ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಣ್ಣ, ಶಾಮನೂರ್‌ಗೆ ವರಿಷ್ಠರ ಎಚ್ಚರಿಕೆ?

Published 29 ಜನವರಿ 2024, 16:10 IST
Last Updated 29 ಜನವರಿ 2024, 16:10 IST
ಅಕ್ಷರ ಗಾತ್ರ

ಬೆಂಗಳೂರು: ಹೈಕಮಾಂಡ್‌ ವಿರುದ್ಧವೇ ಧ್ವನಿ ಎತ್ತಿದ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಮತ್ತು ಬಿಜೆಪಿ ಸಂಸದ ‌ಬಿ.ವೈ. ರಾಘವೇಂದ್ರ ಅವರನ್ನು ಶಿವಮೊಗ್ಗದಲ್ಲಿ ಮತ್ತೊಮ್ಮೆ ಗೆಲ್ಲಿಸಿ‌ ಎಂದು ಹೇಳಿಕೆ ನೀಡಿದ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಪಕ್ಷದ ವರಿಷ್ಠರು ಎಚ್ಚರಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ರಾಜಣ್ಣ ಅವರಿಗೆ ಕರೆ ಮಾಡಿದ ವರಿಷ್ಠರು, ‘ನಿಮಗೆ ಚುನಾವಣೆಯಲ್ಲಿ ಟಿಕೆಟ್‌ ಪಡೆಯಲು, ಗೆಲ್ಲಲು, ಬಳಿಕ ಮಂತ್ರಿ ಮಾಡಲು ಹೈಕಮಾಂಡ್‌ ಬೇಕಾಗಿತ್ತಲ್ಲವೇ? ನಿಮಗೆ ತೋಚಿದಂತೆ ಮಾತನಾಡುತ್ತಿರುವುದರಿಂದ ನಿಮಗಲ್ಲ, ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುತ್ತಿದೆ. ಇದೇ ಮೊದಲು, ಇದೇ ಕೊನೆ. ಇದೇ ರೀತಿ ಮಾತನಾಡಿದರೆ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ತಾಕೀತು ಮಾಡಿದ್ದಾರೆ ಎಂದು ಗೊತ್ತಾಗಿದೆ.

ಶಾಮನೂರು ಅವರಿಗೂ ಕರೆ ಮಾಡಿರುವ ವರಿಷ್ಠರು, ‘ಪಕ್ಷದಲ್ಲಿ ಅತ್ಯಂತ ಹಿರಿಯರಾದ ನೀವು, ಇನ್ನೊಂದು ಪಕ್ಷದವರನ್ನು ಗೆಲ್ಲಿಸಿ ಎಂದು ಕರೆ ಕೊಡುವುದು ಸರಿಯಲ್ಲ? ನಿಮ್ಮ ಹಿರಿತನಕ್ಕೆ ಗೌರವ ಕೊಟ್ಟಿದ್ದೇವೆ. ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ’ ಎಂದು ಎಚ್ಚರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ನಿಗಮ ಮಂಡಳಿಗಳಿಗೆ ನೇಮಕ ವಿಚಾರದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲವೆಂದು ಪಕ್ಷದ ಹೈಕಮಾಂಡ್‌ ವಿರುದ್ಧ ಇತ್ತೀಚೆಗೆ ಆಕ್ರೋಶ ವ್ಯಕ್ತಪಡಿಸಿದ್ದ ರಾಜಣ್ಣ, ‘ನಾವೇನು ಹೈಕಮಾಂಡ್ ಗುಲಾಮರಾ? ಈ ರೀತಿ ಸವಾರಿ ಮಾಡುವುದನ್ನು ಸಹಿಸುವುದಿಲ್ಲ’ ಎಂದಿದ್ದರು.

ಶಿವಮೊಗ್ಗದಲ್ಲಿ ‘ಗುರು ಬಸವಶ್ರೀ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ್ದ ಅಖಿಲ ಭಾರತ ವೀರಶೈವಲ ಮಹಾಸಭಾದ ಅಧ್ಯಕ್ಷರೂ ಆಗಿರುವ ಶಾಮನೂರು, ‘ಶಿವಮೊಗ್ಗ ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನು ಗಮನಿಸಿದರೆ ನೀವು ಉತ್ತಮ ಸಂಸದರನ್ನೇ ಆಯ್ಕೆ ಮಾಡಿದ್ದೀರಿ ಎಂಬುವುದು ತಿಳಿಯುತ್ತದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಬಿ.ವೈ. ರಾಘವೇಂದ್ರ ಅವರನ್ನೇ ಆಯ್ಕೆ ಮಾಡಿ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT