ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ಕಡತದಲ್ಲೇ ಇದೆ ತುಮಕೂರಿನ ಚಿಂಕಾರ ವನ್ಯಧಾಮ

ಚಿಕ್ಕನಾಯಕನಹಳ್ಳಿ, ಶಿರಾ ತಾಲ್ಲೂಕಿನಲ್ಲಿ ಹರಡಿರುವ ಬುಕ್ಕಾಪಟ್ಟಣ, ಮುತ್ತುಗದಹಳ್ಳಿ ಕಾಡು
Last Updated 3 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ರೂಪುಗೊಳ್ಳಬೇಕಾಗಿದ್ದ ಚಿಂಕಾರ (ಸಣ್ಣ ಹುಲ್ಲೆ) ವನ್ಯಜೀವಿಧಾಮಕ್ಕೆರಾಜ್ಯ ಸರ್ಕಾರದ ನಿರಾಸಕ್ತಿಯ ಕಾರಣ ಗ್ರಹಣ ಹಿಡಿದಿದೆ. ಈ ಧಾಮ ರೂಪುಗೊಂಡರೆ ರಾಜ್ಯದ ಎರಡನೇ ‘ಚಿಂಕಾರ’ ವನ್ಯಜೀವಿ ತಾಣ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗುತ್ತದೆ.

ಮೈಸೂರಿನ ನೇಚರ್ ಕನ್ಸರ್ವೇಷನ್‌ ಫೌಂಡೇಷನ್‌ ಸಂಸ್ಥೆಯ ವನ್ಯಜೀವಿ ವಿಜ್ಞಾನಿ ಹಾಗೂ ಜಿಲ್ಲೆಯವರೇ ಆದ ಸಂಜಯ್ ಗುಬ್ಬಿ ಚಿಕ್ಕನಾಯಕನಹಳ್ಳಿ ಮತ್ತು ಶಿರಾ ತಾಲ್ಲೂಕಿನಲ್ಲಿ ಹರಡಿರುವ ಬುಕ್ಕಾಪಟ್ಟಣ, ಮುತ್ತುಗದಹಳ್ಳಿ ಕಾಡುಗಳಲ್ಲಿ ಚಿಂಕಾರಗಳನ್ನು ದಾಖಲಿಸಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿಯೇ ಚಿಂಕಾರಗಳು ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ದಾಖಲಾಗಿವೆ ಎನ್ನುವುದು ವಿಶೇಷ.

ಈ ಗುಡ್ಡ ಪ್ರದೇಶದಲ್ಲಿ ಬೇರೆ ಬೇರೆ ಜಾತಿಯ ಮೇವು ಸಾಕಷ್ಟು ಬೆಳೆಯುತ್ತದೆ. ಈ ಪ್ರದೇಶ ಚಿಂಕಾರಗಳಿಗೆ ಪ್ರಶಸ್ತವಾದ ಆವಾಸ ತಾಣವಾಗಿದೆ.

ಈ ಆಧಾರದಲ್ಲಿ ಸುಮಾರು 190 ಚದರ ಕಿಲೋಮೀಟರ್ ಕಾಡನ್ನು ಚಿಂಕಾರ ವನ್ಯಜೀವಿಧಾಮ‌ವಾಗಿ ಘೋಷಿಸಬೇಕು ಎಂದು 2016ರ ಡಿಸೆಂಬರ್‌ನಲ್ಲಿ ನೇಚರ್ ಕನ್ಸರ್ವೇಷನ್‌ ಫೌಂಡೇಷನ್‌ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ನೀಡಿತ್ತು. ಎರಡು ವರ್ಷ ಹತ್ತಿರವಾಗುತ್ತಿದ್ದರೂ ಕಡತ ದೂಳು ಹಿಡಿಯುತ್ತಿದೆ.

ದೇಶದ 80 ಕಡೆ ವನ್ಯಧಾಮ: ‘ಸಣ್ಣ ಹುಲ್ಲೆ’ಯನ್ನು ಇಂಗ್ಲಿಷ್‌ನಲ್ಲಿ ಚಿಂಕಾರ ಅಥವಾ ಇಂಡಿಯನ್ ಗೆಜೆಲ್ ಎಂದು ಕರೆಯಲಾಗುತ್ತದೆ. ದೇಶದ 80 ಕಡೆ ಚಿಂಕಾರ ವನ್ಯಧಾಮ ಇವೆ. ರಾಜ್ಯದ ಬಾಗಲಕೋಟೆಯ ಎಡಹಳ್ಳಿ ಬಳಿ 2016ರಲ್ಲಿ ಚಿಂಕಾರ ವನ್ಯಜೀವಿಧಾಮ ರೂಪಿಸಲಾಗಿದೆ.

‘ಬುಕ್ಕಾಪಟ್ಟಣ, ಮಂಚಲದೊರೆ ಅರಣ್ಯದಲ್ಲಿ ಚಿಂಕಾರಗಳು ಹೆಚ್ಚಿವೆ. ಇತ್ತೀಚಿನ ವರ್ಷಗಳಲ್ಲಿ ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಳ್ಗಿಚ್ಚು ಸಂಭವಿಸುತ್ತಿದೆ. ಕಲ್ಲು ಗಣಿಗಾರಿಕೆ, ಮರಳು ಗಣಿಗಾರಿಕೆ, ಮರಗಳ ಕಳ್ಳ ಸಾಗಾಣೆ ಮತ್ತು ಚಿಂಕಾರ, ಕಾಡುಕುರಿ, ಕೃಷ್ಣಮೃಗ, ಕಡವೆಗಳ ಅನಿಯಂತ್ರಿತ ಬೇಟೆಯೂ ನಡೆಯುತ್ತಿದೆ’ ಎನ್ನುತ್ತಾರೆ ತುಮಕೂರಿನ ವನ್ಯಜೀವಿ ತಜ್ಞ ಬಿ.ವಿ.ಗುಂಡಪ್ಪ.

‘ಕುರಿ, ಮೇಕೆಗಳನ್ನು ಕಾಡುಗಳಲ್ಲಿ ಅತಿಯಾಗಿ ಮೇಯಿಸುವುದೂ ಹುಲ್ಲೆಗಳ ಆಹಾರದ ಮೇಲೆ ಪರಿಣಾಮ ಬೀರುತ್ತಿದೆ. ಅಭಯಾರಣ್ಯ ಎಂದು ಘೋಷಿಸಿದರೆ ಕಾಯ್ದೆಗಳ ಪರಿಣಾಮದಿಂದ ಆಸುಪಾಸಿನ ಹಳ್ಳಿಗಳ ಜನರಲ್ಲಿ ಭಯ ಮೂಡುತ್ತದೆ. ಈ ಪ್ರಾಣಿಗಳ ಉಳಿವಿಗೂ ಸಹಕಾರಿಯಾಗುತ್ತದೆ’ ಎಂದು ಅವರು ಹೇಳುತ್ತಾರೆ.

ಶಿರಾ ಮತ್ತು ಹುಳಿಯಾರು ನಡುವೆ ಒಂದೂವರೆ ಸಾವಿರ ಎಕರೆಯಲ್ಲಿರುವ ಧರ್ಮವೀರ ಫಾರಂ, ದಬ್ಬಗುಂಟೆ, ರಾಮನಗರ, ಮರೆನಡುಪಾಳ್ಯ ಹಾದು ಮುತ್ತುಗದಹಳ್ಳಿ ಅರಣ್ಯ ಸಂಪರ್ಕಿಸುತ್ತದೆ. ತೋಟಗಾರಿಕಾ ಇಲಾಖೆ ವ್ಯಾಪ್ತಿಯಲ್ಲಿರುವ ಫಾರಂ ಅನ್ನು ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿಸುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಒಂದು ವೇಳೆ ಅದು ಸೇರಿದರೆ ಚಿಂಕಾರ ವನ್ಯಜೀವಿಧಾಮ ರಚನೆಗೆ ಮತ್ತಷ್ಟು ಅನುಕೂಲವಾಗಲಿದೆ ಎನ್ನುತ್ತವೆ ಅರಣ್ಯ ಇಲಾಖೆ ಮೂಲಗಳು.

ಪ್ರಧಾನ ಕಾರ್ಯದರ್ಶಿಗೆ ಮನವರಿಕೆ
‘ಇತ್ತೀಚೆಗೆ ಈ ಅರಣ್ಯ ಭಾಗಕ್ಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಭೇಟಿ ನೀಡಿದ್ದರು. ಆಗ ‘ಸಣ್ಣ ಹುಲ್ಲೆ’ ವನ್ಯಜೀವಿಧಾಮದ ಪ್ರಸ್ತಾವದ ಬಗ್ಗೆ ತಿಳಿಸಿದೆವು. ವನ್ಯಜೀವಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸುವ ಭರವಸೆ ನೀಡಿದ್ದಾರೆ’ ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಾಮಲಿಂಗೇಗೌಡ ಮಾಹಿತಿ ನೀಡಿದರು.

‘ನಾನು ಕೋಲಾರ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದಾಗ ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಬಳಿಯೂ ವನ್ಯಜೀವಿಧಾಮದ ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಲಾಗಿತ್ತು. ಈ ಎರಡೂ ಧಾಮಗಳ ಬಗ್ಗೆ ಮಂಡಳಿಯಲ್ಲಿ ಪ್ರಸ್ತಾಪವಾಗಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಚಿರತೆ ಅಧ್ಯಯನದ ವೇಳೆ ಕಂಡ ಚಿಂಕಾರ
‘ನಮ್ಮ ಊರಿನಲ್ಲಿ ವನ್ಯಜೀವಿಗಳ ವೈಜ್ಞಾನಿಕ ಅಧ್ಯಯನ ಮಾಡಬೇಕು ಎಂಬ ಹಂಬಲಕ್ಕೆ ಚಿರತೆಯ ಮೇಲಿನ ಅಧ್ಯಯನ ಅನುವು ಮಾಡಿಕೊಟ್ಟಿತು. ನಾನು ದಶಕಗಳಿಂದ ತಿರುಗಿದ್ದ ಕಾಡುಗಳಲ್ಲಿ ವೈಜ್ಞಾನಿಕವಾಗಿ ಕೆಲಸ ಮಾಡಲು ಪ್ರಾರಂಭಿಸಿದೆ’ ಎನ್ನುತ್ತಾರೆ ಸಂಜಯ್ ಗುಬ್ಬಿ.

‘ತುಮಕೂರು, ಕೊರಟಗೆರೆ, ಮಧುಗಿರಿ, ಪಾವಗಡ, ಗುಬ್ಬಿ, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಶಿರಾ ಎಲ್ಲ ಕಡೆಯೂ ಚಿರತೆ, ಅದರ ಬಲಿ ಪ್ರಾಣಿಗಳು ಮತ್ತು ಅವುಗಳ ಆವಾಸ ಸ್ಥಾನದ ಮೇಲೆ ಅಧ್ಯಯನ ನಡೆಸಿದೆವು. ಆ ಸಮಯದಲ್ಲಿ ಸಣ್ಣ ಹುಲ್ಲೆಗಳು ಇಲ್ಲಿ ಹೆಚ್ಚು ಕಂಡುಬಂದವು’ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT