ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅ.1ರಿಂದ ಚಿತ್ರಮಂದಿರಗಳ ಪೂರ್ಣ ಭರ್ತಿಗೆ ಅವಕಾಶ: ಬಸವರಾಜ ಬೊಮ್ಮಾಯಿ

ರಾತ್ರಿ ಕರ್ಫ್ಯೂ 9ರ ಬದಲು 10ರಿಂದ ಆರಂಭ
Last Updated 24 ಸೆಪ್ಟೆಂಬರ್ 2021, 13:39 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ದೃಢಪ್ರಮಾಣ ದರ ಶೇಕಡ 1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಅಕ್ಟೋಬರ್‌ 1ರಿಂದ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನಗಳನ್ನು ಭರ್ತಿಮಾಡಲು ಅನುಮತಿ ನೀಡಲಾಗಿದೆ. ಅ.3ರಿಂದ ಪಬ್‌ಗಳೂ ಪುನಾರರಂಭವಾಗಲಿವೆ.

ಶುಕ್ರವಾರ ಕೋವಿಡ್‌ ನಿಯಂತ್ರಣ ಕಾರ್ಯಪಡೆ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕೋವಿಡ್‌ ದೃಢಪ್ರಮಾಣ ದರ ಶೇ 1ಕ್ಕಿಂತ ಕಡಿಮೆ ಇರುವ ಎಲ್ಲ ಜಿಲ್ಲೆಗಳಲ್ಲೂ ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಸೀಟುಗಳನ್ನು ಭರ್ತಿ ಮಾಡಬಹುದು. ಕೋವಿಡ್‌ ದೃಢಪ್ರಮಾಣ ದರ ಶೇ 1ಕ್ಕಿಂತ ಹೆಚ್ಚಾದರೆ ಶೇ 50ರಷ್ಟು ಸೀಟುಗಳನ್ನು ಮಾತ್ರ ಭರ್ತಿ ಮಾಡಬೇಕು. ಕೋವಿಡ್‌ ದೃಢಪ್ರಮಾಣ ದರ ಶೇ 2ಕ್ಕಿಂತ ಹೆಚ್ಚಾಗುವ ಜಿಲ್ಲೆಗಳಲ್ಲಿ ಚಿತ್ರಮಂದಿರಗಳನ್ನು ಬಂದ್‌ ಮಾಡಲಾಗುವುದು’ ಎಂದರು.

ಅ.3ರಿಂದ ಪಬ್‌ಗಳ ಪುನಾರರಂಭಕ್ಕೆ ಅನುಮತಿ ನೀಡಲು ನಿರ್ಧರಿಸಲಾಗಿದೆ. ಪಬ್‌ಗಳ ವಿಚಾರದಲ್ಲೂ ಚಿತ್ರಮಂದಿರಕ್ಕೆ ರೂಪಿಸಿರುವ ಮಾರ್ಗಸೂಚಿಗಳನ್ನೇ ಅನ್ವಯಿಸಲಾಗುವುದು. ಕನಿಷ್ಠ ಒಂದು ಡೋಸ್‌ ಕೋವಿಡ್‌ ಲಸಿಕೆ ಪಡೆದವರು ಮಾತ್ರ ಪಬ್‌ಗಳಿಗೆ ಬರಬಹುದು. ಗರ್ಭಿಣಿಯರು ಮತ್ತು ಮಕ್ಕಳಿಗೆ ಪ್ರವೇಶವಿರುವುದಿಲ್ಲ ಎಂದು ತಿಳಿಸಿದರು.

ರಾತ್ರಿ ಕರ್ಫ್ಯೂ ಮತ್ತಷ್ಟು ಸಡಿಲ: ರಾತ್ರಿ ಕರ್ಫ್ಯೂ ಅವಧಿಯನ್ನು ಇನ್ನೂ ಒಂದು ಗಂಟೆ ಸಡಿಲಿಕೆ ಮಾಡಲಾಗಿದೆ. ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೆ ಮಾತ್ರ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಬೊಮ್ಮಾಯಿ ಹೇಳಿದರು.

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ದೃಢಪ್ರಮಾಣ ದರದ ಸರಾಸರಿ ಶೇ 0.66 ಇದೆ. ದ್ವಿತೀಯ ಪಿಯುಸಿವರೆಗೆ ವಾರದಲ್ಲಿ ಐದು ದಿನ ತರಗತಿ ನಡೆಸಲು ಮತ್ತು ಶೇ 100ರಷ್ಟು ವಿದ್ಯಾರ್ಥಿಗಳಿಗೆ ತರಗತಿಗೆ ಹಾಜರಾಗಲು ಅನುಮತಿ ನೀಡಲಾಗಿದೆ ಎಂದರು.

ದಸರಾ ಹಬ್ಬಕ್ಕೆ ಸಂಬಂಧಿಸಿದಂತೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ದಸರಾ ಆಚರಣೆಗೆ ಸಂಬಂಧಿಸಿದಂತೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದು ಹೇಳಿದರು.

ಯಾದಗಿರಿ, ರಾಯಚೂರು, ಕಲಬುರ್ಗಿ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಕೋವಿಡ್‌ ಲಸಿಕೆ ನೀಡುವುದನ್ನು ಹೆಚ್ಚಿಸಲಾಗುವುದು. ಅಂತರ ರಾಜ್ಯ ಗಡಿ ಭಾಗದ ಜಿಲ್ಲೆಗಳಲ್ಲಿ ನಿಗಾ ವಹಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT