ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’ಗೆ ಬಿಜೆಪಿ ಗಿಫ್ಟ್‌: ಎಚ್‌ಡಿಕೆ

ಆಳಂದ ಶಾಸಕರ ಸೆಳೆಯಲು ಕುಮಾರಸ್ವಾಮಿ ಯತ್ನ: ಬಿಎಸ್‌ವೈ
Last Updated 25 ಜನವರಿ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ಮೈತ್ರಿ’ ಇನ್ನಷ್ಟು ಗಟ್ಟಿ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸಲು ಜೆಡಿಎಸ್‌– ಕಾಂಗ್ರೆಸ್‌ ತಯಾರಿ ನಡೆಸುತ್ತಿದ್ದರೆ, ಅತ್ತ ಸರ್ಕಾರ ಅಸ್ಥಿರಗೊಳಿಸುವ ಜೊತೆಗೆ ‘ದೋಸ್ತಿ’ಯಲ್ಲಿ ಒಡಕು ಮೂಡಿಸಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಕಾರ್ಯತಂತ್ರ ಹೆಣೆಯುತ್ತಿದೆ.

ಬಿಜೆಪಿಯ ರಣತಂತ್ರಕ್ಕೆ ಪ್ರತಿತಂತ್ರದ ಮೂಲಕವೇ ತಿರುಗೇಟು ನೀಡಲು ಉಭಯ ಪಕ್ಷಗಳು ತೀರ್ಮಾನಿಸಿವೆ. ಸೂಕ್ತ ಸ್ಥಾನಮಾನ ಸಿಗದ ಕಾರಣಕ್ಕೆ ಮುನಿಸಿಕೊಂಡಿರುವ ಕಾಂಗ್ರೆಸ್‌ ಶಾಸಕರ ಮೇಲೆ ಕಮಲ ಪಕ್ಷ ಕಣ್ಣಿಟ್ಟಿದೆ. ಆದರೆ, ಪಕ್ಷ ತ್ಯಜಿಸುವುದಿಲ್ಲವೆಂದು ಅತೃಪ್ತರಿಂದ ಮಾತು ಪಡೆದುಕೊಂಡಿರುವ ಕಾಂಗ್ರೆಸ್‌ ನಾಯಕರು ನಿರಾಳರಾಗಿದ್ದಾರೆ. ಆದರೆ, ‘ಆಪರೇಷನ್‌ ಕಮಲ’ಕ್ಕೆ ಪ್ರತಿ ಆಪರೇಷನ್‌ ಮಾಡುವ ಕುರಿತಂತೆ ಗುರುವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿದೆ.

ಈ ಮಧ್ಯೆ, ‘ಆಪರೇಷನ್‌ ಕಮಲ ಇನ್ನೂ ನಡೆಯುತ್ತಿದೆ. ಗುರುವಾರ (ಜ. 24) ಕೂಡಾ ಕಾಂಗ್ರೆಸ್‌ ಶಾಸಕರೊಬ್ಬರಿಗೆ ಕರೆ ಮಾಡಿ, ಗಿಫ್ಟ್ ಎಲ್ಲಿಗೆ ಕಳುಹಿಸಬೇಕು ಎಂದು ಬಿಜೆಪಿಯವರು ಕೇಳಿದ್ದಾರೆ. ಆ ಶಾಸಕರೇ ನನ್ನ ಜೊತೆ ಈ ಮಾಹಿತಿ ಹಂಚಿಕೊಂಡಿದ್ದಾರೆ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಶುಕ್ರವಾರ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಆ ಮೂಲಕ, ಮೈತ್ರಿ ಸರ್ಕಾರ ಉರುಳಿಸುವ ಯತ್ನವನ್ನು ಬಿಜೆಪಿ ‘ಕೈ’ ಬಿಟ್ಟಿಲ್ಲ ಎಂದು ಅವರು ಖಚಿತಪಡಿಸಿದ್ದಾರೆ.

‘ಬಿಜೆಪಿ ನಾಯಕರು ಸಂಪರ್ಕಿಸಿದ ಶಾಸಕ ಆಮಿಷಕ್ಕೆ ಬಲಿಯಾಗಿಲ್ಲ. ನಿಮ್ಮ ಗಿಫ್ಟ್‌ ಬೇಕಿಲ್ಲ. ನಾನು ನೆಮ್ಮದಿಯಿಂದ ಇದ್ದೇನೆ. ನನ್ನನ್ನು ಬಿಟ್ಟಬಿಡಿ ಎಂದು ಆ ಶಾಸಕ ಹೇಳಿದ್ದಾರೆ. ಹಾಗೆಂದು ಅದು ಸಣ್ಣಪುಟ್ಟ ಗಿಫ್ಟ್‌ ಅಲ್ಲ. ಅದು ಎಲ್ಲಿಂದ ಬರುತ್ತಿದೆಯೊ?’ ಎಂದರು.

‘ಯಡಿಯೂರಪ್ಪ 2008ರಲ್ಲಿಯೇ ಶಾಸಕರನ್ನು ಮಾರಾಟದ ವಸ್ತುವಾಗಿ ಮಾಡಿಕೊಂಡಿದ್ದರು. ಅದು ಅವರ ಚಾಳಿ. ಈಗಲೂ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ’ ಎಂದರು.

ಇದಕ್ಕೆ ತಿರುಗೇಟು ನೀಡಿರುವ ಯಡಿಯೂರಪ್ಪ ಅವರು, ‘ನಮ್ಮ ಪಕ್ಷದವರಾದ ಆಳಂದ ಕ್ಷೇತ್ರದ ಶಾಸಕರನ್ನು ಸೆಳೆಯಲು ಕುಮಾರಸ್ವಾಮಿಯೇ ಮುಂದಾಗಿದ್ದಾರೆ. ನಮಗೆ ಆಪರೇಷನ್ ಕಮಲದ ಅಗತ್ಯವೇ ಇಲ್ಲ. ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಮುಖ್ಯಮಂತ್ರಿಯ ಈ ಹತಾಶೆಯ ಹೇಳಿಕೆಯೇ ಸಾಕ್ಷಿ’ ಎಂದು ಹೇಳಿದ್ದಾರೆ.

ನಾನೀಗ ನಿರಾಳ: ‘ಕಾಂಗ್ರೆಸ್‌ಗೆ ನೀಡಿದ್ದ ಬೆಂಬಲ ವಾಪಸು ಪಡೆದ ಬಳಿಕ ನಿರಾಳವಾಗಿದ್ದೇನೆ. ಕ್ಷೇತ್ರದ ಜನರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ’ ಎಂದು ಮುಳಬಾಗಿಲು ಶಾಸಕ ಎಚ್‌. ನಾಗೇಶ್‌ ಹೇಳಿದ್ದಾರೆ.

ಬಿಜೆಪಿ ಸೇರಲು ಯತ್ನಿಸಿದ್ದ ಹುಕ್ಕೇರಿ ಕುಟುಂಬ’

ಬೆಳಗಾವಿ: ‘ಚಿಕ್ಕೋಡಿ– ಸದಲಗಾ ಶಾಸಕ ಗಣೇಶ ಹುಕ್ಕೇರಿ ಹಾಗೂ ಅವರ ತಂದೆ, ಸಂಸದ ಪ್ರಕಾಶ ಹುಕ್ಕೇರಿ ಅವರು ಬಿಜೆಪಿ ಸೇರಲು ಬಯಸಿದ್ದರು’ ಎಂದು ರಾಯಬಾಗ ಶಾಸಕ, ಬಿಜೆಪಿಯ ದುರ್ಯೋಧನ ಐಹೊಳೆ ತಮ್ಮ ಆಪ್ತರೆದುರು ಹೇಳಿರುವ ವಿಡಿಯೊ ವೈರಲ್‌ ಆಗಿದೆ.

‘ತಮಗೆ ಲೋಕಸಭಾ ಚುನಾವಣೆಯ ಟಿಕೆಟ್‌ ಹಾಗೂ ಗಣೇಶ ಅವರಿಗೆ ವಿಧಾನಸಭಾ ಚುನಾವಣೆಗೆ ಟಿಕೆಟ್‌ ನೀಡಬೇಕು ಎನ್ನುವ ಷರತ್ತನ್ನು ಪ್ರಕಾಶ ಹುಕ್ಕೇರಿ ಹಾಕಿದ್ದರು. ಇಬ್ಬರಿಗೂ ಟಿಕೆಟ್‌ ನೀಡಲು ಪಕ್ಷದ ಮುಖಂಡರು ನಿರಾಕರಿಸಿದರು. ಹೀಗಾಗಿ ಅವರ ಮಾತುಕತೆ ಮುರಿದುಬಿತ್ತು’ ಎಂದು ಅವರು ಹೇಳಿರುವುದು ವಿಡಿಯೊದಲ್ಲಿದೆ.

ಇದಕ್ಕೆ ಪ್ರತಿಕ್ರಿಯಿಸಿದ ದುರ್ಯೋಧನ ಐಹೊಳೆ, ‘ಪಕ್ಷದಿಂದ ಪಕ್ಷಕ್ಕೆ ಹಾರುತ್ತಿರುವವರ ಬಗ್ಗೆ ಸ್ನೇಹಿತರ ಜೊತೆ ಮಾತನಾಡುತ್ತಿದ್ದೆನೇ ಹೊರತು, ಪ್ರಕಾಶ ಹುಕ್ಕೇರಿ ಮತ್ತು ಗಣೇಶ ಹುಕ್ಕೇರಿಯವರನ್ನು ಉದ್ದೇಶಿಸಿ ಮಾತನಾಡಿಲ್ಲ. ಕೆಲವರು ದುರುದ್ದೇಶದಿಂದ ವಿಷಯ ತಿರುಚಿದ್ದಾರೆ’ ಎಂದಿದ್ದಾರೆ. ಆದರೆ, ಪ್ರಕಾಶ ಹುಕ್ಕೇರಿ, ಗಣೇಶ ಹುಕ್ಕೇರಿ ದೂರವಾಣಿ ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT