ಬಿದ್ದಿದ್ದ ನಿಮ್ಮನ್ನು ಕನಿಕರದಿಂದ ಮೇಲೆತ್ತಿ ವಿಧಾನ ಪರಿಷತ್ ಸ್ಥಾನ ಕರುಣಿಸಿದ ಬಿಜೆಪಿ ಹಾಗೂ ಯಡಿಯೂರಪ್ಪನವರ ವಿಶ್ವಾಸಕ್ಕೇ ಇರಿಯುವ ಧೂರ್ತತನ ಪ್ರದರ್ಶಿಸುತ್ತಿದ್ದೀರಿ ಎಂದು ದೂರಿದ್ದಾರೆ.

‘ಬಿ.ವೈ ವಿಜಯೇಂದ್ರ ಅಪರೂಪದ ಸಂಘಟನಾ ಚತುರರಾಗಿದ್ದು, ಪಕ್ಷ ಹಾಗೂ ರಾಜ್ಯದ ಜನ ಅವರನ್ನು ಒಪ್ಪಿದ್ದಾರೆ. ಅವರ ವಿರುದ್ಧ ದುರುದ್ದೇಶದ ಟೀಕೆ ಮಾಡುತ್ತಿದ್ದೀರಿ. ನಿಮಗೆ ನೈತಿಕತೆ ಇದ್ದರೆ ಬಿಜೆಪಿ ಮತ್ತು ಯಡಿಯೂರಪ್ಪ ಅವರಿಂದ ಪಡೆದ ವಿಧಾನ ಪರಿಷತ್ ಸದಸ್ಯತ್ವದ ಭಿಕ್ಷೆಯನ್ನು ರಾಜೀನಾಮೆ ನೀಡಿ, ನಿಮ್ಮ ಗೌರವ ಉಳಿಸಿಕೊಳ್ಳಿ. ಇಲ್ಲವೇ ಬಿಜೆಪಿಯಿಂದ ಹೊರದೂಡುವ ಅಪಮಾನದ ಕ್ಷಣಗಳನ್ನು ಎದುರಿಸಲು ಸಿದ್ದರಾಗಿ ಎಂದು ಅವರು ಸವಾಲು ಹಾಕಿದ್ದಾರೆ.

ಈ ಹೇಳಿಕೆಗೆ ವಿವಿಧ ನಿಗಮಗಳ ಅಧ್ಯಕ್ಷರಾದ ಎಂ. ರುದ್ರೇಶ್, ಆರ್. ರಘು ಕೌಟಿಲ್ಯ, ಬಾಬು ಪತ್ತಾರ್‌, ಗಿರೀಶ್ ಉಪ್ಪಾರ್, ಎಲ್.ಆರ್. ಮಹದೇವಸ್ವಾಮಿ, ಈಶ್ವರ್‌, ಕೃಷ್ಣಪ್ಪಗೌಡ, ಎಸ್‌. ಮಹದೇವಯ್ಯ, ಸಿ. ಮುನಿಕೃಷ್ಣ ಸಹಿ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT