ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೈವಿಕ ತಂತ್ರಜ್ಞಾನ ನೀತಿ–2024ಕ್ಕೆ ಸಂಪುಟ ಒಪ್ಪಿಗೆ

ಜೀವ ವಿಜ್ಞಾನದ ಉದಯೋನ್ಮುಖ ವಲಯಗಳಿಗೆ ಪ್ರೋತ್ಸಾಹ
Published : 5 ಸೆಪ್ಟೆಂಬರ್ 2024, 23:30 IST
Last Updated : 5 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments

ಬೆಂಗಳೂರು: ಜೈವಿಕ ತಂತ್ರಜ್ಞಾನದ ಉದಯೋನ್ಮುಖ ಕ್ಷೇತ್ರಗಳಿಗೆ ಆದ್ಯತೆ ನೀಡುವ ‘ಕರ್ನಾಟಕ ಜೈವಿಕ ತಂತ್ರಜ್ಞಾನ ನೀತಿ–2024ಕ್ಕೆ’ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು ಈ ಕುರಿತು ವಿವರ ನೀಡಿದರು.

ಜೈವಿಕ ಕೃಷಿ, ಜೈವಿಕ– ಕೈಗಾರಿಕಾ (ಜೈವಿಕ ಶಕ್ತಿ, ಸ್ಮಾರ್ಟ್‌ ಪ್ರೋಟೀನ್‌ ಮತ್ತು ನ್ಯೂಟ್ರಾಸ್ಯುಟಿಕಲ್ಸ್‌) ,ಸಾಗರ ಜೈವಿಕ ತಂತ್ರಜ್ಞಾನ, ಸಿಂಥೆಟಿಕ್ಸ್ ಬಯೋಟೆಕ್ನಾಲಜಿ, ವೈದ್ಯಕೀಯ ಸಾಧನಗಳು ಮತ್ತು ರೋಗ ನಿರ್ಣಯ, ಜೈವಿಕ ತಂತ್ರಜ್ಞಾನದಲ್ಲಿ ಎಐ/ಎಂಎಲ್‌, ಆರೋಗ್ಯಕ್ಕಾಗಿ ಬಹು ಓಮಿಕ್ಸ್‌, ಅಪರೂಪದ ಕಾಯಿಲೆಗಳಿಗೆ ಕೋಶ ಮತ್ತು ಜೀನ್‌ ಚಿಕಿತ್ಸೆಗಳು, ಬಾಹ್ಯಾಕಾಶ ಜೈವಿಕ ತಂತ್ರಜ್ಞಾನಗಳಿಗೆ ಒತ್ತು ಸಿಗಲಿದೆ ಎಂದರು. ಐದು ವರ್ಷಗಳ ಅವಧಿಯ ಹೊಸ ನೀತಿಗೆ ₹100 ಕೋಟಿ ಪ್ರೋತ್ಸಾಹಕ ನೀಡಲಾಗುವುದು ಎಂದರು.

ವಯೋಮಿತಿ ಸಡಲಿಕೆ:

ರಾಜ್ಯ ಸಿವಿಲ್‌ ಸೇವೆಗಳಲ್ಲಿನ ಗ್ರೂಪ್- ಬಿ ಮತ್ತು ಗ್ರೂಪ್ -ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಮೂರು ವರ್ಷಗಳಿಗೆ ಹೆಚ್ಚಿಸಲು, ಒಂದು ಬಾರಿಯ ಕ್ರಮವಾಗಿ ಒಂದು ವರ್ಷದ ಅವಧಿಗೆ ಸಡಿಲಿಸಲು ನಿರ್ಧಾರ. 

ಪ್ರಮುಖ ನಿರ್ಣಯಗಳು: 

* ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ (ಕ್ರೈಸ್) ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲಾ ಕಾಲೇಜುಗಳಿಗೆ ₹18.54 ಕೋಟಿ ಮೊತ್ತದಲ್ಲಿ ಮೂಲ ಸೌಕರ್ಯ 

*ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ 59 ಜೀವಾವಧಿ ಶಿಕ್ಷಗೆ ಒಳಗಾದವರನ್ನು ಸನ್ನಡತೆ ಆಧಾರದ ಮೇಲೆ ಅವಧಿ ಪೂರ್ವ ಬಿಡುಗಡೆ ಮಾಡಲು ನಿರ್ಧಾರ.

* ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿ, ನವೀಕರಣ, ತಿದ್ದುಪಡಿ ಮತ್ತಿತರ ಸೇವೆಗಳಿಗಾಗಿ ಬಳಕೆದಾರರಿಂದ ಸಂಗ್ರಹಿಸಲಾಗುತ್ತಿರುವ ಶುಲ್ಕ, ದಂಡ ಮುಂತಾದ ದರಗಳ ಪರಿಷ್ಕರಣೆಗೆ ಅನುಮೋದನೆ.

* ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ರೇಡಿಯೊ ಥೆರಪಿ ಚಿಕಿತ್ಸಾ ಮತ್ತು ರೋಗ ನಿರ್ಧಾರಕ ಉಪಕರಣಗಳನ್ನು ₹70 ಕೋಟಿ ವೆಚ್ಚದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ.

* ಮೈಸೂರಿನ 40 ಹಾಸಿಗೆ ಸಾಮರ್ಥ್ಯದ ನ್ಯೂರಾಲಜಿ ಆಸ್ಪತ್ರೆಯನ್ನು 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ ₹117.11 ಕೋಟಿ ವೆಚ್ಚದಲ್ಲಿ ಉನ್ನತೀಕರಿಸಲು ಒಪ್ಪಿಗೆ.

* ಕಲಬುರಗಿಯಲ್ಲಿ 150 ಹಾಸಿಗೆ ಸಾಮರ್ಥ್ಯದ ಮಕ್ಕಳ ಆರೋಗ್ಯ ಘಟಕವನ್ನು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ತಾಂತ್ರಿಕ ನೆರವಿನೊಂದಿಗೆ ₹221.51 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು  ಅನುಮೋದನೆ.

* ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸೇವೆಗೆ ಸೇರಿದ ಕೇಂದ್ರ ಸ್ಥಾನ ಸಹಾಯಕರು, ಹಿರಿಯ ಉಪ ನೋಂದಣಾಧಿಕಾರಿ, ಉಪ ನೋಂದಣಾಧಿಕಾರಿಗಳನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲು ನಿಗದಿಪಡಿಸಿದ ಅವಧಿಯನ್ನು ಆ.10 ರಿಂದ ಸೆ.30 ರವರೆಗೆ ವಿಸ್ತರಿಸಲು ಅನುಮೋದನೆ.

* ಸ್ವಸಹಾಯ ಗುಂಪುಗಳ ಸದಸ್ಯರಾಗಿರುವ 1 ಲಕ್ಷ ಮಹಿಳೆಯರಿಗೆ ಕಾಫಿ ಮಂಡಳಿ ಸಹಾಭಾಗಿತ್ವದಲ್ಲಿ ಕಾಫಿ ಉದ್ಯಮಿಗಳಾಗಲು ತರಬೇತಿ ನೀಡುವುದರ ಜತೆಗೆ 200 ಕಾಫಿ ಕಿಯೋಸ್ಕ್‌ಗಳನ್ನು ₹25 ಕೋಟಿ  ವೆಚ್ಚದಲ್ಲಿ ಪ್ರಾರಂಭಿಸಲು ಹಾಗೂ ಸ್ವಸಹಾಯ ಗುಂಪುಗಳ ಮಹಿಳೆಯರ ಮೂಲಕ ನಿರ್ವಹಿಸಲು ಅನುಮೋದನೆ.

*ಮೈಸೂರು ಜಿಲ್ಲೆ ವರುಣ ಹೋಬಳಿ ಚೋರನಹಳ್ಳಿ ಗ್ರಾಮದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಇನ್‌ಕ್ಯುಬೇಷನ್‌ ಸೆಂಟರ್ ಕೌಶಲ ಅಭಿವೃದ್ಧಿ ಕೇಂದ್ರ, ಮೌಲಮಾಪನ ಕೇಂದ್ರ ಮತ್ತು ಎಂಜನಿಯರಿಂಗ್‌ ಪದವೀಧರರಿಗೆ ನವೋದ್ಯಮ ತರಬೇತಿ ನೀಡುವ ಕೇಂದ್ರದ ನಿರ್ಮಾಣ ಕಾಮಗಾರಿಗಳ ಪರಿಷ್ಕೃತ ಅಂದಾಜು ಮೊತ್ತ ₹75.91 ಕೋಟಿಗೆ ಆಡಳಿತಾತ್ಮಕ ಅನುಮೋದನೆ.

* ಉತ್ತರ ಕನ್ನಡ ಜಿಲ್ಲೆಯ ಕಾರವಾರದ ವೈದ್ಯಕೀಯ ವಿಜ್ಞಾನ ಮಹಾ ವಿದ್ಯಾಲಯದ ಆವರಣದಲ್ಲಿ 450 ಹಾಸಿಗೆಗಳ ಆಸ್ಪತ್ರೆ ಮತ್ತು ವಸತಿ ನಿಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ₹198.27 ಕೋಟಿ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ.

* ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕಲಬುರಗಿ ಶಾಖೆಯ ಕಟ್ಟಡ ಕಾಮಗಾರಿಯ ₹262.20 ಕೋಟಿ ಪರಿಷ್ಕೃತ ಅಂದಾಜಿಗೆ ಅನುಮೋದನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT