ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಗಳವು: ಆರೋಪಿಗಳ ಬಂಧನ

ಊಟಕ್ಕೆ ಹೋಟೆಲ್‌ಗೆ ಹೋದಾಗ ಸಿಕ್ಕಿಬಿದ್ದ ದೆಹಲಿ ಗ್ಯಾಂಗ್
Last Updated 20 ಫೆಬ್ರುವರಿ 2021, 21:16 IST
ಅಕ್ಷರ ಗಾತ್ರ

ಬೆಂಗಳೂರು: ಪಲ್ಸರ್ ಬೈಕ್‌ನಲ್ಲಿ ನಗರದಲ್ಲಿ ಸುತ್ತಾಡಿ ಸರಗಳವು ಮಾಡಿ ಪರಾರಿಯಾಗುತ್ತಿದ್ದ ದೆಹಲಿ ನಿವಾಸಿಗಳ ಗ್ಯಾಂಗ್‌, ಈಶಾನ್ಯ ಪೊಲೀಸರ ಬಲೆಗೆ ಬಿದ್ದಿದೆ.

‘ಕೃತ್ಯವೆಸಗಿ ಚಿನ್ನಾಭರಣಗಳೊಂದಿಗೆ ನಗರ ತೊರೆಯುತ್ತಿದ್ದ ಆರೋಪಿಗಳು, ಸಾದಹಳ್ಳಿ ಗೇಟ್ ಬಳಿಯ ಹೋಟೆಲ್‌ನಲ್ಲಿ ಊಟಕ್ಕೆ ಬಂದಿದ್ದರು. ಗಸ್ತಿನಲ್ಲಿದ್ದ ಸಿಬ್ಬಂದಿ, ಆರೋಪಿಗಳ ಬಗ್ಗೆ ಅನುಮಾನಗೊಂಡು ವಶಕ್ಕೆ ಪಡೆದಿದ್ದರು. ಹೆಚ್ಚಿನ ವಿಚಾರಣೆ ನಡೆಸಿದಾಗಲೇ ಅವರು ನಡೆಸಿದ್ದ ಕೃತ್ಯ ಬಯಲಾಯಿತು’ ಎಂದು ಪೊಲೀಸರು ಹೇಳಿದರು.

‘ದೆಹಲಿ ಉತ್ತಮ್ ನಗರದ ಸುರೇಶ್‌ಕುಮಾರ್ ಅಲಿಯಾಸ್ ಪಂಡಿತ್ ಸುರೇಶ್ (32), ತಿಮಾರ್‌ಪುರದ ಇರ್ಷಾದ್ ಅಕಿಲ್ (24), ಸಲೀಂ ಮೋಸಿನ್ (22), ಪೂರ್ವ ದೆಹಲಿಯ ಹಸೀನ್‌ಖಾನ್ ಅಲಿಯಾಸ್ ಫೌಜಿ (23), ಅಪ್ರೋಜ್ ಅಲಿಯಾಸ್ ಶಹೀದ್ (25) ಹಾಗೂ ಅವರಿಗೆ ಕೃತ್ಯಕ್ಕೆ ಸಹಕರಿಸುತ್ತಿದ್ದ ಕೇರಳದ ವಯನಾಡು ಜಿಲ್ಲೆಯ ಪಿ.ಕೆ. ಹ್ಯಾರಿಸ್ (37) ಬಂಧಿತರು. ಅವರಿಂದ ₹ 11 ಲಕ್ಷ ಮೌಲ್ಯದ ಆಭರಣ ಹಾಗೂ ಕಾರು ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿದರು.

‘ಫೆ. 16 ಹಾಗೂ 17ರಂದು ಚಿಕ್ಕಜಾಲ, ಬಾಗಲೂರು, ಯಲಹಂಕ, ದೇವನಹಳ್ಳಿ ಹಾಗೂ ಅಮೃತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಸರಣಿ ಸರಗಳವು ನಡೆದಿತ್ತು. ಕಪ್ಪು ಬಣ್ಣದ ಪಲ್ಸರ್‌ನಲ್ಲಿ ಸುತ್ತಾಡಿದ್ದ ಆರೋಪಿಗಳು, ದಾರಿಯಲ್ಲಿ ಹೊರಟಿದ್ದ ಹಾಗೂ ಮನೆ ಎದುರು ನಿಂತಿದ್ದ ಮಹಿಳೆಯರ ಸರ ಕಿತ್ತುಕೊಂಡು ಪರಾರಿಯಾಗಿದ್ದರು.’

‘ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಗಳ ಚಹರೆ ಪತ್ತೆಗೆ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನೂ ಪರಿಶೀಲಿಸಲಾಗಿತ್ತು. ಆದರೆ, ಬೈಕ್‌ ನೋಂದಣಿ ಸಂಖ್ಯೆ ಹಾಗೂ ಆರೋಪಿಗಳ ಚಹರೆ ಅಸ್ಪಷ್ಟವಾಗಿತ್ತು’ ಎಂದೂ ಪೊಲೀಸರು ಹೇಳಿದರು.

ಬೆನ್ನಟ್ಟಿ ಹಿಡಿದ ಸಿಬ್ಬಂದಿ: ‘ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯ ಪರಿಶೀಲನೆಗೆಂದು ಸಿಬ್ಬಂದಿ, ಸಾದಹಳ್ಳಿ ಗೇಟ್‌ ಬಳಿಯ ಹೋಟೆಲೊಂದಕ್ಕೆ ಹೋಗಿದ್ದರು. ಅದೇ ಹೋಟೆಲ್‌ಗೆ ಆರೋಪಿಗಳು ಊಟಕ್ಕೆ ಬಂದಿದ್ದರು. ಊಟ ಮುಗಿಸಿಕೊಂಡು ನಗರ ತೊರೆಯುವುದು ಅವರ ಉದ್ದೇಶವಾಗಿತ್ತು’ ಎಂದೂ ಪೊಲೀಸರು ತಿಳಿಸಿದರು.

‘ಆರೋಪಿಗಳ ವರ್ತನೆ ಗಮನಿಸಿ ಅನುಮಾನಗೊಂಡಿದ್ದ ಸಿಬ್ಬಂದಿ, ಅವರನ್ನು ಹಿಡಿದುಕೊಳ್ಳಲು ಮುಂದಾಗಿದ್ದರು. ಆರೋಪಿಗಳು ತಪ್ಪಿಸಿಕೊಂಡು ಓಡಲಾರಂಭಿಸಿದ್ದರು. ಸಿಬ್ಬಂದಿ, ಅವರನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಅವರ ಜೇಬಿನಲ್ಲೇ ಚಿನ್ನದ ಮಾಂಗಲ್ಯ ಸರಗಳು ಪತ್ತೆಯಾದವು’ ಎಂದೂ ಹೇಳಿದರು.

24 ಪ್ರಕರಣಗಳಲ್ಲಿ ಬೇಕಿದ್ದ ಆರೋಪಿ: ‘ಬಂಧಿತ ಸುರೇಶ್‌ಕುಮಾರ್ ವಿರುದ್ಧ 24 ಪ್ರಕರಣ ಹಾಗೂ ಇನ್ನೊಬ್ಬ ಆರೋಪಿ ಸಲೀಂ ಮೋಸಿನ್ ವಿರುದ್ಧ 21 ಪ್ರಕರಣಗಳು ದಾಖಲಾಗಿವೆ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT