ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ‌ಚುನಾವಣೆಯಲ್ಲಿ ಅಧಿಕಾರಕ್ಕೆ ಬರುತ್ತೇವೆ, ಬೆಲೆ ಇಳಿಸುತ್ತೇವೆ: ಸಿದ್ದರಾಮಯ್ಯ

Published 10 ಜೂನ್ 2023, 10:50 IST
Last Updated 10 ಜೂನ್ 2023, 10:50 IST
ಅಕ್ಷರ ಗಾತ್ರ

ಮೈಸೂರು: ಮುಂಬರುವ ಲೋಕಸಭಾ‌ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ. ರಸಗೊಬ್ಬರದ ಬೆಲೆ ಇಳಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾವು ಪ್ರತಿನಿಧಿಸುವ ವರುಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ನಂಜನಗೂಡು ತಾಲ್ಲೂಕಿನ ಬಿಳಿಗೆರೆಬೋರೆಯಲ್ಲಿ ಶನಿವಾರ ಆಯೋಜಿಸಿದ್ದ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು.

ರೈತರೊಬ್ಬರ ಮನವಿಗೆ ಪ್ರತಿಕ್ರಿಯಿಸಿದ ಅವರು, ರಸಗೊಬ್ಬರದ ದರ ಹೆಚ್ಚಿಸಿರುವುದು ನಾವಲ್ಲ. ಪ್ರಧಾನಿ ನರೇಂದ್ರ ಮೋದಿ. ಇಳಿಕೆ ಮಾಡುವುದನ್ನು ಅವರೇ ಮಾಡಬೇಕಾಗುತ್ತದೆ. ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಆಗ ರಸಗೊಬ್ಬರ, ಅಡುಗೆ ಅನಿಲ ಸಿಲಿಂಡರ್, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕಡಿಮೆ ಮಾಡುತ್ತೇವೆ ಎಂದರು.

ಆಗ ನೆರೆದಿದ್ದವರಲ್ಲಿ ಕೆಲವರು ನಿಮ್ಮನ್ನು ಪ್ರಧಾನಿ ಮಾಡುತ್ತೇವೆ ಎಂದರೆ, ನೀವು ಪ್ರಧಾನಿ ಆಗಬೇಕು ಎಂದು ಕೆಲವರು ಹೇಳಿದರು.

ಲೋಕಸಭಾ ಚುನಾವಣೆಯಲ್ಲೂ ಗೆಲ್ಲಲಾಗುವುದಿಲ್ಲ ಎನ್ನುವುದು ಗೊತ್ತಾಗಿರುವುದರಿಂದಲೇ ಬಿಜೆಪಿಯವರಿಗೆ ನಡುಕ ಶುರುವಾಗಿದೆ.‌ ರಾಜ್ಯದಲ್ಲಿ ನಾವು ಕನಿಷ್ಠ 20 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ವಿಧಾನಸಭೆ ‌ಚುನಾವಣೆಯಲ್ಲಿ ಬಿಜೆಪಿಯು 8 ಜಿಲ್ಲೆಗಳಲ್ಲಿ ಒಂದು ಸ್ಥಾನವನ್ನೂ ಗೆದ್ದಿಲ್ಲ. ನಾವು ಉಡುಪಿಯಲ್ಲಿ ಮಾತ್ರವೇ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿಲ್ಲ. ಇದೇ‌ ನಮಗೂ- ಬಿಜೆಪಿಯವರಿಗೂ ಇರುವ ವ್ಯತ್ಯಾಸ. ರಾಹುಲ್ ಗಾಂಧಿ ಅವರು ನಡೆಸಿದ ಭಾರತ್ ಜೋಡೊ ಯಾತ್ರೆ ಕಾರ್ಯಕರ್ತರಲ್ಲಿ ಶಕ್ತಿ ತುಂಬಿತು. ವಾಸ್ತವವಾಗಿ ಅದೇ ಚುನಾವಣಾ ಪ್ರಚಾರದ ಆರಂಭವಾಗಿತ್ತು ಎಂದು ಹೇಳಿದರು.

ವರುಣದಲ್ಲಿದೊರೆತ ಜಯ ನನ್ನದಲ್ಲ ಜನರ ಜಯ. ಜನರ‌ ನಾಡಿಮಿಡಿತ ಅರ್ಥ ಮಾಡಿಕೊಂಡಿದ್ದರಿಂದಲೇ ನಮಗೆ ಬಹುಮತ ಬಂದೇ ಬರುತ್ತದೆ ಎಂದು ಹೇಳಿದ್ದೆ. ಜನರು ಮಾಡಿರುವುದು ಐತಿಹಾಸಿಕ ನಿರ್ಣಯವಾಗಿದೆ ಎಂದರು.

ವರುಣದಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯನಷ್ಟು ಮತಗಳ ಅಂತರವನ್ನು ನಾನು ಪಡೆಯಲಾಗಲಿಲ್ಲ. ಆದರೆ, ಹಿಂದಿನ‌ ಚುನಾವಣೆಗೆ ಹೋಲಿಸಿದರೆ ಈ ಬಾರಿ ನಾನು ಪಡೆದಿರುವುದೇ ದೊಡ್ಡ ಅಂತರ. ಕಳೆದ ಬಾರಿಯದ್ದೇ ಕೊನೆಯ ಚುನಾವಣೆ. ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆದರೆ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ಉಸಿರಿರುವವರೆಗೂ ನಾಡಿನ ಜನರ ಸೇವೆ ಮಾಡುತ್ತೇನೆ ಎಂದರು.

ನಾನು ಮುಖ್ಯಮಂತ್ರಿಯಾಗಲು ವರುಣ ಕ್ಷೇತ್ರದ ಜನರ ಆಶೀರ್ವಾದ ಕಾರಣ. ನನಗೆ ಅಧಿಕಾರ ಸಿಕ್ಕಿದ್ದರೆ ಅದು ನಿಮ್ಮೆಲ್ಲರಿಗೂ ಸಿಕ್ಕಿದೆ ಎಂಬ ಭಾವನೆ ಇರಲಿ ಎಂದರು.

ಈ ಅಧಿಕಾರ ಸುಪತ್ತಿಗೆಯ ಕುರ್ಚಿ ಅಲ್ಲ. ಜನಸೇವೆ ಮಾಡುವಂತಹ ಕುರ್ಚಿ ಎಂದು ಹೇಳಿದರು.

ಎಷ್ಟೇ ಹಣ ಖರ್ಚಾದರೂ ನಾವು ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ‌. ಐದೂ ಗ್ಯಾರಂಟಿಗಳ ಅನುಷ್ಠಾನಕ್ಕೆ ವರ್ಷಕ್ಕೆ

₹ 59 ಸಾವಿರ ಕೋಟಿ ಖರ್ಚಾಗುತ್ತದೆ. ಈಗಾಗಲೇ ಆರ್ಥಿಕ ವರ್ಷದ ಮೂರು ತಿಂಗಳು ಆಗಿರುವುದರಿಂದ ಈ ಸಾಲಿಗೆ ₹ 41ಸಾವಿರ ಕೋಟಿ ಬೇಕಾಗುತ್ತದೆ. ಅದನ್ನು ಹೊಂದಿಸುತ್ತೇವೆ ಎಂದು ಭರವಸೆ ನೀಡಿದರು.

ಗ್ಯಾರಂಟಿಗಳನ್ನು ಜಾರಿಗೊಳಿಸಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ ನಾವು ಜನಪರ ಕಾರ್ಯಕ್ರಮಕ್ಕೆ ಬದ್ಧವಾಗಿದ್ದೇವೆ. ಅವರಿಂದ ನಾನು ಸಹಾಯ ನಿರೀಕ್ಷೆ ಮಾಡಿದ್ದೆ. ಜನಪರವಾದ ಗ್ಯಾರಂಟಿಗಳು ಹಾಗೂ ಬಡವರಿಗೆ ಶಕ್ತಿ ತುಂಬುವ ಕಾರ್ಯಕ್ರಮಗಳ ಅನುಷ್ಠಾನವಾದ್ದರಿಂದ ನಾವೂ ನಿಮ್ಮ ಸಹಾಯಕ್ಕೆ ಬರುತ್ತೇವೆ ಎಂದು ಪ್ರಧಾನಿ ಹೇಳಬೇಕಿತ್ತು. ಆದರೆ, ಅವರು ರಾಜಕೀಯವಾಗಿ ಮಾತನಾಡುತ್ತಿದ್ದಾರೆ. ಬಿಜೆಪಿಯವರೂ ಅದನ್ನೇ ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಅಧಿಕಾರಕ್ಕೆ ಬಂದು 20 ದಿನಗಳಲ್ಲೇ ಗ್ಯಾರಂಟಿಗಳ ಜಾರಿಗೆ ತೀರ್ಮಾನ ಮಾಡಿದ್ದೇವೆ. ಅವುಗಳನ್ನು ಗ್ಯಾರಂಟಿ ಈಡೇರಿಸುತ್ತೇವೆ. ಅನುಮಾನವೇ ಬೇಡ ಎಂದು ತಿಳಿಸಿದರು.

200 ಯೂನಿಟ್‌ವರೆಗೆ ಬಳಸುವವರಿಗೆ ಉಚಿತ ವಿದ್ಯುತ್ ಕೊಡುತ್ತೇವೆ ಎಂದು ಹೇಳಿದ್ದೇವೆ. ಆದರೆ ಅದನ್ನು ಬಿಜೆಪಿಯವರು ಹಾಗೂ ಕೆಲವು ಮಾಧ್ಯಮದವರು

ಕೆಟ್ಟದಾಗಿ ವ್ಯಾಖ್ಯಾನ ಮಾಡುತ್ತಿದ್ದಾರೆ. ಒಂದು ವರ್ಷದ ಸರಾಸರಿ ಬಳಕೆಯನ್ನು ಆಧರಿಸಿ ಲೆಕ್ಕ ಹಾಕುತ್ತೇವೆ.

ದುರುಪಯೋಗ ಆಗದಂತೆ ನೋಡಿಕೊಳ್ಳಲು ಹೀಗೆ ಮಾಡುತ್ತಿದ್ದೇವೆ. ಈ ರಾಜ್ಯದ ಇತಿಹಾಸದಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಯೋಜನೆಯನ್ನು ಯಾರಾದರೂ ಮಾಡಿದ್ದರಾ? ಬಿಜೆಪಿಯವರು ಮಾಡಿದ್ರಾ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ 1.28 ಕೋಟಿ ಕುಟುಂಬಗಳಿವೆ. ಆ ಕುಟುಂಬಗಳ ಯಜಮಾನಿಗೆ ತಿಂಗಳಿಗೆ ₹ 2ಸಾವಿರ ಕೊಡುತ್ತೇವೆ‌. ಯಾರು ಯಜಮಾನಿಯೋ ಅವರಿಗೆ ಕೊಡುತ್ತೇವೆ‌. ಅತ್ತೆಗೋ, ಸೊಸೆಗೋ ಎಂಬ ಪ್ರಶ್ನೆ ಇಲ್ಲ. ಆದರೆ ಟಿವಿಗಳಲ್ಲಿ ಅತ್ತೆಗೋ, ಸೊಸೆಗೋ ಎಂಬ ಚರ್ಚೆ ಮಾಡುತ್ತಿದ್ದಾರೆ. ಯಜಮಾನಿ ಅತ್ತೆಯಾದರೂ ಸರಿ, ಸೊಸೆಯಾದರೂ ಸರಿ ಅವರಿಗೆ ಕೊಡುತ್ತೇವೆ.

ಎಪಿಎಲ್, ಬಿಪಿಎಲ್ ಚೀಟಿದಾರರಿಗೂ ಕೊಡ್ತೀವಿ. ಆದರೆ, ಆದಾಯ ತೆರಿಗೆ ಕಟ್ಟುವವರಿಗೆ, ಜಿಎಸ್‌ಟಿ ನೋಂದಣಿ ಮಾಡಿದವರಿಗೆ, ಮಕ್ಕಳು ಐಟಿ ಕಟ್ಟುತ್ತಿದ್ದರೆ ಅಂಥವರಿಗೆ ಇಲ್ಲ‌.

ಯಾವುದೇ ಪಿಂಚಣಿ ಪಡೆಯುತ್ತಿರುವವರಿಗೂ ಕೊಡುತ್ತೇವೆ. ಇದರಲಿ ಸಂಶಯ ಇಟ್ಟುಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಮಾಹಿತಿ ನೀಡಿದರು.

ಜೂನ್ 15ರಿಂದ ಜುಲೈ 15ರವರೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಗಸ್ಟ್ 16ರಿಂದ ನೇರವಾಗಿ ಅವರವರ ಖಾತೆಗೆ ಹಣ ಹಾಕುತ್ತೇವೆ ಎಂದು ತಿಳಿಸಿದರು.

ಅಕ್ಕಿ ಸ್ಟಾಕ್ ಇರಲಿಲ್ಲವಾದ್ದರಿಂದ ಜೂನ್ 1ರಿಂದ 10 ಕೆಜಿ ಅಕ್ಕಿ ಕೊಡಲಾಗುತ್ತಿಲ್ಲ. ಜುಲೈ 1ರಿಂದ ಆರಂಭಿಸುತ್ತೇವೆ ಎಂದು ಹೇಳಿದರು.

ಶಕ್ತಿ ಯೋಜನೆಯಲ್ಲಿ ಮಹಿಳೆಯರು ರಾಜ್ಯದೊಳಗೆ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು. ರಾಜ್ಯದ ಹೊರಗೆ ಹೋಗುವವರಿಗೆ ಉಚಿತ ಇರುವುದಿಲ್ಲ. ನನ್ನ ಪತ್ನಿಯೂ ಉಚಿತವಾಗಿ ಪ್ರಯಾಣಿಸಬಹುದು ಎಂದು ಪುನರುಚ್ಚರಿಸಿದರು.

ಪದವಿ, ಸ್ನಾತಕೋತ್ತರ ಪದವಿಯನ್ನು 2022-23ರಲ್ಲಿ ಮುಗಿಸಿ ಆರು ತಿಂಗಳ ಒಳಗೆ ಕೆಲಸ ಸಿಗದವರಿಗೆ ತಿಂಗಳಿಗೆ ₹ 3ಸಾವಿರವನ್ನು 24 ತಿಂಗಳವರೆಗೆ ಕೊಡುತ್ತೇವೆ. ಡಿಪ್ಲೊಮಾ ಮಾಡಿದವರಿಗೆ ₹ 1500 ಕೊಡುತ್ತೇವೆ. ಖಾಸಗಿ ಅಥವಾ ಸರ್ಕಾರಿ ಕೆಲಸ ಸಿಕ್ಕರೆ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ವರುಣದಲ್ಲಿ ನಾನು ಪ್ರಚಾರ ಮಾಡಿದ್ದು ಮೂರೇ ದಿನ. ಇಲ್ಲಿ ಶಾಸಕರಾಗಿದ್ದ ಯತೀಂದ್ರ ಸೀಟು ಬಿಟ್ಟುಕೊಟ್ಟಿದ್ದಲ್ಲದೇ ಅವರೇ ಅಭ್ಯರ್ಥಿಯಾಗಿದ್ದರೂ ಇಷ್ಟು ಶ್ರಮ ಪಟ್ಟು ಕೆಲಸ ಮಾಡುತ್ತಿರಲಿಲ್ಲ.‌ ಅವರಿಗೆ ವಿಶೇಷವಾದ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಮಗನನ್ನು ಕೊಂಡಾಡಿದರು.

ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಕೆ.ವೆಂಕಟೇಶ್ ಮತ್ತು ಶಾಸಕರು, ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT