ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕಳ್ಳರ ಭ್ರಮೆಯಿಂದ ಹೊರ ಬರದ ಕಮಲನಗರದ ಗ್ರಾಮಸ್ಥರು

ಮುರ್ಕಿ, ಹಂದಿಕೇರಾ, ಬಟಕೂಳದಲ್ಲಿ ಮನೆ ಮಾಡಿದ ಆತಂಕ
Last Updated 19 ಜುಲೈ 2018, 18:05 IST
ಅಕ್ಷರ ಗಾತ್ರ

ಬೀದರ್‌: ಮಕ್ಕಳ ಕಳ್ಳರೆಂದು ಭಾವಿಸಿ ಅಮಾಯಕರ ಮೇಲೆ ಹಲ್ಲೆ ನಡೆಸಿ ವ್ಯಕ್ತಿಯ ಸಾವಿಗೆ ಕಾರಣವಾದ ಘಟನೆ ನಡೆದು ಆರು ದಿನಗಳು ಕಳೆದಿವೆ. ಆದರೆ, ಕಮಲನಗರ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಈಗಲೂ ಭಯದ ವಾತಾವರಣ ಇದೆ. ಮುರ್ಕಿ ಹಾಗೂ ಬಟಕೂಳ ತಾಂಡಾದ ನಿವಾಸಿಗಳು ಈಚೆಗೆ ಹೈದರಾಬಾದ್‌ನಿಂದ ಬಂದಿದ್ದವರು ಮಕ್ಕಳ ಕಳ್ಳರಲ್ಲ ಎನ್ನುವುದನ್ನು ಈಗಲೂ ನಂಬುತ್ತಿಲ್ಲ.

ಮುರ್ಕಿಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮಕ್ಕಳು ಏನನ್ನೂ ಹೇಳಲು ಸಿದ್ಧರಿಲ್ಲ. ತಾಂಡಾದ ಕೆಲ ಮಕ್ಕಳು ಶಾಲೆಗೆ ಬರುತ್ತಿಲ್ಲ. ಕೆಲ ವ್ಯಕ್ತಿಗಳು ಬಂಧನದ ಭೀತಿಯಿಂದ ಕುಟುಂಬದೊಂದಿಗೆ ಊರು ತೊರೆದಿದ್ದಾರೆ.

ಮುರ್ಕಿಯಲ್ಲಿ ಒಂದು ವಾರದ ಹಿಂದೆಯಷ್ಟೇ ಅಂಗಡಿಗಳ ಬೀಗ ಮುರಿದು ಸರಣಿ ಕಳ್ಳತನ ನಡೆದಿತ್ತು. ಗ್ರಾಮದ ಪರಿಸದಲ್ಲಿ ಕಳ್ಳರು ಅಲೆದಾಡುತ್ತಿದ್ದಾರೆ ಎನ್ನುವ ಅನುಮಾನ ಅವರಲ್ಲಿ ಇತ್ತು.

ಜುಲೈ 13ರಂದು ಕಮಲನಗರ ತಾಲ್ಲೂಕಿನ ಹಂದಿಕೇರಾದ ಮಹಮ್ಮದ್‌ ಅಫ್ರೋಜ್‌ ಅವರು ಕತಾರ್‌ನಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿರುವ ಸಲಾಂ, ಹೈದರಾಬಾದ್‌ನ ಆಜಂ ಉಸ್ಮಾನ್ ಹಾಗೂ ಮಹಮ್ಮದ್ ಸಲ್ಮಾನ್ ಅವರನ್ನು ಊಟಕ್ಕೆ ಮನೆಗೆ ಆಹ್ವಾನಿಸಿದ್ದರು.

ಹೊಸ ಕಾರು ಬಾಡಿಗೆ ಪಡೆದು ಹಂದಿಕೇರಾಕ್ಕೆ ಬಂದಿದ್ದ ಇವರು ಅಡಿಗೆ ಸಿದ್ಧವಾಗುವವರೆಗೂ ಸಮೀಪದ
ಚೆಕ್‌ಡ್ಯಾಂ ನೋಡಲು ಹೋಗುತ್ತಿದ್ದಾಗ ಸಲಾಂ ವಿದೇಶದಿಂದ ತಂದಿದ್ದ ಚಾಕೊಲೇಟ್‌ನ್ನು ಶಾಲೆಯಿಂದ ಮನೆಗೆ ಹೋಗುತ್ತಿದ್ದ ಮಕ್ಕಳತ್ತ ಎಸೆದಿದ್ದರು.

‘ಚೆಕ್‌ಡ್ಯಾಂ ಬಳಿ ವಾಹನ ನಿಲ್ಲಿಸಿದ ಕೆಲವೇ ಹೊತ್ತಿನಲ್ಲಿ ಮೂವರು ಅಲ್ಲಿಗೆ ಬಂದು ಮಕ್ಕಳ ಕಳ್ಳರೆಂದು ಭಾವಿಸಿ ವಾಹನದ ಗಾಳಿ ಬಿಡಲು ಯತ್ನಿಸಿದರು. ದೂರದಲ್ಲಿದ್ದ ನಾವು ವಾಹನದತ್ತ ಓಡಿ ಬಂದು ಆಕ್ಷೇಪ ವ್ಯಕ್ತಪಡಿಸಿದೇವು. ಅವರೆಲ್ಲ ಏಕಾಏಕಿ ನಮ್ಮ ಮೇಲೆ ದಾಳಿ ನಡೆಸಿದರು’ ಎಂದು ಮಹಮ್ಮದ್‌ ಅಫ್ರೋಜ್‌ ತಿಳಿಸಿದರು.

‘ಇದ್ದಕ್ಕಿದ್ದಂತೆಯೇ ಹೆಚ್ಚು ಜನ ಸೇರ ತೊಡಗಿದರು. ಜನ ಹೆಚ್ಚಾದಂತೆ ಅಲ್ಲಿ ನೆರೆದವರ ಮನಸ್ಥಿತಿ ಬದಲಾಗತೊಡಗಿತು. ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯುತ್ತಿರುವುದು ಮನವರಿಕೆಯಾದ  ತಕ್ಷಣ ಮೂವರೂ ನನ್ನನ್ನು ಬಿಟ್ಟು ಕಾರಿನಲ್ಲಿ ವೇಗವಾಗಿ ಹೋಗಿಬಿಟ್ಟರು’ ಎಂದು ಹೇಳಿದರು.

‘ಬಟಕೂಳ ತಾಂಡಾದ ವ್ಯಕ್ತಿಯೊಬ್ಬ ಮುರ್ಕಿಯ ವ್ಯಕ್ತಿಗೆ ದೂರವಾಣಿ ಕರೆ ಮಾಡಿ ವಾಹನದ ಡಿಕ್ಕಿಯಲ್ಲಿ ಇಬ್ಬರು ಮಕ್ಕಳು ಇದ್ದಾರೆ. ತಕ್ಷಣ ವಾಹನ ತಡೆಯಿರಿ ಎಂದುಹೇಳಿದ. ಹೀಗಾಗಿ ಮುರ್ಕಿ ಗ್ರಾಮಸ್ಥರು ರಸ್ತೆ ಮೇಲೆ ಮರದ ತುಂಡು ಇಟ್ಟು ಅವರನ್ನು ತಡೆಯಲು ಪ್ರಯತ್ನಿಸಿದ್ದರು. ಸಲಾಂ, ಗಾಬರಿಯಿಂದ ವಾಹನ
ವೇಗವಾಗಿ ಓಡಿಸಿದಾಗ ಮುಂದಿದ್ದ ವಾಹನಕ್ಕೆ ಡಿಕ್ಕಿ ಹೊಡೆದು, ನಂತರ ಮರದ ತುಂಡಿನ ಮೇಲಿಂದ ಹಾಯ್ದು ಚಿಕ್ಕ ಸೇತುವೆ ಕೆಳಗೆ ಬಿದ್ದಿತು. ನಂತರ ನಡೆಯಬಾರದ್ದು ನಡೆದು ಹೋಯಿತು’ ಎಂದು ತಿಳಿಸಿದರು.

‘ಒಂದು ವಾರದ ಹಿಂದೆ ನಡೆದಿದ್ದ ಕಳ್ಳತನ ಹಾಗೂ ನಮ್ಮ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಜನರ ಆಕ್ರೋಶಕ್ಕೆ ಕಾರಣವಾಯಿತು. ಮುರ್ಕಿಯ ವ್ಯಕ್ತಿಯೊಬ್ಬ ವಾಹನದಲ್ಲಿದ್ದ ಮಹಮ್ಮದ್‌ ಆಜಂ ಉಸ್ಮಾನಸಾಬ(28) ಅವರ ಕೈಗೆ ಹಗ್ಗ ಕಟ್ಟಿ ಹೊರಗೆ ಎಳೆದು ತಂದ. ಕೆಲವರು ಕಾರಿನ ಮೇಲೆ ಕಲ್ಲು ತೂರಿದರು. ಪೊಲೀಸರು ಜನರನ್ನು ತಡೆಯಲು ಪ್ರಯತ್ನಿಸಿದರೂ ಆಜಂನನ್ನು ಬಡಿಗೆಯಿಂದ ಹೊಡೆದು ಕೊಂದು ಬಿಟ್ಟರು’ ಎಂದು ಮಹಮ್ಮದ್‌ ಸಲ್ಮಾನ್‌ತಿಳಿಸಿದರು.

‘ಪೊಲೀಸರು ಸ್ಥಳದಲ್ಲಿ ಇರದಿದ್ದರೆ ನಮ್ಮನ್ನೂ ಕೊಂದು ಬಿಡುತ್ತಿದ್ದರು. ಪೊಲೀಸರೇ ನಮಗೆ ಔರಾದ್‌ನಲ್ಲಿ ಚಿಕಿತ್ಸೆ ಕೊಡಿಸಿ ಹೈದರಾಬಾದ್‌ಗೆ ಕಳಿಸಿದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT