ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ತಂದಿದ್ದ ಮತಾಂತರ, ಎಪಿಎಂಸಿ ಕಾಯ್ದೆ ವಾಪಸ್: ಕಾಂಗ್ರೆಸ್ ತೀರ್ಮಾನ

Published 15 ಜೂನ್ 2023, 19:32 IST
Last Updated 15 ಜೂನ್ 2023, 19:32 IST
ಅಕ್ಷರ ಗಾತ್ರ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿದ್ದ ವಿವಾದಿತ ಮತಾಂತರ ನಿಷೇಧ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆಗಳು ಹಾಗೂ ಕೇಸರೀಕರಣದ ಆಪಾದನೆಗೆ ಗುರಿಯಾಗಿದ್ದ ಪಠ್ಯಪುಸ್ತಕಗಳ ಪರಿಷ್ಕರಣೆಯನ್ನು ಕೈಬಿಡಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ

ಅಧಿವೇಶನದಲ್ಲಿ ಮಸೂದೆ

ಬೆಂಗಳೂರು: ಮತಾಂತರವನ್ನು ನಿಷೇಧಿಸುವ ಮತ್ತು ಮತಾಂತರ ಮಾಡುವವರನ್ನು ಗರಿಷ್ಠ 10 ವರ್ಷ ಜೈಲು ಶಿಕ್ಷೆಗೆ ಗುರಿಪಡಿಸಲು ಅವಕಾಶವಿದ್ದ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ 2021’(ಮತಾಂತರ ನಿಷೇಧ) ಅನ್ನು ರದ್ದು ಪಡಿಸಲು ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಈ ಸಂಬಂಧ ಮಸೂದೆ ಮಂಡಿಸಲಾಗುವುದು ಎಂದರು. 

2021 ರಲ್ಲೇ ಈ ಸಂಬಂಧ ಮಸೂದೆಗೆ ವಿಧಾನಸಭೆ ಅಂಗೀಕಾರ ನೀಡಿದ್ದರೂ ವಿಧಾನಪರಿಷತ್ತಿನಲ್ಲಿ ಅಂಗೀಕಾರ ಸಿಕ್ಕಿರಲಿಲ್ಲ. ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಬಹುಮತ ಪಡೆದ ಬಳಿಕ ಈ ಮಸೂದೆಗೆ ಅಂಗೀಕಾರ ಪಡೆದುಕೊಂಡಿತ್ತು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಈ ಮಸೂದೆಯನ್ನು ವಿರೋಧಿಸಿದ್ದವು.

ಆಮಿಷ, ಪ್ರಲೋಭನೆ, ಉದ್ಯೋಗ, ಉಚಿತ ಶಿಕ್ಷಣ, ನಗದು, ಮದುವೆ ಆಗುವುದಾಗಿ ವಾಗ್ದಾನ, ಉತ್ತಮ ಜೀವನ ಶೈಲಿಯ ಭರವಸೆ, ದೈವಿಕ ಸಂತೋಷ, ಒತ್ತಾಯ, ವಂಚನೆ ಮೂಲಕ ಮತಾಂತರ ಮಾಡುವುದನ್ನು ನಿಷೇಧಿಸುವ ಅಂಶಗಳನ್ನು ಕಾಯ್ದೆ ಒಳಗೊಂಡಿತ್ತು.

ಯಾವುದೇ ಒಂದು ಧರ್ಮದ ಆಚರಣೆಗಳನ್ನು ಅವಹೇಳನ ಮಾಡುವುದನ್ನೂ ಆಮಿಷ ಎಂದೇ ಪರಿಗಣಿಸಲಾಗಿತ್ತು. ಮತಾಂತರ ಮಾಡಿದರೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸ ಲಾಗುತ್ತಿತ್ತು.

ಮತಾಂತರ ಆಗಲು ಇಚ್ಛೆ ಇದ್ದವರು, ಸಂಬಂಧ ಪಟ್ಟ ಪ್ರಾಧಿಕಾರದ ಎದುರು ಅರ್ಜಿ ಸಲ್ಲಿಸಬೇಕಿತ್ತು. ಮತಾಂತರ ಕುರಿತ ಅರ್ಜಿಯನ್ನು ಸದರಿ ಕಚೇರಿಯಲ್ಲಿ ಪ್ರಕಟಿಸಿ, ಆಕ್ಷೇಪ ಸಲ್ಲಿಸಲು ಅವಕಾಶ ಇತ್ತು. ಸಂಬಂಧಿ ಮಾತ್ರವಲ್ಲದೇ, ಯಾರು ಬೇಕಾದರೂ ಆಕ್ಷೇಪಣೆ ಸಲ್ಲಿಸಲೂ ಅವಕಾಶ ನೀಡಲಾಗಿತ್ತು. 

ಈ ಕಾಯ್ದೆಯು ತಮಗೆ ಬೇಕಾದ ಮತವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಕಿತ್ತುಕೊಂಡಂತೆ ಎಂದು ಅನೇಕರು ಆರೋಪಿಸಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಮತಾಂತರ ಕಾಯ್ದೆಯನ್ನು ವಾಪಸ್ ಪಡೆಯುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿತ್ತು. ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದು ತಿಂಗಳಿನಲ್ಲೇ ಈ ಕಾಯ್ದೆಯನ್ನು ವಾಪಸ್ ಪಡೆಯುವ ನಿರ್ಣಯ ಕೈಗೊಳ್ಳಲಾಗಿದೆ.

ಕರ್ನಾಟಕ ಕೃಷಿ ಉತ್ಪನ್ನಗಳ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ)(ತಿದ್ದುಪಡಿ) ಕಾಯ್ದೆಯನ್ನೂ ಹಿಂದಕ್ಕೆ ಪಡೆಯಲು ನಿರ್ಧರಿಸಲಾಗಿದೆ. ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿದ ಮೇಲೆ  ಸರ್ಕಾರದ ಉದ್ದೇಶ ಈಡೇರಲಿಲ್ಲ. ರೈತರಿಗೆ ಉತ್ತಮ ಬೆಲೆ ಸಿಕ್ಕಿರಲಿಲ್ಲ. ಇದರಿಂದ ಲಕ್ಷಾಂತರ ಕುಟುಂಬಗಳಿಗೆ ಕಹಿ ಅನುಭವ ಆಗಿದೆ. ಸಾಕಷ್ಟು ಜನರು ಹಾನಿ ಅನುಭವಿಸಿದ್ದಾರೆ. ಮಾರುಕಟ್ಟೆಯಲ್ಲಿ ವ್ಯಾಪಾರವೂ ಕುಸಿತವಾಗಿತ್ತು ಎಂದು ಶಿವಾನಂದ ಪಾಟೀಲ ತಿಳಿಸಿದರು.

ಇನ್ನು ಮುಂದೆ ವ್ಯಾಪಾರಕ್ಕೆ ಪರವಾನಗಿ ಪಡೆಯಬೇಕು, ಮಾರುಕಟ್ಟೆ ಒಳಗೆ ಇರುವ ಕಾನೂನು ಹೊರಗೂ ಅನ್ವಯವಾಗುತ್ತದೆ. ಮಾರುಕಟ್ಟೆ ಒಳಗೆ ಎಷ್ಟು ಶುಲ್ಕ ಕಟ್ಟುತ್ತಾರೋ ಹೊರಗೆ ವ್ಯಾಪಾರ ಮಾಡುವವರೂ ಅಷ್ಟೇ ಶುಲ್ಕ ಪಾವತಿಸಬೇಕಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT