ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಸಿಎಲ್‌ಪಿ ಸಭೆ: ಅಸಮಾಧಾನ ಸ್ಫೋಟ?

ಎಐಸಿಸಿ ಅಧ್ಯಕ್ಷ ಖರ್ಗೆ ಎದುರೇ ಅಹವಾಲು ಸಂಭವ
Published 26 ಜುಲೈ 2023, 15:47 IST
Last Updated 26 ಜುಲೈ 2023, 15:47 IST
ಅಕ್ಷರ ಗಾತ್ರ

‌ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ತಿಂಗಳಷ್ಟೆ ಕಳೆದಿದ್ದು, ಅದಾಗಲೇ ಸಚಿವರು ಮತ್ತು ಶಾಸಕರ ಮಧ್ಯದ ಭಿನ್ನಮತ ಬಹಿರಂಗವಾಗಿದೆ. ಗುರುವಾರ (ಜುಲೈ 27) ನಡೆಯಲಿರುವ ಕಾಂಗ್ರೆಸ್‌  ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರುವುದು ಖಚಿತ.

ತಾವು ಮಾಡಿರುವ ವರ್ಗಾವಣೆ ಶಿಫಾರಸುಗಳಿಗೆ ಸಚಿವರು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿರುವ ಕೆಲವು ಶಾಸಕರು, ಸಚಿವರುಗಳ ಮೇಲೆ ಸಾಮೂಹಿಕವಾಗಿ ಮುಗಿಬೀಳುವ ಸಾಧ್ಯತೆಯಿದೆ. ಅಲ್ಲದೆ, ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ ವಿಚಾರವನ್ನೂ ಪ್ರಸ್ತಾಪಿಸಿ, ಅಸಮಾಧಾನ ತೋಡಿಕೊಳ್ಳುವ ಸಂಭವವಿದೆ.

ಸಚಿವರ ಅಸಹಕಾರದ ಕುರಿತು ಮುಖ್ಯಮಂತ್ರಿಗೆ 30ಕ್ಕೂ ಹೆಚ್ಚು ಶಾಸಕರು ಸಹಿ ಹಾಕಿ ಪತ್ರ ನೀಡಿದ್ದರು. ಅಲ್ಲದೆ, ತಕ್ಷಣ ಸಿಎಲ್‌ಪಿ ಸಭೆ ಕರೆಯುವಂತೆಯೂ ಒತ್ತಾಯಿಸಿದ್ದರು. ಸಿಎಲ್‌ಪಿ ಸಭೆ ಕರೆಯುವಂತೆ ಶಾಸಕರು ಒತ್ತಾಯಿಸಿರುವುದನ್ನು ಮುಖ್ಯಮಂತ್ರಿ ಕೂಡಾ ಒಪ್ಪಿಕೊಂಡಿದ್ದಾರೆ. ಆದರೆ, ಯಾವುದೇ ದೂರು ಸಲ್ಲಿಸಿಲ್ಲ ಎಂದೂ ಹೇಳಿದ್ದಾರೆ.

ವಿಧಾನಮಂಡಲ ಅಧಿವೇಶನದ ಆರಂಭದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿಯೇ ಕೆಲವು ಶಾಸಕರು ಸಚಿವರ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ವಿಶೇಷ ಅನುದಾನದ ಬಗ್ಗೆಯೂ ಬೇಡಿಕೆ ಇಟ್ಟಿದ್ದರು. ಆದರೆ, ಪ್ರಸಕ್ತ ವರ್ಷ ‘ಗ್ಯಾರಂಟಿ’ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಹಣದ ಅಗತ್ಯ ಇರುವುದರಿಂದ ವಿಶೇಷ ಅನುದಾನಕ್ಕೆ ಬೇಡಿಕೆ ಇಡದಂತೆ ಎಲ್ಲ ಶಾಸಕರಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದರು.

ಗುರುವಾರ ನಡೆಯಲಿರುವ ಸಿಎಲ್‌ಪಿ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ  ಭಾಗವಹಿಸುತ್ತಿದ್ದು, ಅವರ ಸಮ್ಮುಖದಲ್ಲಿಯೇ ಶಾಸಕರು ತಮ್ಮ ಅಹವಾಲು ಹೇಳಿಕೊಳ್ಳುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಹೇಳಿದರು.

ಮುಖ್ಯಮಂತ್ರಿಗೆ ಶಾಸಕರು ಬರೆದಿರುವ ಪತ್ರದ ಬಗ್ಗೆ ಬುಧವಾರ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಸಚಿವರ ವಿರುದ್ಧ ಶಾಸಕರು ಬರೆದಿದ್ದಾರೆ ಎನ್ನುವ ಪತ್ರ ನಕಲಿ. ಯಾರದ್ದೋ ಪತ್ರಕ್ಕೆ ಯಾವುದೋ ಸಹಿ ಸೇರಿಸಿ ಹಬ್ಬಿಸಿದರೆ ಅದಕ್ಕೆ ಪ್ರತಿಕ್ರಿಯೆ ನೀಡಲು ಆಗುವುದಿಲ್ಲ’ ಎಂದರು.

‘ನಾವು ಶಾಸಕರ ಸಭೆ ಕರೆದಿದ್ದು, ಅವರ ಜೊತೆ ಮಾತನಾಡುತ್ತೇವೆ. ಈ ವರ್ಷ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ನೀಡಲು ಆಗುವುದಿಲ್ಲ. ನೀರಾವರಿ ಸಚಿವನಾಗಿ ನನ್ನ ಇಲಾಖೆಗೂ ನೀಡಲು ಆಗುವುದಿಲ್ಲ. ಈ ವಿಚಾರವನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ವಿವರಿಸುತ್ತೇವೆ’ ಎಂದೂ ಹೇಳಿದರು.

‘ಕಳೆದ ಬಿಜೆಪಿ ಸರ್ಕಾರ ರಾಜ್ಯದ ಆರ್ಥಿಕತೆಯನ್ನು ದಿವಾಳಿ ಮಾಡಿದೆ. ಹೀಗಾಗಿ ಬಜೆಟ್ ಮಂಡನೆ ಸಮಯದಲ್ಲಿ ಸಚಿವರು ಕೂಡ ತಾಳ್ಮೆ ಇಟ್ಟುಕೊಳ್ಳಬೇಕು ಎಂದು ಮುಖ್ಯಮಂತ್ರಿ ಹೇಳಿದ್ದರು. ಹಿಂದಿನ ಸರ್ಕಾರದ ತಪ್ಪುಗಳನ್ನು ಸರಿಪಡಿಸಬೇಕು. ಜತೆಗೆ ‘ಗ್ಯಾರಂಟಿ’ ಮಾತನ್ನೂ ಉಳಿಸಿಕೊಳ್ಳಬೇಕಿದೆ’ ಎಂದೂ ಹೇಳಿದರು.

ಮುಖ್ಯಮಂತ್ರಿಗೆ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಶಾಸಕ ಬಿ.ಆರ್. ಪಾಟೀಲ ಅವರೇ ನಕಲಿ ಎಂದಿದ್ದಾರೆ. ಆದರೂ ಆ ಪತ್ರಕ್ಕೆ ಮಾಧ್ಯಮಗಳು ಪ್ರಚಾರ ನೀಡಿವೆ.
–ಸಿದ್ದರಾಮಯ್ಯ, ಮುಖ್ಯಮಂತ್ರಿ

ಸಿಎಂ ಬಳಿ ಕಷ್ಟ ಹೇಳಿಕೊಳ್ಳಬಾರದೇ?

ಹಾಸನ: ‘ಮುಖ್ಯಮಂತ್ರಿಗೆ ಯಾರು ಪತ್ರ ಬರೆದಿದ್ದಾರೋ ನನಗೆ ಗೊತ್ತಿಲ್ಲ. ನಾವು ಗೆದ್ದು ಮೂರು ತಿಂಗಳಾಯ್ತು. ನಮ್ಮ ಕಷ್ಟವನ್ನ ಮುಖ್ಯಮಂತ್ರಿ ಹತ್ತಿರ ಹೇಳಿಕೊಳ್ಳಬಾರದಾ’ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಹಾಗೂ ಸಚಿವರ ಬಳಿ ಹೇಳಿಕೊಳ್ಳುವುದರಲ್ಲಿ ತಪ್ಪೇನಿದೆ? ನಮ್ಮ ಕೆಲಸವನ್ನು ಎಲ್ಲ ಮಂತ್ರಿಗಳೂ ಮಾಡಿಕೊಟ್ಟಿದ್ದಾರೆ. ಸಭೆ ಕರಿಯಲಿ ಅಂತ ಪತ್ರ ಕೊಟ್ಟಿರಬೇಕು. ನಾನು ಎಚ್‌.ಡಿ.ಕುಮಾರಸ್ವಾಮಿ ಪಕ್ಷದಲ್ಲೇ ಇದ್ದವನು, ಅವರ ಲೆಕ್ಕಾಚಾರ ಏನೂ ಇಲ್ಲ. ಕತ್ತು ಹಿಡಿದು ನೂಕಿದರೂ ಯಾವ ಶಾಸಕರೂ ಕಾಂಗ್ರೆಸ್‌ ಬಿಟ್ಟು ಎಲ್ಲಿಗೂ ಹೋಗಲ್ಲ. ಅವರಿಗೆ ಬೇಕಿರುವುದು ಸಮಸ್ಯೆಗಳಿಗೆ ಸ್ಪಂದನೆ ಮಾತ್ರ’ ಎಂದರು.

‘ಮಂತ್ರಿ ಮಾಡಲಿಲ್ಲ ಎಂಬ ಕಾರಣಕ್ಕೆ ಬಿ.ಕೆ, ಹರಿಪ್ರಸಾದ್ ಅವರು ತಮ್ಮ ಕಷ್ಟವನ್ನು  ಸಮಾಜದ ಎದುರು ತೋಡಿಕೊಂಡಿದ್ದಾರೆ. ಅದು ವೈರಲ್ ಆಯ್ತು. ಅವರು ಸಿದ್ದರಾಮಯ್ಯ ಹೆಸರು ಹೇಳಿದ್ದಾರಾ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT