ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Cauvery Water Dispute | ವಾಸ್ತವ ಸ್ಥಿತಿ ಗಮನಿಸದ ಸುಪ್ರೀಂಕೋರ್ಟ್‌: ಬೊಮ್ಮಾಯಿ

Published 21 ಸೆಪ್ಟೆಂಬರ್ 2023, 16:33 IST
Last Updated 21 ಸೆಪ್ಟೆಂಬರ್ 2023, 16:33 IST
ಅಕ್ಷರ ಗಾತ್ರ

ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂಕೋರ್ಟ್‌ ಕೇವಲ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಪರಿಗಣಿಸದೇ ವಾಸ್ತವ ಸ್ಥಿತಿಯನ್ನು ಆಧರಿಸಿ ತೀರ್ಪು ನೀಡಬೇಕಿತ್ತು ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್‌ ಎರಡು ರಾಜ್ಯಗಳ ವಾದ ಕೇಳಿ ಪ್ರಾಧಿಕಾರದ ಆದೇಶವನ್ನು ಎತ್ತಿ ಹಿಡಿದಿದೆ. ಮುಂದಿನ 15 ದಿನ ಪ್ರಾಧಿಕಾರದ ಆದೇಶ ಪಾಲನೆ ಮಾಡಬೇಕು ಎಂದು ಹೇಳಿರುವುದು ದುರಾದೃಷ್ಟಕರ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

‘ಮತ್ತೊಮ್ಮೆ ಕರ್ನಾಟಕದ ವಸ್ತುಸ್ಥಿತಿಯನ್ನು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಬೇಕಿದೆ. ಪ್ರಾಧಿಕಾರದ ಆದೇಶವೇ ಅಂತಿಮವಲ್ಲ. ಸುಪ್ರೀಂಕೋರ್ಟ್‌ ಈ ವಿಚಾರದಲ್ಲಿ ತನಗೆ ಸಂಬಂಧವೇ ಇಲ್ಲ ಎನ್ನುವುದು ಸರಿಯಲ್ಲ. ಕೇವಲ ಕರ್ನಾಟಕದ ಅಣೆಕಟ್ಟುಗಳ ನೀರಿನ ಮಟ್ಟ ಲೆಕ್ಕ ಹಾಕುವುದಲ್ಲ. ತಮಿಳುನಾಡು ಅಣೆಕಟ್ಟೆಗಳಲ್ಲಿನ ನೀರಿನ ಮಟ್ಟವನ್ನೂ ಲೆಕ್ಕ ಹಾಕಬೇಕು’ ಎಂದು ಬೊಮ್ಮಾಯಿ ಆಗ್ರಹಿಸಿದರು.

‘ಪ್ರಾಧಿಕಾರದ ಮೊದಲ ಆದೇಶ ಬಂದಾಗಲೇ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ ಮುಂದೆ ಮೇಲ್ಮನವಿ ಸಲ್ಲಿಸಬೇಕಿತ್ತು. ಸರ್ಕಾರ ಎರಡು ಬಾರಿ ನೀರು ಬಿಟ್ಟು ಈಗ ಸುಪ್ರೀಂಕೋರ್ಟ್‌ ಮುಂದೆ ಹೋಗಿದ್ದಾರೆ. ಸುಪ್ರೀಂಕೋರ್ಟ್‌ ಸಂಪೂರ್ಣವಾಗಿ ಪ್ರಾಧಿಕಾರವನ್ನು ಅವಲಂಬಿಸಿದೆ. ಕಾವೇರಿ ನೀರು ನಿರ್ವಹಣಾ ಸಮಿತಿ ಮತ್ತು ಪ್ರಾಧಿಕಾರ ಎರಡರ ಧೋರಣೆಯೂ ಸರಿ ಇಲ್ಲ. ಪ್ರಾಧಿಕಾರ ವಾಸ್ತವ ಸ್ಥಿತಿಯನ್ನು ಅವಲೋಕಿಸದೇ ಕೇವಲ ಅಂಕಿ– ಅಂಶಗಳನ್ನು ಇಟ್ಟುಕೊಂಡು ಆದೇಶ ಮಾಡುತ್ತಿದೆ’ ಎಂದರು.

‘ತಮಿಳುನಾಡಿಗೆ ನವೆಂಬರ್‌ನಲ್ಲಿ ಮತ್ತೊಂದು ಹಿಂಗಾರು ಮಳೆ ಬರುತ್ತದೆ. ಆದರೆ, ಕರ್ನಾಟಕಕ್ಕೆ ಮುಂಗಾರು ಮುಗಿಯುವ ಹಂತದಲ್ಲಿದೆ. ಇದೆಲ್ಲವನ್ನೂ ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಬೇಕು. ಕುಡಿಯುವ ನೀರು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಹೋರಾಟ ಮಾಡಬೇಕು. ಇದರಲ್ಲಿ ರಾಜಕಾರಣ ಮಾಡಲು ಇಷ್ಟವಿಲ್ಲ. ಈಗಾಗಲೇ ರೈತರ ಬೆಳೆ ಒಣಗಿ ಹೋಗುತ್ತಿದೆ. ರಾಜ್ಯ ಸರ್ಕಾರ ಪ್ರತಿ ಎಕರೆಗೆ ₹25,000 ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT