ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ₹ 1 ಲಕ್ಷ ಸಾಲ ಮನ್ನಾಕ್ಕೆ ಸಂಪುಟ ಅಸ್ತು

Last Updated 9 ಆಗಸ್ಟ್ 2018, 19:25 IST
ಅಕ್ಷರ ಗಾತ್ರ

ಬೆಂಗಳೂರು: ಸಹಕಾರಿ ಸಂಸ್ಥೆಗಳಿಂದ ರೈತರು ಪಡೆದ ಅಲ್ಪಾವಧಿ ಬೆಳೆ ಸಾಲದಲ್ಲಿ ಇದೇ ಜುಲೈ 10ರವರೆಗೆ ಹೊರಬಾಕಿ ಮೊತ್ತದಲ್ಲಿ ₹ 1 ಲಕ್ಷವರೆಗಿನ ಮನ್ನಾ ಯೋಜನೆಗೆ ಸಚಿವ ಸಂಪುಟ ಸಭೆ ಗುರುವಾರ ಒಪ್ಪಿಗೆ ನೀಡಿದೆ.

ಈ ಯೋಜನೆಯಿಂದ 20.38 ಲಕ್ಷ ರೈತರಿಗೆ ಅನುಕೂಲವಾಗಲಿದ್ದು, ಬೊಕ್ಕಸದಿಂದ ₹ 9,448 ಕೋಟಿ ವೆಚ್ಚ ಆಗಲಿದೆ.

‘ಒಂದು ಕುಟುಂಬಕ್ಕೆ ಗರಿಷ್ಠ ₹ 1 ಲಕ್ಷ ಸಾಲ ಮನ್ನಾ ಎಂಬ ಷರತ್ತು ಕೈಬಿಡಲಾಗಿದೆ. ಈ ತಕ್ಷಣದಿಂದಲೇ ಯೋಜನೆ ಜಾರಿಗೆ ಬರಲಿದೆ’ ಎಂದು ಸಭೆಯ ಬಳಿಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

‘ರೈತರು ಸಾಲ ಮರುಪಾವತಿ ಮಾಡಿದ್ದರೆ, ಸಾಲದ ಮೊತ್ತ ಅಥವಾ ಗರಿಷ್ಠ ಒಂದು ಲಕ್ಷ ಇದರಲ್ಲಿ ಯಾವುದು ಕಡಿಮೆಯೋ ಅಷ್ಟು ಹಣವನ್ನು ಖಾತೆಗೆ ಜಮಾ ಮಾಡಲಾಗುವುದು’ ಎಂದು ಅವರು ಸ್ಪಷ್ಟಪಡಿಸಿದರು.

‘ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ತೀರ್ಮಾನವನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲೇ ಕೈಗೊಳ್ಳುವುದು. ಮುಂದಿನ ಜುಲೈ– ಆಗಸ್ಟ್ ಒಳಗೆ ರಾಷ್ಟ್ರೀಕೃತ ಬ್ಯಾಂಕಿನ ಸಾಲವನ್ನೂ ತೀರಿಸಲಾಗುವುದು. ಅದಕ್ಕಾಗಿ‌ ರೂಪುರೇಷೆ ಸಿದ್ಧಪಡಿಸುತ್ತಿದ್ದೇನೆ. ನಾಲ್ಕು ವರ್ಷಗಳಲ್ಲಿ ತೀರಿಸಬೇಕಾದ ಮೊತ್ತವನ್ನು ಒಂದೇ ವರ್ಷದಲ್ಲಿ ತೀರಿಸುವ ಗುರಿ ಹಾಕಿಕೊಂಡಿದ್ದೇನೆ’ ಎಂದರು.

ಸಿಹಿ ಸುದ್ದಿ: ‘ಸ್ವಾತಂತ್ರ್ಯ ದಿನಾಚರಣೆ ಅಥವಾ ಗಣಪತಿ ಹಬ್ಬಕ್ಕೆ ರೈತರಿಗೆ, ನಾಡಿನ ಜನತೆಗೆ ಮತ್ತೊಂದು ಸಿಹಿ ಸುದ್ದಿ ನೀಡುತ್ತೇನೆ. ನಾಡಿನ ಜನರನ್ನು ಸಂತುಷ್ಟಿಗೊಳಿಸಬೇಕು, ಅದಕ್ಕಿಂತ ಮುಖ್ಯವಾಗಿ ಬಿಜೆಪಿಯವರನ್ನು ಸಂತುಷ್ಟಿಗೊಳಿಸಬೇಕು’ ಎಂದು ವ್ಯಂಗ್ಯವಾಗಿ ಹೇಳಿದರು.‌

ನಾನು ದುಡ್ಡಿನ ಗಿಡ ನೆಟ್ಟಿಲ್ಲ:‘ಸಾಲ ಮನ್ನಾದ ವಿಚಾರದಲ್ಲಿ ನಾನು ಹುಡುಗಾಟ ಆಡುತ್ತಿಲ್ಲ. ಅದಕ್ಕೆ ಎಷ್ಟು ತರಲೆ, ತಾಪತ್ರಯ ಇದೆ ಎಂಬುದು ನನಗಷ್ಟೇ ಗೊತ್ತು. ಒಮ್ಮೆಲೆ ಹಣ ಹಾಕಲು ನಾನೇನು ದುಡ್ಡಿನ ಗಿಡ ನೆಟ್ಟಿಲ್ಲ’ ಎಂದು ಮುಖ್ಯಮಂತ್ರಿ ಅಸಹಾಯಕತೆ ವ್ಯಕ್ತಪಡಿಸಿದರು.

ಗುರುವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ರಾತ್ರೋ ರಾತ್ರಿ ರೈತರ ಖಾತೆಗೆ ಹಣ ಹಾಕಲು ಆಗುವುದಿಲ್ಲ. ₹ 49 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಘೋಷಣೆ ಮಾಡಿದ್ದೇನೆ. ಅದನ್ನು ತಕ್ಷಣವೇ ಹಾಕಲಾಗುತ್ತದೆಯೇ? ನನ್ನ ಕಷ್ಟ ನನಗೇ ಗೊತ್ತು. ಹಾಗೆಂದು ರೈತರ ಸಾಲ ಮನ್ನಾ ವಿಚಾರ ಮರೆತಿಲ್ಲ. ಈ ವಿಷಯ ಸಂಬಂಧಿಸಿದಂತೆ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ವಹಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT