ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಪತಿ ನೇಮಕಕ್ಕೆ ಶಾಶ್ವತ ಪರಿಶೋಧನಾ ಸಮಿತಿ: ಬಿ.ಕೆ.ಚಂದ್ರಶೇಖರ್ ಒತ್ತಾಯ

Published 17 ಆಗಸ್ಟ್ 2023, 16:18 IST
Last Updated 17 ಆಗಸ್ಟ್ 2023, 16:18 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವವಿದ್ಯಾಲಯಗಳ ಕುಲಪತಿ ನೇಮಕಕ್ಕೆ ಶಿಕ್ಷಣ ತಜ್ಞರನ್ನು ಒಳಗೊಂಡ ಶಾಶ್ವತ ಪರಿಶೋಧನಾ ಸಮಿತಿ ರಚಿಸಬೇಕು ಎಂದು ಕಾಂಗ್ರೆಸ್‌ ಮುಖಂಡ ಪ‍್ರೊ. ಬಿ.ಕೆ.ಚಂದ್ರಶೇಖರ್ ಒತ್ತಾಯಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಈಚಿನ ವರ್ಷಗಳಲ್ಲಿ ಕುಲಪತಿಗಳ ನೇಮಕದಲ್ಲಿ ಪಾರದರ್ಶಕತೆ ಕಾಣುತ್ತಿಲ್ಲ. ಹಣ ನೀಡಿ ಹುದ್ದೆ ಪಡೆಯಲಾಗುತ್ತಿದೆ. ಹೀಗೆ ನೇಮಕವಾದವರು ರಾಜಕೀಯ ಹಿಡಿತದಲ್ಲೇ ಕೆಲಸ ಮಾಡುತ್ತಿದ್ದಾರೆ. ಸಿಂಡಿಕೇಟ್‌ಗಳಲ್ಲೂ ಸರ್ಕಾರ ನಾಮನಿರ್ದೇಶನ ಆರಂಭಿಸಿದ ನಂತರ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಉನ್ನತ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂದರು.

ಹಾಗಾಗಿ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆಗೆ ತಿದ್ದುಪಡಿ ತರಬೇಕು. ಕುಲಪತಿಗಳ ಆಯ್ಕೆಗೆ ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ತಜ್ಞರನ್ನು ಒಳಗೊಂಡ ಶಾಶ್ವತ ಪರಿಶೋಧನಾ ಸಮಿತಿ ರಚಿಸಬೇಕು. ಆ ಸಮಿತಿಯು ಅರ್ಹರಾದ ಒಬ್ಬರನ್ನು ಮಾತ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ರಾಜ್ಯಪಾಲರಿಗಿರುವ ಅಧಿಕಾರವನ್ನು ಹಿಂಪಡೆಯಬೇಕು ಎಂದರು. 

ವಿಶ್ವವಿದ್ಯಾಲಯ ಖಾಸಗೀಕರಣ, ಭಾರತದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಎನ್‌ಇಪಿ ಅವಕಾಶ ಮಾಡಿಕೊಟ್ಟಿದೆ. ಇದು ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ದೊಡ್ಡ ಪೆಟ್ಟು. ಉನ್ನತ ಶಿಕ್ಷಣದಲ್ಲಿನ ಮೀಸಲಾತಿಗೂ ಧಕ್ಕೆಯಾಗಲಿದೆ ಎಂದು ದೂರಿದರು. 

ಉನ್ನತ ಶಿಕ್ಷಣದ ಕೆಳ ಹಂತದಲ್ಲಿ ಲಂಚ: ‘ಕಡತ ವಿಲೇವಾರಿಗೆ ಉನ್ನತ ಶಿಕ್ಷಣ ಇಲಾಖೆಯ ಕೆಳ ಹಂತದ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ. ಹಾಸನ ಜಿಲ್ಲೆಯ ಕಾಲೇಜೊಂದರ ಟ್ರಸ್ಟ್‌ನ ಹೆಸರು ಬದಲಾವಣೆ, ಸ್ಥಳಾಂತರಕ್ಕೆ ಇಬ್ಬರು ಅಧಿಕಾರಿಗಳು ಹಣ ಪಡೆದಿದ್ದಾರೆ. ಇದನ್ನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಮನಕ್ಕೆ ತಂದಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT