ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧರಾಮೇಶ್ವರ ಅಧ್ಯಯನ ಪೀಠ ಸ್ಥಾಪನೆ: ಸಿದ್ದರಾಮಯ್ಯ

ಶರಣಬಸವ ಸ್ವಾಮೀಜಿಗಳ ಸಂಸ್ಮರಣೋತ್ಸವ, ಗದ್ದುಗೆ ಶಿಲಾನ್ಯಾಸ ಹಾಗೂ ಗುರು ಕುಟೀರ ಉದ್ಘಾಟನೆ
Published 24 ನವೆಂಬರ್ 2023, 0:00 IST
Last Updated 24 ನವೆಂಬರ್ 2023, 0:00 IST
ಅಕ್ಷರ ಗಾತ್ರ

ಬಾಗಲಕೋಟೆ: ‘ವಚನಕಾರ ಸಿದ್ದರಾಮೇಶ್ವರ ಅಧ್ಯಯನ ಪೀಠ ಸ್ಥಾಪಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಬಾಗಲಕೋಟೆಯಲ್ಲಿ ಗುರುವಾರ ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ಆವರಣದಲ್ಲಿ ನಡೆದ ಶರಣಬಸವ ಸ್ವಾಮೀಜಿಗಳ ಸಂಸ್ಮರಣೋತ್ಸವ, ಗದ್ದುಗೆ ಶೀಲಾಮಂಟಪ ಶಿಲಾನ್ಯಾಸ ಹಾಗೂ ಗುರು ಕುಟೀರ ಉದ್ಘಾಟಿಸಿ ಮಾತನಾಡಿದ ಅವರು, ‘ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಒಂದು ಸ್ಥಾನವನ್ನು ಭೋವಿ ಸಮಾಜದವರಿಗೆ ನೀಡಲಾಗುವುದು. ಭೋವಿ ಸಮಾಜದವರು ಶ್ರಮಜೀವಿಗಳು, ಸಮಾಜಕ್ಕೆ ಆರ್ಥಿಕ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡಲಿದೆ’ ಎಂದು ಭರವಸೆ ನೀಡಿದರು.

‘ಸಿದ್ದರಾಮೇಶ್ವರರು ನೇರ, ನಿಷ್ಠುರ ವಚನಕಾರರಾಗಿದ್ದರು. ವಚನಗಳ ಮೂಲಕ ಸಮಾಜದ ಅಂಕು–ಡೊಂಕು ತಿದ್ದಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯ ದೊಡ್ಡ ಅಧ್ಯಾಯ. ಬಸವಾದಿ ಶರಣರಿಗಿಂತ ಮುಂಚೆ ಧರ್ಮ ಬೋಧನೆ ಕನ್ನಡದಲ್ಲಿ ಆಗುತ್ತಿರಲಿಲ್ಲ. ಜನರ ಭಾಷೆಯಲ್ಲಿ ತಿಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಧರ್ಮ ನಮಗೋಸ್ಕರ ಇದೆ. ಧರ್ಮಕ್ಕೋಸ್ಕರ ನಾವಲ್ಲ’ ಎಂದು ಹೇಳಿದರು.

‘ನುಡಿದಂತೆ ನಡೆಯುತ್ತೇನೆ. ಹೇಳಿದ್ದನ್ನು ಮಾಡಿಯೇ ತೀರುತ್ತೇವೆ. ಅಲ್ಲವೇನಪ್ಪಾ?’ ಎಂದು ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಅವರನ್ನು ಕೇಳಿದರು. ನಂತರ ಮಾತು ಮುಂದುವರೆಸಿ, ‘ನೀನು ಹೇಳದಿರಬಹುದು. ಜನರಿಗೆ ಗೊತ್ತಿದೆ. ಎಲ್ಲರಿಗೂ ನ್ಯಾಯ ಸಿಗಬೇಕು. ಅಧಿಕಾರ ಹಂಚಿಕೆಯಾಗಬೇಕು. ಸಮ ಸಮಾಜ ನಿರ್ಮಾಣವಾಗಬೇಕು’ ಎಂದರು.

ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ‘ಬಸವಣ್ಣನ ನಾಡಿನಲ್ಲಿ ಬಸವಣ್ಣನ ವಿಚಾರ ಜಾರಿಯ ಸರ್ಕಾರ ನೋಡಲು ಸಿಗುವುದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದಾಗ ಮಾತ್ರ. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಬಗ್ಗೆ ಅವರು ಚಿಂತನೆ ನಡೆಸುತ್ತಾರೆ. ರಾಜ್ಯದಲ್ಲಿ ಜಾರಿಗೊಳಿಸಿದ್ದ ಗ್ಯಾರಂಟಿ ಯೋಜನೆಗಳು ಈಗ ದೇಶಕ್ಕೇ ಮಾದರಿಯಾಗಿವೆ. ಅನುಭವ ಮಂಟಪ ನಿರ್ಮಾಣ, ಸಿದ್ದರಾಮೇಶ್ವರರ ಸಾಂಸ್ಕೃತಿಕ ಅಧ್ಯಯನ ಕೇಂದ್ರಕ್ಕೆ ಸರ್ಕಾರ ಅಗತ್ಯ ನೆರವು ನೀಡಬೇಕು’ ಎಂದರು.

ಭೋವಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಅರವಿಂದ ಲಿಂಬಾವಳಿ, ಸಚಿವರಾದ ಆರ್‌.ಬಿ. ತಿಮ್ಮಾಪುರ, ಶಿವರಾಜ ತಂಗಡಗಿ, ಶಾಸಕರಾದ ಮಾನಪ್ಪ ವಜ್ಜಲ, ವಿಜಯಾನಂದ ಕಾಶಪ್ಪನವರ, ವೆಂಕಟೇಶ, ಭೀಮಸೇನ ಚಿಮ್ಮನಕಟ್ಟಿ, ಸಂಸದ ಪಿ.ಸಿ. ಗದ್ದಿಗೌಡರ ಇದ್ದರು.

ಟಿಕೆಟ್‌ ಬಗ್ಗೆ ಹೇಳಲಾಗಲ್ಲ

ಬಾಗಲಕೋಟೆ: ಚಿತ್ರದುರ್ಗದ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್ ಅನ್ನು ಇಂತವರಿಗೆ ನೀಡುತ್ತೇವೆ ಎಂದು ಹೇಳಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸಚಿವ ಶಿವರಾಜ ತಂಗಡಗಿ ಮಾತನಾಡುವ ಒಂದು ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಬೇಕು ಎಂದು ಮನವಿ ಮಾಡಿದ್ದರು. ಸಿದ್ದರಾಮಯ್ಯ ಭಾಷಣದಲ್ಲಿ ಉಳಿದ ಬೇಡಿಕೆ ಈಡೇರಿಸುವುದಾಗಿ ಹೇಳಿದರೂ ಲೋಕಸಭಾ ಟಿಕೆಟ್ ಬಗ್ಗೆ ಪ್ರಸ್ತಾಪಿಸಲಿಲ್ಲ. ಆಗ ಸಚಿವ ತಂಗಡಗಿ ಬಂದು ಚಿತ್ರದುರ್ಗ ಟಿಕೆಟ್‌ ಅನ್ನು ನೀಡುವುದಾಗಿ ಘೋಷಿಸಬೇಕು ಎಂದು ಕೋರಿದರು. ಹಾಗೆಲ್ಲ ಇಲ್ಲಿಯೇ ಹೇಳಲು ಆಗುವುದಿಲ್ಲ. ಪಕ್ಷದಲ್ಲಿ ಚರ್ಚೆ ಮಾಡಬೇಕಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT