ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರಿಗೆ ಕಾಂಗ್ರೆಸ್, ಜೆಡಿಎಸ್‌ನಿಂದ ಅನ್ಯಾಯ: ಸಚಿವ ಬಿ.ಶ್ರೀರಾಮುಲು

Last Updated 27 ಅಕ್ಟೋಬರ್ 2022, 9:48 IST
ಅಕ್ಷರ ಗಾತ್ರ

ಮೈಸೂರು: ‘ಪರಿಶಿಷ್ಟರಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಅನ್ಯಾಯ–ಮೋಸ ಮಾಡಿವೆ. ನ್ಯಾಯ ಒದಗಿಸಿದ ಪಕ್ಷವಿದ್ದರೆ ಅದು ಬಿಜೆಪಿ ಮಾತ್ರ’ ಎಂದು ಸಾರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.

ಬಿಜೆಪಿಯಿಂದ ನ.20ರಂದು ಬಳ್ಳಾರಿಯಲ್ಲಿ ಆಯೋಜಿಸಿರುವ ಪರಿಶಿಷ್ಟ ಪಂಗಡದವರ ಸಮಾವೇಶದ ಪೂರ್ವಭಾವಿಯಾಗಿ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಪರಿವಾರ, ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣಪತ್ರ ಕೊಡಿಸಬೇಕೆಂದು ಅನೇಕ ದಶಕಗಳಿಂದ ಹೋರಾಟ ನಡೆದಿತ್ತು. ಆದರೆ, ಹಿಂದಿನ ಸರ್ಕಾರದವರು ಸ್ಪಂದಿಸಿರಲಿಲ್ಲ. ಬಿಜೆಪಿಯೇ ಅದನ್ನೂ ಮಾಡಿತು. ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಿಸಲಾದೀತೇ, ಶ್ರೀರಾಮುಲು ಬೊಗಳೆ ಬಿಡುತ್ತಿದ್ದಾರೆ ಎಂಬಿತ್ಯಾದಿಯಾಗಿ ಯಾರ‍್ಯಾರೋ, ಏನೇನೋ ಮಾತನಾಡಿದರೂ ನಾನು ಹಿಂದೆ ಸರಿಯಲಿಲ್ಲ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಟೀಕಿಸಿದರು.‌ ಅವರಿಗೆ ಅಧಿಕಾರ ಸಿಕ್ಕಿದ್ದಾಗ ರಾಜಕೀಯ ಇಚ್ಛಾಶಕ್ತಿ ತೋರಿಸಲಿಲ್ಲವೇಕೆ’ ಎಂದು ವಾಗ್ದಾಳಿ ನಡೆಸಿದರು.

ಲಕ್ಷಾಂತರ ಸಂಖ್ಯೆಯಲ್ಲಿ ಸೇರಬೇಕು

‘ನಾವು ರಾಜಕೀಯದಲ್ಲಿ ಇರುತ್ತೇವೆಯೋ‌, ಇಲ್ಲವೋ ಗೊತ್ತಿಲ್ಲ. ಆದರೆ, ಮೀಸಲಾತಿ ಹೆಚ್ಚಳವಾದ್ದರಿಂದ ನಮ್ಮ ಮಕ್ಕಳಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಹೆಚ್ಚಿನ ಮೀಸಲಾತಿ ಸಿಗುತ್ತದೆಯಲ್ಲವೇ? ಇದಕ್ಕಾಗಿ ಸರ್ಕಾರಕ್ಕೆ ನಾವು ಕೃತಜ್ಞತೆ ಸಲ್ಲಿಸಬೇಕಲ್ಲವೇ? ಆದ್ದರಿಂದ ಬಳ್ಳಾರಿ ಸಮಾವೇಶದಲ್ಲಿ ಶಕ್ತಿ ಪ್ರದರ್ಶನ ಮಾಡಬೇಕು. ಇದಕ್ಕಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಸಮಾಜದವರು ಸೇರಬೇಕು. ಬೇರೆ ಪಕ್ಷದಲ್ಲಿರುವ ಸಮುದಾಯದವರೂ ಬರಬೇಕು’ ಎಂದು ಕೋರಿದರು.

‘ಕಾಂಗ್ರೆಸ್‌ನವರು ನಮ್ಮ ಸಮಾಜಕ್ಕೆ ಒಂದಾದರೂ ಒಳ್ಳೆಯ ಕೆಲಸ ಮಾಡಿಕೊಟ್ಟಿದ್ದಾರಾ? ಮಾಡಿದ್ದರೆ ಚರ್ಚೆಗೆ ಬರಲಿ’ ಎಂದು ಸವಾಲು ಹಾಕಿದರು. ‌

‘ಈಗ ಮೀಸಲಾತಿ ಹೆಚ್ಚಳ ಅನುಷ್ಠಾನ ಕಷ್ಟ ಎಂದೂ ವಿರೋಧ ‌ಪಕ್ಷದವರು ಹೇಳಿದ್ದರು. ಆದರೆ, ನಮ್ಮ ಸರ್ಕಾರ ಬದ್ಧತೆ ಪ್ರದರ್ಶಿಸಿದೆ. ಇದನ್ನು ನಾನೊಬ್ಬನೇ ಮಾಡಿದೆ ಎನ್ನುವುದಿಲ್ಲ.‌ ಸ್ವಾಮೀಜಿ ಹಾಗೂ ಸರ್ಕಾರ ಎಲ್ಲವೂ ಸೇರಿದ್ದರಿಂದ ಆಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾವು ಅಭಿನಂದನೆಗಳನ್ನು ಸಲ್ಲಿಸಬೇಕು. ಬಳ್ಳಾರಿಯಲ್ಲಿ 10 ಲಕ್ಷ ಮಂದಿ ಸೇರಬೇಕು. ಮೈಸೂರು ಚಾಮರಾಜನಗರದಿಂದ 50ಸಾವಿರ ಜನ ಬರುವುದಾಗಿ ತಿಳಿಸಿದರೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸುತ್ತೇನೆ. ಎಲ್ಲರೂ ತಿರುಗಿ ನೋಡುವಂಥ ದೊಡ್ಡ ಸಮಾವೇಶ ನಡೆಸೋಣ’ ಎಂದರು.

ಶ್ರೀರಾಮುಲು ಮುಖ್ಯಮಂತ್ರಿ ಮಾಡಲು

ಪಕ್ಷದ ರಾಜ್ಯ ಎಸ್.ಟಿ.ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ, ‘ಬಿಜೆಪಿ‌ ಸರ್ಕಾರ ಬಂದಾಗಲೆಲ್ಲ ಈ ಸಮುದಾಯದ ಪರವಾಗಿ ಕೆಲಸ ಮಾಡಿದೆ. ವಾಲ್ಮೀಕಿ ಭವನಗಳನ್ನು ನಿರ್ಮಿಸಿದವರು ನಾವು. ಈ ಮೀಸಲಾತಿ ಹೆಚ್ಚಿಸಿ ದೊಡ್ಡ ಕೊಡುಗೆಯನ್ನು ಸರ್ಕಾರ ನೀಡಿದೆ’ ಎಂದು ಹೇಳಿದರು.

‘ಶ್ರೀರಾಮುಲು, ಜೇನುಗೂಡಿಗೆ ಕೈ ಹಾಕುವ ಸಾಹಸವನ್ನು ಮಾಡಿದ್ದಾರೆ. ಜೇನು ಕಚ್ಚುವುದನ್ನು ತಡೆದು ನಾಜೂಕಾಗಿ ಸಮಸ್ಯೆ ಬಗೆಹರಿಸಿದ್ದಾರೆ’ ಎಂದು ಶ್ಲಾಘಿಸಿದರು.

‘ಮೈಸೂರು–ಚಾಮರಾಜನಗರ ಜಿಲ್ಲೆಗಳಿಂದ ಕನಿಷ್ಟ ನೂರು ಬಸ್‌ಗಳಲ್ಲಿ ಬಳ್ಳಾರಿಗೆ ಬರಬೇಕು. ಜತೆಗೆ ಶ್ರೀರಾಮುಲು ಕೈಬಲಪಡಿಸಬೇಕು. ಅವರನ್ನು ಮುಖ್ಯಮಂತ್ರಿ ಮಾಡುವ ನಿಟ್ಟಿನಲ್ಲಿ ನಾವು ಸಂಪೂರ್ಣ ಸಹಕಾರ ಕೊಡಬೇಕು’ ಎಂದು ಹೇಳಿದರು.‌

ಪಕ್ಷದ ರಾಜ್ಯ ಎಸ್.ಟಿ. ಮೋರ್ಚಾ ಅಧ್ಯಕ್ಷ ತಿಪ್ಪರಾಜು ಹವಾಲ್ದಾರ್ ಮಾತನಾಡಿದದರು. ಮೇಯರ್ ಶಿವಕುಮಾರ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ಪಕ್ಷದ ನಗರ ಘಟಕದ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಳಾ, ಮುಖಂಡರಾದ ಅಪ್ಪಣ್ಣ, ಲಕ್ಷ್ಮಣ, ಮಲ್ಲೇಶ್ ನಾಯಕ ಇದ್ದರು.

ವಿಜಯಕುಮಾರ್ ಪ್ರಾರ್ಥಿಸಿದರು. ಮಹೇಶ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT