ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿ.ಎಂ ವಿಶೇಷ ಅನುದಾನ: ₹ 25 ಕೋಟಿಗೆ ಶಾಸಕರ ಪೈಪೋಟಿ

* ಕಾಮಗಾರಿ ಪಟ್ಟಿ, ಮೊತ್ತ,‌ ಏಜೆನ್ಸಿ ವಿವರ ಅಗತ್ಯ
Published 7 ಫೆಬ್ರುವರಿ 2024, 19:03 IST
Last Updated 7 ಫೆಬ್ರುವರಿ 2024, 19:03 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಲ್ಲಿನ ತಮ್ಮ ಪಕ್ಷದ ಸದಸ್ಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವ ತಲಾ ₹25 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿಕೊಳ್ಳಲು ‘ಕೈ’ ಶಾಸಕರು ಪೈಪೋಟಿಗೆ ಬಿದ್ದಿದ್ದಾರೆ.

ಲೋಕಸಭಾ ಚುನಾವಣೆಯ ನೀತಿಸಂಹಿತೆ ಜಾರಿಯಾದರೆ ಅನುದಾನ ಸಿಕ್ಕಿದರೂ ಖರ್ಚು ಮಾಡಲಾಗದು. ಈ ಕಾರಣದಿಂದ ವಿಶೇಷ ಅನುದಾನವನ್ನು ಆದಷ್ಟು ಬೇಗ ಮಂಜೂರು ಮಾಡಿಸಿಕೊಳ್ಳಲು ಶಾಸಕರು ಆತುರ ತೋರುತ್ತಿದ್ದಾರೆ.

ವಿಶೇಷ ಅನುದಾನ ಪಡೆಯಬೇಕಾದರೆ, ಕಾಮಗಾರಿಗಳ ಪಟ್ಟಿ, ಅದಕ್ಕೆ ತಗಲುವ ಅಂದಾಜು ಮೊತ್ತ ಮತ್ತು ಅನುಷ್ಠಾನಗೊಳಿಸಬೇಕಾದ ಏಜೆನ್ಸಿಯ ವಿವರಗಳನ್ನು ಸಲ್ಲಿಸಬೇಕಿದೆ. ಕೆಲವು ಶಾಸಕರು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಏಜೆನ್ಸಿಗಳ ವಿವರ ಸಹಿತ ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಸಿದ್ದಾರೆ. ಕೆಲವರು ನೇರವಾಗಿ ಇಲಾಖೆಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

‘ಆರ್ಥಿಕ ಇಲಾಖೆಗೆ ಈಗಾಗಲೇ ಸುಮಾರು 25 ಶಾಸಕರು ಕಾಮಗಾರಿಗಳ ಪಟ್ಟಿಯ ಸಹಿತ ಪ್ರಸ್ತಾವ ಸಲ್ಲಿಸಿದ್ದಾರೆ’ ಎಂದು ಇಲಾಖೆಯ ಕಾರ್ಯದರ್ಶಿ (ವೆಚ್ಚ) ಎಂ.ಟಿ. ರೇಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಶಾಸಕರ ಪ್ರಸ್ತಾವದಂತೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಅಭಿವೃದ್ಧಿ ಕಾಮಗಾರಿಗಳನ್ನು ಅಗತ್ಯ ಕ್ರಮ ಜರುಗಿಸುವಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ. ಅತೀಕ್‌ ಪತ್ರ ಬರೆದಿದ್ದಾರೆ.  

ಆರ್ಥಿಕ ಇಲಾಖೆಯಿಂದ ಹೊರಡಿಸಿದ ಅನಧಿಕೃತ ಟಿಪ್ಪಣಿಗಳಲ್ಲಿ ತಿಳಿಸಿರುವ ಮೊತ್ತಕ್ಕೆ ಅನುಗುಣವಾಗಿ ಶಾಸಕರಿಂದ  ಕ್ರಿಯಾ ಯೋಜನೆ ಪಡೆಯಬೇಕು. ಜತೆಗೆ, ಆಡಳಿತಾತ್ಮಕ ಅನುಮೋದನೆ ನೀಡಿ ಕೂಡಲೇ ಕಾಮಗಾರಿಗಳನ್ನು ಆರಂಭಿಸಲು ಕ್ರಮ ವಹಿಸಬೇಕು ಎಂದೂ ಅವರು ಸೂಚನೆ ನೀಡಿದ್ದಾರೆ.

ಕಾಮಗಾರಿಗಳ ಅನುಷ್ಠಾನಕ್ಕೆ ಅನುದಾನ ಲಭ್ಯತೆ ಇಲ್ಲದೇ ಇದ್ದರೂ ಆರ್ಥಿಕ ಇಲಾಖೆಯಿಂದ ತಿಳಿಸಿದ ಮೊತ್ತಕ್ಕೆ ಎದುರಾಗಿ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಅನುಷ್ಠಾನಗೊಳಿಸಬೇಕು. ನಂತರ ಈ ಕಾಮಗಾರಿಗಳ ಬಿಲ್‌ಗಳನ್ನು ಸೃಜನೆಯಾದ ಮೊತ್ತಕ್ಕೆ ಅನುಸಾರವಾಗಿ ಹೆಚ್ಚುವರಿ ಅನುದಾನ ಒದಗಿಸುವಂತೆ ಕೋರಿ ಸೂಕ್ತ ಪ್ರಸ್ತಾವ ಸಲ್ಲಿಸಬೇಕು. ಕಾಮಗಾರಿ ಅನುಷ್ಠಾನದಲ್ಲಿ ವಿಳಂಬಕ್ಕೆ ಅವಕಾಶ ಇರಬಾರದು ಎಂದೂ ಅವರು ಸೂಚನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT