ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಗಳಲ್ಲಿ ವಿಷ ತುಂಬಿದ ಕೋಮುವಾದಿಗಳು: ಲೇಖಕಿ ಅರುಂಧತಿ ರಾಯ್‌

‘ಗೌರಿ ನೆನಪು’ ಕಾರ್ಯಕ್ರಮದಲ್ಲಿ ಲೇಖಕಿ ಅರುಂಧತಿ ರಾಯ್‌
Last Updated 5 ಸೆಪ್ಟೆಂಬರ್ 2022, 17:50 IST
ಅಕ್ಷರ ಗಾತ್ರ

ಬೆಂಗಳೂರು: ದೇಶ ಈಗ ಕೋಮುವಾದಿಗಳ ಹಿಡಿತಕ್ಕೆ ಸಿಲುಕಿದೆ. ಅವರು ಬೀದಿ, ಬೀದಿಗಳಿಗೆ ನುಗ್ಗಿ ಜನರಲ್ಲಿ ವಿಷ ತುಂಬಿದ್ದಾರೆ ಎಂದು ಲೇಖಕಿ ಅರುಂಧತಿ ರಾಯ್‌ ಹೇಳಿದರು.

ಪತ್ರಕರ್ತೆ ಗೌರಿ ಲಂಕೇಶ್‌ ಸ್ಮರಣಾರ್ಥ ಗೌರಿ ಸ್ಮಾರಕ ಟ್ರಸ್ಟ್‌ ವತಿಯಿಂದ ಸೋಮವಾರ ಆಯೋಜಿಸಿದ್ದ ‘ಗೌರಿ ನೆನಪು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಯಾವುದನ್ನೂ ಪ್ರಶ್ನೆ ಮಾಡಬಾರದು ಎಂಬ ಹಂತಕ್ಕೆ ಕೋಮುವಾದಿಗಳು ಬೆಳೆದಿದ್ದಾರೆ. ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನೇ ನಾಶ ಮಾಡಲಾಗಿದೆ. ಕೋಟ್ಯಂತರ ಜನರು ಧ್ವನಿ ಎತ್ತದೇ ಮೌನವಾಗಿ ಉಳಿದಿದ್ದರ ಪರಿಣಾಮವಿದು’ ಎಂದರು.

ಜನರಿಗೆ ಅಕ್ಕಿ, ಉಪ್ಪು ಸೇರಿದಂತೆ ಆಹಾರ ಧಾನ್ಯ ವಿತರಿಸುವುದನ್ನೂ ಅಪಾಯಕಾರಿ ಎಂದು ಕೋಮುವಾದಿ ಶಕ್ತಿಗಳು ಬಿಂಬಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರು ಜನರಿಗೆ ಉಚಿತವಾಗಿ ಉಪ್ಪು ಹಂಚಿದರೆ ಅದಕ್ಕೆ ಪ್ರತಿಯಾಗಿ ಮತ ಕೇಳುತ್ತಾರೆ. ಅಭಿವೃದ್ಧಿ, ಬೆಲೆ ಏರಿಕೆ, ಶಿಕ್ಷಣ, ಆರೋಗ್ಯ ಸೇವೆಯಂತಹ ವಿಚಾರಗಳ ಕುರಿತು ಸಮಸ್ಯೆ ಎದುರಾಗಿದ್ದರೂ, ಕೋಮುವಾದದ ಹಿಡಿತಕ್ಕೆ ಸಿಲುಕಿರುವ ಜನರು ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮನಸ್ಥಿತಿ ಹೊಂದಿದ್ದಾರೆ ಎಂದು ಹೇಳಿದರು.

‘ಗುಜರಾತ್‌ನಲ್ಲಿ ನಡೆದ ಬಿಲ್ಕಿಸ್‌ ಬಾನೋ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಯಾಗಿತ್ತು. ಆದರೆ, ಅಪರಾಧಿಗಳೆಲ್ಲರೂ ಈಗ ಹೊರಬಂದಿದ್ದಾರೆ. ಪ್ರಪಂಚದ ಶ್ರೀಮಂತ ರಾಜಕೀಯ ಪಕ್ಷ ಮತ್ತು ಬ್ರಾಹ್ಮಣರು ಇದಕ್ಕೆ ಕಾರಣ’ ಎಂದು ದೂರಿದರು.

ಪ್ರತಿಷ್ಠೆ ಮರೆತು ಹೋರಾಡಬೇಕು: ನಟ ಪ್ರಕಾಶ್‌ ರಾಜ್‌ ಮಾತನಾಡಿ, ‘ಆರ್‌ಎಸ್‌ಎಸ್‌ ಇಷ್ಟು ಬಲವಾಗಿ ಬೆಳೆದು ನಿಲ್ಲಲು ಅದನ್ನು ಎದುರಿಸಬೇಕಾದ ಹೋರಾಟಗಾರರಲ್ಲಿನ ಪ್ರತಿಷ್ಠೆಯೇ ಕಾರಣ. ನಾವು ಸ್ವಪ್ರತಿಷ್ಠೆ ಮರೆತು ಒಗ್ಗೂಡಿ ಹೋರಾಟ ನಡೆಸಬೇಕು. ಅದಕ್ಕೆ ನಮಗೆ ಗೌರಿ ಮಾದರಿ ಆಗಬೇಕು’ ಎಂದರು.

ಐದು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಹೋರಾಟಗಾರರು ಸಕ್ರಿಯರಾಗಿ ಉಳಿದಿಲ್ಲ. ಆದರೆ, ರೈತರು ಮತ್ತು ಮಹಿಳೆಯರು ಪ್ರಬಲವಾದ ಹೋರಾಟಗಳನ್ನು ನಡೆಸಿದ್ದಾರೆ ಎಂದು ಹೇಳಿದರು.

ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ ವರ್ಚ್ಯುಯಲ್‌ ಆಗಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಗೌರಿ ಸ್ಮಾರಕ ಟ್ರಸ್ಟ್‌ ಟ್ರಸ್ಟಿಗಳಾದ ಜಿ.ಎನ್‌. ದೇವಿ, ವಿ.ಎಸ್‌. ಶ್ರೀಧರ್‌, ಕಾರ್ಯದರ್ಶಿ ದೀಪು, ಪತ್ರಕರ್ತ ಡಿ. ಉಮಾಪತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT