ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆ ನೌಕರರಿಗೂ ಹೆರಿಗೆ ರಜೆ: ಹೈಕೋರ್ಟ್‌

ಚಳ್ಳಕೆರೆಯ ಬಿ.ಟಿ. ನೇತ್ರಾವತಿ ಸಲ್ಲಿಸಿದ್ದ ರಿಟ್ ಅರ್ಜಿ ಆಧರಿಸಿ ಆದೇಶ
Last Updated 15 ಅಕ್ಟೋಬರ್ 2018, 18:55 IST
ಅಕ್ಷರ ಗಾತ್ರ

ಬೆಂಗಳೂರು: ‘ಹೆರಿಗೆ ರಜೆ ನೀಡುವಾಗ ಗುತ್ತಿಗೆ ಆಧಾರದಲ್ಲಿ ದುಡಿಯುವವರು ಹಾಗೂ ಕಾಯಂ ನೌಕರರು ಎಂಬ ತಾರತಮ್ಯ ತೋರುವಂತಿಲ್ಲ. ಕಾಯಂ ನೌಕರರಿಗೆ ನೀಡುವಷ್ಟೇ ಹೆರಿಗೆ ರಜೆಯನ್ನು ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವವರಿಗೂ ನೀಡಬೇಕು’ ಎಂದು ಹೈಕೋರ್ಟ್‌ ಆದೇಶಿಸಿದೆ.

‘ಆರ್ಥಿಕವಾಗಿ ಸಬಲರಾಗಲು ಮತ್ತು ಸಶಕ್ತ ಜೀವನ ರೂಪಿಸಿಕೊಳ್ಳಲುಇಂದು ಮಹಿಳೆಯರೂ ವಿವಿಧ ಕ್ಷೇತ್ರಗಳಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಇವರಿಗೆಲ್ಲಾ ಹೆರಿಗೆ ರಜೆ ನಿರಾಕರಿಸಿದರೆ ಅದು ಸಾಮಾಜಿಕ ನ್ಯಾಯಕ್ಕೆ ಎಸಗುವ ಅಪಚಾರವಾಗುತ್ತದೆ’ ಎಂದು ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?: ಚಳ್ಳಕೆರೆ ‍ಪುರಸಭೆಯಲ್ಲಿ ಬಿ.ಟಿ.ನೇತ್ರಾವತಿ ಅಕೌಂಟೆಂಟ್‌ ಆಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಅವರು 2013ರ ಜುಲೈ 31ರಂದು ಹೆರಿಗೆ ರಜೆ ಕೋರಿದ್ದರು.

ಈ ಕೋರಿಕೆಗೆ ಹಿಂಬರಹ ನೀಡಿದ್ದ ಪುರಸಭೆ ಮುಖ್ಯಾಧಿಕಾರಿ, ‘ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಅಡಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಹಾಗೂ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಸಂಘಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ನೌಕರರಿಗೆ ಮಾತ್ರ ಹೆರಿಗೆ ರಜೆ ಅನ್ವಯ ಆಗುತ್ತದೆ’ ಎಂದು ತಿಳಿಸಿದ್ದರು.

‘ನಿಮ್ಮನ್ನು ಪೌರ ಸುಧಾರಣಾ ಯೋಜನೆ (ಕೆಎಂಆರ್‌ಪಿ) ಅಡಿಯಲ್ಲಿ ತಾತ್ಕಾಲಿಕ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಆದ್ದರಿಂದ, ನಿಮಗೆ ಹೆರಿಗೆ ರಜೆ ಇರುವುದಿಲ್ಲ’ ಎಂದು ವಿವರಿಸಿದ್ದರು. ನಂತರ, 2013ರ ನವೆಂಬರ್ 11ರಂದು ಚಿತ್ರದುರ್ಗ ಜಿಲ್ಲಾಧಿಕಾರಿಗಳು ನೇತ್ರಾವತಿ ಅವರನ್ನು ಕೆಲಸ
ದಿಂದ ತೆಗೆದು ಹಾಕಲು ಆದೇಶಿಸಿದ್ದರು.

ಈ ಆದೇಶವನ್ನು 2013ರಲ್ಲಿ ಪ್ರಶ್ನಿಸಲಾಗಿತ್ತು. ರಿಟ್‌ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಪೀಠ, ‘ಭಾರತದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಬಹಳಷ್ಟು ಮಹಿಳೆಯರು ಗ್ರಾಮೀಣ ಪ್ರದೇಶದಿಂದ ಬಂದವರಾಗಿರುತ್ತಾರೆ. ಇವರಲ್ಲಿ, ದಿನಗೂಲಿ ಮತ್ತು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರೇ ಹೆಚ್ಚಿದ್ದಾರೆ. ಇಂಥವರ ಸಾಂವಿಧಾನಿಕ ಹಕ್ಕುಗಳನ್ನು ಯಾರೂ ಕಸಿಯುವಂತಿಲ್ಲ’ ಎಂದು ಸ್ಪಷ್ಟವಾಗಿ ತಿಳಿಸಿದೆ.

‘ಹೆರಿಗೆ ರಜೆ ಸೌಲಭ್ಯ ಕಾಯ್ದೆ–1961ರ ಅನುಸಾರ ಗುತ್ತಿಗೆ ಆಧಾರದಲ್ಲಿ ದುಡಿಯುವವರಿಗೂ 180 ದಿನಗಳ ಹೆರಿಗೆ ರಜೆ ಸಿಗಬೇಕು’ ಎಂದು ಹೇಳಿದೆ. ಅರ್ಜಿದಾರ ನೇತ್ರಾವತಿ ನೇಮಕ ರದ್ದುಗೊಳಿಸಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ನ್ಯಾಯಪೀಠ ವಜಾಗೊಳಿಸಿದೆ.

ಅರ್ಜಿದಾರರ ಪರ ವಕೀಲ ಬಿ.ಬಿ.ಬಜಂತ್ರಿ ವಾದ ಮಂಡಿಸಿದ್ದರು.

****

‘3 ತಿಂಗಳಲ್ಲಿ ಪುನರ್ ನೇಮಕ ಮಾಡಿ’

‘ನೇತ್ರಾವತಿ ಅವರನ್ನು ಮೂರು ತಿಂಗಳ ಒಳಗೆ ಮರು ನೇಮಕ ಮಾಡಬೇಕು’ ಎಂದೂ ನ್ಯಾಯಪೀಠ ಚಿತ್ರದುರ್ಗ ಜಿಲ್ಲಾಧಿಕಾರಿಗೆ ತಾಕೀತು ಮಾಡಿದೆ.

‘ಅಂತೆಯೇ, ಹೆರಿಗೆಯಾದ ದಿನದಿಂದ ಮರು ನೇಮಕ ಆಗುವ ಅವಧಿಯವರೆಗಿನ ನೇತ್ರಾವತಿ ಅವರ ತಿಂಗಳ ವೇತನದ ಹಿಂಬಾಕಿಯಲ್ಲಿ ಶೇ 25ರಷ್ಟನ್ನು ಪಾವತಿ ಮಾಡಬೇಕು’ ಎಂದೂ ನ್ಯಾಯಪೀಠ ಆದೇಶಿಸಿದೆ.

****

ರಜೆ ನಿರಾಕರಿಸಿದ್ದು ಮತ್ತು ನೇಮಕ ರದ್ದುಗೊಳಿಸಿದ್ದು ದುರದೃಷ್ಟಕರ. ನಿರಾಕರಣೆಗೆ ಸಕಾರಣ ನೀಡಿಲ್ಲ ಮತ್ತು ಜಿಲ್ಲಾಡಳಿತದ ಆದೇಶ ಏಕಪಕ್ಷೀಯವಾಗಿದೆ
-ಎಲ್. ನಾರಾಯಣಸ್ವಾಮಿ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT