ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಪಿಎಲ್‌ ಪಡಿತರ ಚೀಟಿ: 1 ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ

Published 27 ಮೇ 2023, 0:19 IST
Last Updated 27 ಮೇ 2023, 0:19 IST
ಅಕ್ಷರ ಗಾತ್ರ

ಬೆಂಗಳೂರು: ಆದ್ಯತಾ ಕುಟುಂಬಗಳ (ಬಡತನ ರೇಖೆಗಿಂತ ಕೆಳಗಿರುವ– ಬಿಪಿಎಲ್‌) ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಲು ಜೂನ್‌ 1 ರಿಂದ ಅವಕಾಶ ಕಲ್ಪಿಸಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ತೀರ್ಮಾನಿಸಿದೆ.

ಚುನಾವಣಾ ನೀತಿ ಸಂಹಿತೆ ಕಾರಣದಿಂದ ರಾಜ್ಯದಲ್ಲಿ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಕೆ ಮತ್ತು ಪಡಿತರ ಚೀಟಿಗಳ ವಿತರಣೆ ಸ್ಥಗಿತಗೊಳಿಸಲಾಗಿತ್ತು. ವೆಬ್‌ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಕೆ ವಿಭಾಗವನ್ನು ಲಾಕ್‌ ಮಾಡಲಾಗಿತ್ತು.

ಕಾಂಗ್ರೆಸ್‌ ಪಕ್ಷವು ಚುನಾವಣೆಯಲ್ಲಿ ನೀಡಿರುವ ಐದು ಗ್ಯಾರಂಟಿ ಭರವಸೆಗಳ ಅನುಷ್ಠಾನದಲ್ಲಿ ಫಲಾನುಭವಿಗಳನ್ನು ಗುರುತಿಸಲು ಬಿಪಿಎಲ್‌ ಪಡಿತರ ಚೀಟಿಯನ್ನೇ ಮಾನದಂಡವಾಗಿ ನಿಗದಿಪಡಿಸುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ಜನರು ಬಿಪಿಎಲ್‌ ಪಡಿತರ ಚೀಟಿಗಾಗಿ ಆಹಾರ ಇಲಾಖೆ ಕಚೇರಿಗಳಿಗೆ ಭೇಟಿ ನೀಡುತ್ತಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಹೆಚ್ಚುವರಿ ನಿರ್ದೇಶಕ ಜಿ. ಗ್ಯಾನೇಂದ್ರ ಕುಮಾರ್‌ ಗಂಗ್ವಾರ್‌, ‘ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಪಡಿತರ ಚೀಟಿಗಳಿಗೆ ಅರ್ಜಿ ಸ್ವೀಕರಿಸುವುದನ್ನು ನಿಲ್ಲಿಸಲಾಗಿತ್ತು. ಈ ಹಿಂದೆಯೇ ಮಂಜೂರಾದ ಪಡಿತರ ಚೀಟಿಗಳ ವಿತರಣೆ ಪ್ರಗತಿಯಲ್ಲಿದೆ. ಆದ್ದರಿಂದ ಜೂನ್‌ 1ರಿಂದ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸ್ವೀಕರಿಸಲಾಗುವುದು’ ಎಂದರು.

2021ರ ನವೆಂಬರ್‌ನಲ್ಲಿ 2.76 ಲಕ್ಷ ಹೊಸ ಬಿಪಿಎಲ್‌ ಪಡಿತರ ಚೀಟಿಗಳ ವಿತರಣೆಗೆ ಸರ್ಕಾರ ಮಂಜೂರಾತಿ ನೀಡಿತ್ತು. 2022 ರ ನವೆಂಬರ್‌ನಲ್ಲಿ 1.55 ಲಕ್ಷ ಪಡಿತರ ಚೀಟಿಗಳ ವಿತರಣೆಗೆ ಮಂಜೂರಾತಿ ನೀಡಲಾಗಿತ್ತು. ಈಗ ಸಲ್ಲಿಕೆಯಾಗುವ ಅರ್ಜಿಗಳ ಸಂಖ್ಯೆಯನ್ನು ಆಧರಿಸಿ ಹೊಸ ಪಡಿತರ ಚೀಟಿಗಳ ಮಂಜೂರಾತಿಗೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಈಗ 1.3 ಕೋಟಿ ಬಿಪಿಎಲ್‌ ಪಡಿತರ ಚೀಟಿಗಳಿವೆ. ಸುಮಾರು 4.30 ಕೋಟಿ ಜನರು ಪಡಿತರ ಚೀಟಿಗಳ ವ್ಯಾಪ್ತಿಯಲ್ಲಿದ್ದಾರೆ. ಬಿಪಿಎಲ್‌ ಕುಟುಂಬಗಳ ಪ್ರತಿ ಸದಸ್ಯರಿಗೆ ತಿಂಗಳಿಗೆ ಹತ್ತು ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಿಸುವುದಾಗಿ ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ‘ಗ್ಯಾರಂಟಿ’ ರೂಪದ ಭರವಸೆ ನೀಡಿತ್ತು. ಇದರಿಂದಾಗಿ ರಾಜ್ಯದಲ್ಲಿ ಬಿಪಿಎಲ್‌ ಪಡಿತರ ಚೀಟಿಗಳಿಗೆ ಬೇಡಿಕೆ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT