ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು, ‘ಕಲ್ಯಾಣ’ಕ್ಕೆ ವಿಶೇಷ ಪ್ಯಾಕೇಜ್‌: ಕೇಂದ್ರಕ್ಕೆ ಒತ್ತಾಯ

Published 22 ಜೂನ್ 2024, 15:28 IST
Last Updated 22 ಜೂನ್ 2024, 15:28 IST
ಅಕ್ಷರ ಗಾತ್ರ

ನವದೆಹಲಿ: 15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವ ₹11,400 ಕೋಟಿ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಬೆಂಗಳೂರು ಹಾಗೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ನೀಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅಧ್ಯಕ್ಷತೆಯಲ್ಲಿ ರಾಜ್ಯ ಹಣಕಾಸು ಸಚಿವರೊಂದಿಗೆ ಶನಿವಾರ ಇಲ್ಲಿ ನಡೆದ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಈ ಮನವಿ ಮಾಡಿದರು. 

‘ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರವು 2023ನೇ ಬಜೆಟ್‌ನಲ್ಲಿ ₹5,300 ಕೋಟಿ ಘೋಷಣೆ ಮಾಡಿದೆ. ಒಂದೂವರೆ ವರ್ಷ ಕಳೆದರೂ ಅನುದಾನ ಬಿಡುಗಡೆಯಾಗಿಲ್ಲ. ಈ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸಬೇಕು’ ಎಂದು ಅವರು ಆಗ್ರಹಿಸಿದರು. 

‘ವಸತಿ ಯೋಜನೆಗಳಲ್ಲಿ ಫಲಾನುಭವಿಗಳಿಗೆ ಕೇಂದ್ರ ಪಾಲನ್ನು ನಗರ ಪ್ರದೇಶದಲ್ಲಿ ₹1.5 ಲಕ್ಷದಿಂದ ₹5 ಲಕ್ಷಕ್ಕೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ₹1.2 ಲಕ್ಷದಿಂದ ₹3 ಲಕ್ಷಕ್ಕೆ ಹೆಚ್ಚಿಸಬೇಕು’ ಎಂದು ಅವರು ಮನವಿ ಮಾಡಿದರು. 

‘ಅಂಗನವಾಡಿ, ಆಶಾ ಕಾರ್ಯಕರ್ತರ ಹಾಗೂ ಬಿಸಿಯೂಟ ನೌಕರರ ಗೌರವಧನದಲ್ಲಿ ಕೇಂದ್ರದ ಪಾಲು ಬಹಳ ಕಡಿಮೆ ಇದೆ. ಅದನ್ನು ದಶಕದಿಂದ ಪರಿಷ್ಕರಣೆ ಮಾಡಿಲ್ಲ. ಇದರಿಂದಾಗಿ, ರಾಜ್ಯದ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ. ಗೌರವಧನವನ್ನು ಪರಿಷ್ಕರಣೆ ಮಾಡಬೇಕು’ ಎಂದು ಅವರು ಒತ್ತಾಯಿಸಿದರು. 

ನಿರ್ಮಲಾ ಸೀತಾರಾಮನ್‌, ‘ಸಕಾಲದಲ್ಲಿ ತೆರಿಗೆ ಹಂಚಿಕೆ ಪಾಲು ಹಾಗೂ ಜಿಎಸ್‌ಟಿ ವರಮಾನ ನಷ್ಟ ಪರಿಹಾರ ಬಾಕಿ ವಿತರಿಸುವ ಮೂಲಕ ರಾಜ್ಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ಸಹಕಾರ ನೀಡಲು ಬದ್ಧವಿದೆ’ ಎಂದರು. 

ನಿರ್ದಿಷ್ಟ ಸುಧಾರಣೆಗಳನ್ನು ಕೈಗೊಳ್ಳಲು ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಈ ಯೋಜನೆಯ ಲಾಭವನ್ನು ರಾಜ್ಯಗಳು ಪಡೆಯಬೇಕು ಎಂದು ಅವರು ಸಲಹೆ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT