ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಋಣ ತೀರಿಸಲು ಬಾಗ್ಮನೆಗೆ ಜಮೀನು ನೀಡಿದರೆ?: ಎಂ.ಬಿ.ಪಾಟೀಲಗೆ ಛಲವಾದಿ ಪ್ರಶ್ನೆ

ಕೈಗಾರಿಕಾ ಸಚಿವ ಎಂ.ಬಿ.ಪಾಟೀಲಗೆ ಛಲವಾದಿ ಪ್ರಶ್ನೆ
Published : 2 ಸೆಪ್ಟೆಂಬರ್ 2024, 15:32 IST
Last Updated : 2 ಸೆಪ್ಟೆಂಬರ್ 2024, 15:32 IST
ಫಾಲೋ ಮಾಡಿ
Comments

ಬೆಂಗಳೂರು: ‘ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಬಾಗ್ಮನೆ ಡೆವಲಪರ್ಸ್‌ ಕಡೆಯಿಂದ ₹4 ಕೋಟಿ ಸಾಲ ಪಡೆದಿದ್ದಕ್ಕೆ ಪ್ರತಿಯಾಗಿ ಅದೇ ಕಂಪನಿಯ ನಿರ್ದೇಶಕರಾಗಿರುವ ವೈಗೈ ಇನ್ವೆಸ್ಟ್‌ಮೆಂಟ್ ಪ್ರೈ.ಲಿ ಇವರಿಗೆ ಹೈಟೆಕ್‌ ಡಿಫೆನ್ಸ್‌ ಎಸ್‌ಇಝಡ್‌ ಪಾರ್ಕ್‌ನಲ್ಲಿ 8 ಎಕರೆ ಜಮೀನು ನೀಡಲಾಗಿದೆಯೇ’ ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಆರೋಪಗಳಿಗೆ ಪೂರಕ ದಾಖಲೆಗಳನ್ನೂ ಬಿಡುಗಡೆ ಮಾಡಿದರು.

‘ಸಾಲ ಪಡೆದಿರುವ ವಿಚಾರವನ್ನು ಅವರು ಚುನಾವಣಾ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸಾಲ ಪಡೆದಿದ್ದಕ್ಕೆ ಸಚಿವರು ಋಣ ಸಂದಾಯ ಮಾಡಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದರು.

ಸುಮಾರು ₹160 ಕೋಟಿ ಬೆಲೆ ಬಾಳುವ ಎಂಟು ಎಕರೆ ಜಮೀನನ್ನು ಇದೇ ಫೆಬ್ರುವರಿಯಲ್ಲಿ ಬಾಗ್ಮನೆಯವರಿಗೆ ಸೇರಿದ ವೈಗೈ ಸಂಸ್ಥೆಗೆ ಹಂಚಿಕೆ ಮಾಡಿದ್ದಾರೆ. ಈ ಕಂಪನಿಯ ನಿರ್ದೇಶಕರಾದ ರಾಜಾ ಬಾಗ್ಮನೆ ಮತ್ತು ದಂಡಿಗಾನಹಳ್ಳಿ ರಾಮಕೃಷ್ಣಪ್ಪ ಅವರು ಬಾಗ್ಮನೆ ಕಂಪನಿಗೂ ನಿರ್ದೇಶಕರಾಗಿದ್ದಾರೆ ಎಂದು ವಿವರಿಸಿದರು.

‘ಮತ್ತೊಂದು ಪ್ರಕರಣದಲ್ಲಿ ಹರಿತಾ ಲಾಜಿಸ್ಟಿಕ್ಸ್‌ ವೇರ್‌ಹೌಸ್ ಪ್ರೈ.ಲಿ.ಗೆ 10 ಎಕರೆ ಸಿ.ಎ ನಿವೇಶನ ಹಂಚಿಕೆ ಮಾಡಲಾಗಿದೆ. ಇದು ತೆಲಂಗಾಣದ ಮಿರ್ಜಾಪುರ್‌ ಮೂಲದ ಕಂಪನಿ. ತೆಲಂಗಾಣದವರಿಗೆ ಕರ್ನಾಟಕದ ಕೈಗಾರಿಕಾ ಪ್ರದೇಶದಲ್ಲಿ ಸಿ.ಎ ನಿವೇಶನ ಏಕೆ ಕೊಡಬೇಕು? ಸಿ.ಎ ನಿವೇಶನಗಳನ್ನು ಕನ್ನಡಿಗರಿಗೆ ಕೊಡಬೇಕು. ಅಪಾರ್ಟ್‌ಮೆಂಟ್‌ ನಿರ್ಮಿಸಲು ಇವರು ಜಮೀನು ಕೊಟ್ಟಿದ್ದಾರೆ. ಡಿಫೆನ್ಸ್‌ ಏರೋಸ್ಪೇಸ್‌ ಪಾರ್ಕ್‌ನಲ್ಲಿ ಎಷ್ಟು ಕಂಪನಿಗಳಿಗೆ ವಸತಿ ಯೋಜನೆಗೆ ಸಿ.ಎ ನಿವೇಶನ ಕೊಡುತ್ತೀರಿ? ಎಷ್ಟು ಜನರಿಗೆ ಸಂಶೋಧನೆ ಮತ್ತು ಅಭಿವೃದ್ಧಿಗೆ ನಿವೇಶನ ಕೊಡುತ್ತೀರಿ ಎಂದು ನಾರಾಯಣಸ್ವಾಮಿ ಪ್ರಶ್ನಿಸಿದರು.

‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ದಲಿತ –ದಲಿತರ ಮಧ್ಯೆ ಬಡಿದಾಡಿಸುತ್ತಿದ್ದಾರೆ’ ಎಂಬ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ನಾರಾಯಣಸ್ವಾಮಿ, ‘ನಾನು ಕಾನ್ವೆಂಟ್‌ನಲ್ಲಿ ಓದಿಲ್ಲದೇ ಇರಬಹುದು. ಆದರೆ, ಹೆಬ್ಬೆಟ್ಟು ಅಲ್ಲ. ನನಗೆ ಕಾಮನ್‌ಸೆನ್ಸ್‌ ಇದೆ. ಬಿಜೆಪಿಯಾಗಲಿ, ಆರ್‌ಎಸ್‌ಎಸ್‌ ಆಗಲಿ ನನ್ನನ್ನು ಬಳಕೆ ಮಾಡುತ್ತಿಲ್ಲ. ಕಾಂಗ್ರೆಸ್‌ ಸರ್ಕಾರದ ಅಕ್ರಮಗಳನ್ನು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕನಾಗಿ ಜನರ ಗಮನಕ್ಕೆ ತರುತ್ತಿದ್ದೇನೆ. ಜಾತಿ ರಕ್ಷಣೆ ಪಡೆಯುವ ಪ್ರಯತ್ನ ಮಾಡುತ್ತಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT