ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಕವಾಡಿಗರಹಟ್ಟಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಕಲುಷಿತ ನೀರು ಪೂರೈಸಿದರೆ ಅಧಿಕಾರಿಯೇ ಹೊಣೆ ಎಂದು ಎಚ್ಚರ
Published 6 ಅಕ್ಟೋಬರ್ 2023, 8:20 IST
Last Updated 6 ಅಕ್ಟೋಬರ್ 2023, 8:20 IST
ಅಕ್ಷರ ಗಾತ್ರ

ಚಿತ್ರದುರ್ಗ: ಶುದ್ಧ ನೀರು ಪೂರೈಕೆ ಮಾಡಿದ್ದರೆ ಕವಾಡಿಗರಹಟ್ಟಿ ದುರಂತ ಸಂಭವಿಸುತ್ತಿರಲಿಲ್ಲ. ಜನರಿಗೆ ಕಲುಷಿತ ನೀರು ಪೂರೈಕೆ ಮಾಡಿದರೆ ಸಂಬಂಧಿಸಿದ ಅಧಿಕಾರಿ ವಿರುದ್ಧವೇ ಶಿಸ್ತು ಕ್ರಮ ಜರುಗಿಸಲಾಗುವುದು. ಯಾವುದೇ ಮುಲಾಜು ನೋಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಕಲುಷಿತ ನೀರು ಕುಡಿದು ಆರು ಜನರು ಮೃತಪಟ್ಟಿರುವ 17ನೇ ವಾರ್ಡ್ ವ್ಯಾಪ್ತಿಯ ಕವಾಡಿಗರಹಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಭೇಟಿ ನೀಡಿ ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

'ಮೃತರ ಕುಟುಂಬದ ಸದಸ್ಯರಲ್ಲಿ ಒಬ್ಬರಿಗೆ ಸರ್ಕಾರದಿಂದ ಉದ್ಯೋಗ ನೀಡಲಾಗುವುದು. ಮೂರು ಎಕರೆಯಲ್ಲಿ ಬಡಾವಣೆ ಅಭಿವೃದ್ಧಿಪಡಿಸಿ ನಿವೇಶನ ಹಾಗೂ ಮನೆ ನೀಡಲಾಗುವುದು. ದುರಂತದಲ್ಲಿ ಸಂಕಷ್ಟ ಎದುರಿಸಿದ ಕುಟುಂಬದ ಜೊತೆ ಸರ್ಕಾರ ಇದೆ' ಎಂದು ಧೈರ್ಯ ತುಂಬಿದರು.

'ಆ.1 ರಂದು ಕಲಯಷಿತ ನೀರು ಕುಡಿದು 241 ಜನರು ಅಸ್ವಸ್ಥ ಆಗಿದ್ದರು. ಪರಿಶಿಷ್ಟ ಜಾತಿಗೆ ಸೇರಿದ ಬಹುತೇಕರು ಬಡವರು. ವಿಷಯ ಗಮನಕ್ಕೆ ಬಂದ ತಕ್ಷಣವೇ ಸಚಿವರು, ಶಾಸಕರು ಹಾಗೂ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿದ್ದೆ. ಜನರ ಅಗತ್ಯ ಪೂರೈಕೆ ಮಾಡಲು ಸರ್ಕಾರ ಪ್ರಯತ್ನ ಮಾಡಿದೆ. ಶುದ್ಧ ನೀರು ಕೊಡುವುದು ಸರ್ಕಾರದ ಜವಾಬ್ದಾರಿ. ಶುದ್ಧ ನೀರು ಕೊಟ್ಟಿದ್ದರೆ ಇಂತಹ ದುರಂತ ಸಂಭವಿಸುತ್ತಿರಲಿಲ್ಲ. ಇಂತಹ ತಪ್ಪು ಮತ್ತೆ ಮರುಕಳುಹಿಸಬಾರದು' ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

40 ಲಕ್ಷ ಹೆಕ್ಟೇರ್ ಬೆಳೆನಷ್ಟ

ರಾಜ್ಯದಲ್ಲಿ 122 ವರ್ಷಗಳ ಬಳಿಕ ಭೀಕರ ಬರ ಪರಿಸ್ಥಿತಿ ತಲೆದೋರಿದೆ. 236 ತಾಲ್ಲೂಕು ಪೈಕಿ 195 ತಾಲ್ಲೂಕು ಬರಪೀಡಿತ ಎಂಬುದಾಗಿ ಘೋಷಣೆ ಮಾಡಲಾಗಿದೆ. ಮತ್ತೊಂದು ಸುತ್ತಿನ ಬರ ಘೋಷಣೆಗೆ ಸಿದ್ಧತೆ ನಡೆಯುತ್ತಿದೆ. ಸೋಮವಾರದ ವೇಳೆಗೆ ಇನ್ನೂ ಕೆಲ ತಾಲ್ಲೂಕು ಬರಪೀಡಿತ ಪಟ್ಟಿಗೆ ಸೇರ್ಪಡೆ ಆಗಲಿವೆ' ಎಂದು ಹೇಳಿದರು.

'ಇಡೀ ದೇಶದಲ್ಲಿ ಮಳೆಯಾಗಿಲ್ಲ. ಮಲೆನಾಡು, ಕರಾವಳಿಯಲ್ಲಿ ಕೂಡ ಮಳೆ ಇಲ್ಲ. ಕೇರಳ, ಮಹಾರಾಷ್ಟ್ರ ಸೇರಿ ಅನೇಕರ ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿದೆ. ಕಾವೇರಿ ಕಣಿವೆಯಲ್ಲಿ ನೀರು ಇಲ್ಲ. ರಾಜ್ಯದಲ್ಲಿ 42 ಲಕ್ಷ ಹೆಕ್ಟೇರ್ ಬೆಳೆ ನಷ್ಟ ಆಗಿದ್ದು, ₹ 30 ಸಾವಿರ ಕೋಟಿ ನಷ್ಟ ಉಂಟಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಯಮದ ಪ್ರಕಾರ ₹ 4,860 ಲಕ್ಷ ಕೋಟಿ ಪರಿಹಾರಕ್ಕೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ' ಎಂದು ಹೇಳಿದರು.

ಕೃಷಿ ಸಚಿವ ಚಲುವರಾಯಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರಾದ ಟಿ.ರಘುಮೂರ್ತಿ, ಬಿ.ಜಿ.ಗೋವಿಂದಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ, ಉಪಾಧ್ಯಕ್ಷ ಎಚ್.ಆಂಜನೇಯ, ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್.ಜೆ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತೀಕ್, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಇದ್ದರು.

ವಸತಿ, ಮೂಲಸೌಲಭ್ಯಕ್ಕೆ ಮನವಿ

ನಿವೇಶನ, ಮನೆ, ಜಮೀನು, ಉದ್ಯೋಗ ಸೇರಿ ಇತರ ಮೂಲಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಕೋರಿ ಕವಾಡಿಗರಹಟ್ಟಿ ಜನರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಶಾಸಕ ಕೆ.ಸಿ.ವೀರೇಂದ್ರ ಮನವಿ ಓದಿ ಹೇಳಿದರು.

ಕಲುಷಿತ ನೀರನ್ನು ಕುಡಿದು ಅಸ್ವಸ್ಥಗೊಂಡ ಹಾಗೂ ಪ್ರಾಣ ಕಳೆದುಕೊಂಡ ಬಹುತೇಕರು ಪರಿಶಿಷ್ಟ ಜಾತಿ ಜನಾಂಗದವರು. ಕೂಲಿ ಮಾಡುವುದು, ಸಪಾಯಿ ಕರ್ಮಾಚಾರಿ, ಕೃಷಿ ಕಾರ್ಮಿಕರು, ಹಮಾಲಿ ಕೆಲಸದಲ್ಲಿ ತೊಡಿಗಿದ್ದು, ಆರ್ಥಿಕವಾಗಿ ತುಂಬಾ ದುರ್ಬಲರಾಗಿದ್ದೇವೆ.

'ದಯಮಾಡಿ ಬಡ ದಲಿತರ ಮೇಲೆ ಕರುಣೆ ತೋರಿ ನಿವೇಶನ, ಮನೆ, ಜಮೀನು, ಉದ್ಯೋಗ ಕಲ್ಪಿಸಿಕೊಟ್ಟರೆ ಅನುಕೂಲ. ರಸ್ತೆ ವಿಸ್ತರಣೆಯಿಂದಾಗಿ ಇಲ್ಲಿನ 60 ಮನೆ ತೆರವುಗೊಳಿಸಲಾಗುತ್ತಿದೆ. ಸೂಕ್ತ ಪರಿಹಾರ ನೀಡಿ ನಂತರ ಮನೆ ತೆರವುಗೊಳಿಸಿ. ಪರ್ಯಾಯವಾಗಿ ನಿವೇಶನ, ವಸತಿ ಕಲ್ಪಿಸಲು ಆದೇಶಿಸಬೇಕು' ಎಂದು ಕೋರಿದರು.

ಮುಜುಗರಕ್ಕೆ ಒಳಗಾದ ಮುಖ್ಯಮಂತ್ರಿ

ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯಡಿ‌ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲವೆಂದು ಮಹಿಳೆಯರು ಬಹಿರಂವಾಗಿ ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಜುಗರಕ್ಕೆ ಸಿಲುಕಿಸಿದರು.

ಸರ್ಕಾರಿ ಸೌಲಭ್ಯದ ಬಗ್ಗೆ ಮಾತನಾಡಿತ್ತಿದ್ದ ಮುಖ್ಯಮಂತ್ರಿ ನಿಮ್ಮೆಲ್ಲರಿಗೂ ಗೃಹಲಕ್ಷ್ಮಿ ಯೋಜನೆಯ ₹ 2 ಸಾವಿರ ಹಾಗೂ ಅನ್ನ ಭಾಗ್ಯ ಯೋಜನೆಯ ಹಣ ನಿಮ್ಮೆಲ್ಲರಿಗೂ ಬಂದಿರಬೇಕು ಅಲ್ಲವೇ ಎಂದು ಮಹಿಳೆಯರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆಯರು 'ಇಲ್ಲ ಸ್ವಾಮಿ, ದುಡ್ಡು ಬಂದಿಲ್ಲ, ಬರುತ್ತಿಲ್ಲ' ಎಂದರು.

'ರಾಜ್ಯದ 1.26 ಕೋಟಿ ಫಲಾನುಭವಿ ಕುಟುಂಬಗಳ ಪೈಕಿ 1.10 ಕೋಟಿ ಕುಟುಂಬಗಳಿಗೆ ಹಣ ಜಮಾ ಆಗಿದೆ. ಆಧಾರ್ ಹಾಗೂ‌ ಬ್ಯಾಂಕ್ ಖಾತೆ ಜೋಡಣೆ ಆಗದ ಪರಿಣಾಮ ಇನ್ನೂ 16 ಲಕ್ಷ ಕುಟುಂಬಕ್ಕೆ ಹಣ ಜಮಾ ಆಗಬೇಕಿದೆ. ಶೀಘ್ರದಲ್ಲಿಯೇ ಎಲ್ಲರಿಗೂ ಹಣ ಬರಲಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT