ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಭಾರ ಪ್ರಾಂಶುಪಾಲ, ಪ್ರಾಧ್ಯಾಪಕರ ಅನ್ಯಕಾರ್ಯ ನಿಯೋಜನೆ ರದ್ದು

Published : 4 ಆಗಸ್ಟ್ 2024, 15:12 IST
Last Updated : 4 ಆಗಸ್ಟ್ 2024, 15:12 IST
ಫಾಲೋ ಮಾಡಿ
Comments

ಬೆಂಗಳೂರು: ನಿಯೋಜನೆಯ ಮೇರೆಗೆ ಇತರ ಕಾಲೇಜುಗಳಲ್ಲಿ ಪ್ರಭಾರ ಪ್ರಾಂಶುಪಾಲ, ಪ್ರಾಧ್ಯಾಪಕ, ಸಹ ಹಾಗೂ ಸಹಾಯಕ‌ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುವವರ ನಿಯುಕ್ತಿ ಆದೇಶವನ್ನು ರದ್ದುಗೊಳಿಸಿರುವ ಕಾಲೇಜು ಶಿಕ್ಷಣ ಇಲಾಖೆ, ತಕ್ಷಣದಿಂದ ಮಾತೃ ಕಾಲೇಜಿಗೆ ಹಿಂದಿರುಗುವಂತೆ ಆದೇಶ ಹೊರಡಿಸಿದೆ.

ರಾಜ್ಯದ ಒಟ್ಟು 31 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಾಧ್ಯಾಪಕರು, ಸಹ ಮತ್ತು ಸಹಾಯಕ ಪ್ರಾಧ್ಯಾಪಕರು ಅನ್ಯ ಕಾರ್ಯ, ಅನ್ಯ ಕಚೇರಿ ಕರ್ತವ್ಯದ ನೆಪದಲ್ಲಿ ನಿಯೋಜನೆ ಮೇರೆಗೆ ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಆ ಎಲ್ಲ ಪ್ರಭಾರ ಪ್ರಾಂಶುಪಾಲರ ಪಟ್ಟಿ ಮಾಡಿರುವ ಇಲಾಖೆ, ಈ ರೀತಿಯ ನಿಯೋಜನೆ ಆದೇಶವನ್ನು ಆಗಸ್ಟ್‌ 3ರಂದು ರದ್ದುಪಡಿಸಿದೆ. ಕೂಡಲೇ ಮೂಲ ಕಾಲೇಜಿಗೆ ಮರಳಬೇಕು ಎಂದೂ ಸೂಚಿಸಿದೆ.

ಪ್ರಭಾರ ಪ್ರಾಂಶುಪಾಲರುಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇಲಾಖೆ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಹೆಸರು ಇಲ್ಲದೇ ಇರುವವರಿಗೂ ಈ ಆದೇಶ ಅನ್ವಯ ಆಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. 

ವಹಿಸಿಕೊಂಡಿರುವ ಪ್ರಭಾರ ಪ್ರಾಂಶುಪಾಲರ ಹೊಣೆಯನ್ನು ಕಾಲೇಜಿನ ಬೋಧಕ ಸೇವಾ ಜೇಷ್ಠತೆಯಲ್ಲಿ ಹಿರಿಯರಾದ ಪ್ರಾಧ್ಯಾಪಕರಿಗೆ ವಹಿಸಿ ಕರ್ತವ್ಯದಿಂದ ಬಿಡುಗಡೆ ಆಗಬೇಕು ಎಂದೂ ಆದೇಶಿಸಲಾಗಿದೆ.

ಇನ್ನು ಕಾಲೇಜು ಶಿಕ್ಷಣ ಇಲಾಖೆಯ ಆಡಳಿತ ವ್ಯಾಪ್ತಿಗೆ ಒಳಪಡುವ ಕೇಂದ್ರ ಕಚೇರಿ, ಪ್ರಾದೇಶಿಕ ಕಚೇರಿ ಮತ್ತು ಇತರ ಕಚೇರಿಗಳಲ್ಲಿ ನಿಯೋಜನೆ ಮೇಲೆ ಕಾರ್ಯಗಳನ್ನು ನಿರ್ವಹಿಸುತ್ತಿರುವ ವಿವಿಧ ವಿಷಯಗಳ 48 ಪ್ರಾಧ್ಯಾಪಕರು, ಸಹ ಮತ್ತು ಸಹಾಯಕ ಪ್ರಾಧ್ಯಾಪಕರ ನಿಯುಕ್ತಿ ಆದೇಶವನ್ನೂ ರದ್ದುಪಡಿಸಲಾಗಿದೆ.

ಈ ಎಲ್ಲ ಬೋಧಕ ಸಿಬ್ಬಂದಿ ತಕ್ಷಣದಿಂದಲೇ ಮಾತೃ ಕಾಲೇಜಿಗೆ ಹಿಂದಿರುಗಬೇಕು ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು ಈ ಕುರಿತ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT