ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಯಾತೆ ಎತ್ತುತ್ತಿರುವ ಮಹಾರಾಷ್ಟ್ರಕ್ಕೆ ಒಂದಿಂಚೂ ಭೂಮಿ ಕೊಡಲ್ಲ: ಬಿಎಸ್‌ವೈ

Last Updated 2 ಮಾರ್ಚ್ 2020, 19:41 IST
ಅಕ್ಷರ ಗಾತ್ರ

ಬೆಂಗಳೂರು: ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ತಗಾದೆ ತೆಗೆಯುತ್ತಿದ್ದು, ಆ ರಾಜ್ಯಕ್ಕೆ ಒಂದಿಂಚು ಭೂಮಿಯನ್ನೂ ಬಿಟ್ಟುಕೊಡುವುದಿಲ್ಲಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ರಾಜ್ಯಪಾಲ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಉತ್ತರ ನೀಡಿದ ಅವರು, ‘ಗಡಿ ವಿಚಾರದಲ್ಲಿ ಮಹಾರಾಷ್ಟ್ರ ನಿತ್ಯವೂ ಕ್ಯಾತೆ ತೆಗೆಯುತ್ತಿದೆ. ಮಹಾಜನ್‌ ವರದಿಯೇ ಅಂತಿಮ ಎಂಬ ನಮ್ಮ ಸರ್ಕಾರದ ನಿಲುವು ಗಟ್ಟಿಯಾಗಿದೆ’ ಎಂದು ಅವರು ತಿಳಿಸಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಎಚ್‌.ಎಸ್‌.ದೊರೆಸ್ವಾಮಿ ವಿರುದ್ಧ ನೀಡಿದ ಹೇಳಿಕೆಯ ಬಗ್ಗೆ ವಿಷಯ ಪ್ರಸ್ತಾಪಿಸಲು ಪಟ್ಟುಹಿಡಿದ ವಿರೋಧ ಪಕ್ಷಗಳ ಶಾಸಕರು ಧರಣಿ ನಡೆಸಿ, ಧಿಕ್ಕಾರ ಕೂಗುತ್ತಿದ್ದರು. ಈ ಗದ್ದಲದ ಮಧ್ಯೆ ಮುಖ್ಯಮಂತ್ರಿ ಉತ್ತರ ನೀಡಿದರು.

‘ಪ್ರವಾಹದಿಂದ ರಾಜ್ಯದಲ್ಲಿ ₹35,160 ಕೋಟಿಯಷ್ಟು ನಷ್ಟವಾಗಿದ್ದು, ಪ್ರವಾಹ ಪರಿಹಾರ ಮಾರ್ಗಸೂಚಿಯಂತೆ ₹3,891 ಕೋಟಿ ಆರ್ಥಿಕ ನೆರವು ಒದಗಿಸುವಂತೆ ಕೇಂದ್ರಕ್ಕೆ ಮನವಿಮಾಡಿದ್ದೆವು. ಎನ್‌ಡಿಆರ್‌ಎಫ್‌ ಅಡಿ ಕೇಂದ್ರ ಸರ್ಕಾರ ₹1,869 ಕೋಟಿ ಬಿಡುಗಡೆಯಾಗಿದ್ದು, ಇನ್ನೂ ಪರಿಹಾರ ಹರಿದು ಬರುವ ನಿರೀಕ್ಷೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಎರಡು ಲಕ್ಷಕ್ಕೂ ಹೆಚ್ಚು ಜನ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಳ್ಳಲು ತಲಾ ₹1 ಲಕ್ಷ ಬಿಡುಗಡೆ ಮಾಡಲಾಗಿದ್ದು, ಮನೆ ಕಟ್ಟಿಸುವ ಕೆಲಸ ಆರಂಭಿಸಿದ್ದಾರೆ. ಎರಡನೇ ಕಂತಿನ ತಲಾ ₹1 ಲಕ್ಷ ಬಿಡುಗಡೆ ಮಾಡಲು ಆರಂಭಿಸಿದ್ದೇವೆ. ಒಟ್ಟು ₹5 ಲಕ್ಷದಲ್ಲಿ ಅವರೇ ಮನೆ ಕಟ್ಟಿಕೊಳ್ಳಲಿದ್ದಾರೆ’ ಎಂದು ಯಡಿಯೂರಪ್ಪ ತಿಳಿಸಿದರು.

ಬಡ್ಡಿ ಮನ್ನಾ: ಸಹಕಾರ ಸಂಸ್ಥೆಗಳ ಮೂಲಕ ಸಾಲ ಪಡೆದು ಸುಸ್ತಿಯಾಗಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತುಕೃಷಿ ಸಲಕರಣೆಗಳ (ಟ್ರಾಕ್ಟರ್‌, ಪಂಪ್‌ಸೆಟ್‌ ಮತ್ತು ಕೃಷಿ ಉಪಕರಣಗಳು) ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡಲಾಗಿದ್ದು, ಒಟ್ಟು 92,525 ರೈತರಿಗೆ ₹466 ಕೋಟಿ ಸಂದಾಯವಾಗಿದೆ ಎಂದರು.

ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಡಿ 14 ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗಿದೆ.23 ಸಾವಿರಕ್ಕೂ ಹೆಚ್ಚು ಮೀನುಗಾರರ ₹50 ಸಾವಿರವರೆಗಿನ ಸಾಲ ಮನ್ನಾ ಆಗಿದೆ. ವಿವಿಧ ಸಹಕಾರ ಬ್ಯಾಂಕ್‌ ಮತ್ತು ಸಹಕಾರ ಸಂಘಗಳಲ್ಲಿ ₹1 ಲಕ್ಷದವರೆಗೆ ಸಾಲ ಮಾಡಿರುವ 29,631 ನೇಕಾರರ ಸಾಲ ಮತ್ತು ಬಡ್ಡಿ ಮನ್ನಾ ಮಾಡಲಾಗಿದೆ. ಒಟ್ಟು ₹98.29 ಕೋಟಿ ಮನ್ನಾ ಆಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT