ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿ ಖರೀದಿ | ನೋಂದಣಿ ಸ್ಥಗಿತ: ರೈತರ ಪ್ರತಿಭಟನೆ

ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ರಾಗಿ ಖರೀದಿ: ರಾಜ್ಯದ ಕೋಟಾ ಮುಕ್ತಾಯ l ಸರ್ವರ್‌ ಲಾಕ್‌
Last Updated 28 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆ ಅಡಿ ರಾಗಿ ಖರೀದಿಗೆ ಹೆಸರು ನೋಂದಣಿ ಪ್ರಕ್ರಿಯೆಯನ್ನು ಏಕಾಏಕಿ ಸ್ಥಗಿತಗೊಳಿಸಿದ್ದರಿಂದ ರೊಚ್ಚಿಗೆದ್ದ ನೂರಾರು ರೈತರು ಗುರುವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ದೌಡಾಯಿಸಿದ ತಹಶೀಲ್ದಾರ್‌ ಮೋಹನಕುಮಾರಿ,ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕಿ ಗಿರಿಜಾದೇವಿ ಮತ್ತು ಡಿವೈಎಸ್‌ಪಿ ನಾಗರಾಜ್‌ ಸಮಾಧಾನಪಡಿಸಲು ಯತ್ನಿಸಿ, ಸೋತರು.

ಹೆಸರು ನೋಂದಾಯಿಸಿಕೊಳ್ಳದಿದ್ದರೆ ಸ್ಥಳದಿಂದ ಕದಲುವುದಿಲ್ಲ ಎಂದು ಪ್ರತಿಭಟನಕಾರರು ಪಟ್ಟು ಹಿಡಿದು ಹೆದ್ದಾರಿಯಲ್ಲಿ ಕುಳಿತರು.ಶಾಸಕ ಟಿ.ವೆಂಕಟ ರಮಣಯ್ಯ ಹಾಗೂ ರೈತ ಸಂಘದ ಪದಾಧಿಕಾರಿಗಳು ಸಾಥ್‌ ನೀಡಿದರು. ಇದರಿಂದ ತುಮಕೂರು-ದೊಡ್ಡಬಳ್ಳಾಪುರ ರಸ್ತೆಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕೊನೆಗೆ ಶಾಸಕ ಮತ್ತು ಪ್ರತಿಭಟನಾನಿರತರನ್ನು ಪೊಲೀಸರು ವಶಕ್ಕೆ ಪಡೆದು, ಬಿಡುಗಡೆ ಮಾಡಿದರು.

ಗುರುವಾರ ಬೆಳಿಗ್ಗೆ 4 ಗಂಟೆಯಿಂದಲೇ ನೂರಾರು ರೈತರು ಹೆಸರು ನೋಂದಾಯಿಸಲು ಎಪಿಎಂಸಿ ಆವರ
ಣದ ರಾಗಿ ಖರೀದಿ ಕೇಂದ್ರದ ಬಳಿ ಸಾಲುಗಟ್ಟಿ ನಿಂತಿದ್ದರು. ರಾಜ್ಯಕ್ಕೆ ನಿಗದಿಪಡಿಸಿದ್ದ ಕೋಟಾ ಮುಗಿದ ಕಾರಣ ಸರ್ವರ್‌ ಲಾಕ್‌ ಆಗಿದೆ ಎಂದು ಸಿಬ್ಬಂದಿ ಬಾಗಿಲು ಮುಚ್ಚಿದರು. ಇದರಿಂದ ರೊಚ್ಚಿಗೆದ್ದ ರೈತರು ವಾಗ್ವಾದಕ್ಕಿಳಿದರು. ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅಧಿಕಾರಿಗಳು ಅಸಹಾಯಕರಾಗಿ ನಿಂತಿದ್ದರು.

ಮೈಸೂರಿನಲ್ಲೂ ಪ್ರತಿಭಟನೆ

ಮೈಸೂರು: ರಾಗಿ ಖರೀದಿಗೆ ಹೆಸರು ನೋಂದಣಿ ಪ್ರಕ್ರಿಯೆ ಆರಂಭವಾಗಿ ಕೇವಲ 27 ಗಂಟೆಗಳಲ್ಲಿ ಸ್ಥಗಿತಗೊಂಡಿದ್ದರಿಂದ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಎಪಿಎಂಸಿ ಆವರಣದ ರಾಗಿ ಖರೀದಿ ಕೇಂದ್ರದ ಮುಂದೆ ಗುರುವಾರಬಿಸಿಲ ಧಗೆಯನ್ನೂ ಲೆಕ್ಕಿಸದೆ ರೈತರು ಹೆಸರು ನೋಂದಾಯಿಸಿಕೊಳ್ಳಲು ಸಾಲಿನಲ್ಲಿ ನಿಂತಿದ್ದರು. ನೋಂದಣಿ ಮುಕ್ತಾಯವಾಗಿದೆ ಎಂದು ಸಿಬ್ಬಂದಿ ಹೇಳಿದಾಗ ರೈತರು ಅವರೊಂದಿಗೆ ವಾಗ್ವಾದಕ್ಕಿಳಿದರು. ಕೆಲಕಾಲ ಪ್ರತಿಭಟನೆ ನಡೆಸಿದರು.

5 ಸಿಬ್ಬಂದಿಯನ್ನು ಕೂಡಿ ಹಾಕಿದ ರೈತರು

ಚನ್ನರಾಯಪಟ್ಟಣ: ರಾಗಿ ಖರೀದಿ ನೋಂದಣಿ ಪ್ರಕ್ರಿಯೆ ಆರಂಭಿಸುವಂತೆ ಒತ್ತಾಯಿಸಿ ರೈತರು ಪಟ್ಟಣದ ಖರೀದಿ ಕೇಂದ್ರದ ಐವರು ಸಿಬ್ಬಂದಿಯನ್ನು ಗುರುವಾರ ಒಂದು ಗಂಟೆ ಕಾಲ ಕೂಡಿ ಹಾಕಿದ್ದರು.

ನೋಂದಣಿ ಪ್ರಕ್ರಿಯೆ ಬುಧವಾರ ಸಂಜೆ 4.30ಕ್ಕೆ ಮುಕ್ತಾಯಗೊಂಡಿತ್ತು. ಗುರುವಾರ ಕೆಲ ರೈತರು ಖರೀದಿ ಕೇಂದ್ರದ ಮುಂದೆ ಜಮಾಯಿಸಿ, ನೋಂದಣಿ ಮಾಡುವಂತೆ ಕೇಳಿಕೊಂಡರು. ‘ಲಾಗಿನ್ ಮುಕ್ತಾಯವಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರೂ ಒಪ್ಪಲಿಲ್ಲ.

ಅದರಿಂದ ಕೆರಳಿದ ರೈತರು ‘ಕಚೇರಿಯ ಬಾಗಿಲನ್ನು ಏಕೆ ತೆಗೆದಿದ್ದೀರಿ? ನೋಂದಣಿ ಮಾಡಿಕೊಳ್ಳಲೇಬೇಕು’ ಎಂದು ಪಟ್ಟುಹಿಡಿದರು. ಅದಕ್ಕೆ ಒಪ್ಪದ ಸಿಬ್ಬಂದಿಯನ್ನು ಕೂಡಿ ಹಾಕಿ ಕೇಂದ್ರದ ಬಾಗಿಲನ್ನು ಮುಚ್ಚಿ ಬೀಗ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT