ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆದಾರರ ಆತ್ಮಹತ್ಯೆ, ನೇಮಕಾತಿ ಅಕ್ರಮಗಳ ಸಮಗ್ರ ತನಿಖೆ: ಎಂ.ಬಿ. ಪಾಟೀಲ

Published 22 ಮೇ 2023, 14:19 IST
Last Updated 22 ಮೇ 2023, 14:19 IST
ಅಕ್ಷರ ಗಾತ್ರ

ತುಮಕೂರು: ಹಿಂದಿನ ಸರ್ಕಾರದ ಅವಧಿಯಲ್ಲಿ ಕಿರುಕುಳದಿಂದ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಸಮಗ್ರವಾಗಿ ತನಿಖೆ ಮಾಡಲಾಗುವುದು. ಇದರಿಂದ ಬಿಜೆಪಿ ಸರ್ಕಾರದಲ್ಲಿ ನಡೆದಿರುವ ಅಕ್ರಮಗಳು ಬಯಲಿಗೆ ಬರಲಿವೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.

ಸಿದ್ಧಗಂಗಾ ಮಠಕ್ಕೆ ಸೋಮವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರು ಇ.ಡಿ, ಐ.ಟಿ, ಸಿಬಿಐ ಬಳಸಿಕೊಂಡು ಎಲ್ಲೆಡೆ ದಾಳಿ ಮಾಡಿಸುತ್ತಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಶೇ 40ರಷ್ಟು ಕಮಿಷನ್ ಆರೋಪ ಮಾಡಿ ಎರಡು ವರ್ಷ ಕಳೆದಿದ್ದರೂ ಈವರೆಗೂ ಅಕ್ರಮ ನಡೆಸಿದ ಒಬ್ಬರ ಮೇಲೂ ದಾಳಿ ನಡೆಸಿಲ್ಲ’ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಭ್ರಷ್ಟಾಚಾರಕ್ಕೆ ದಾಖಲೆ ಕೊಡುವಂತೆ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಳುತ್ತಾರೆ. ಮಾಡಾಳ್ ವಿರುಪಾಕ್ಷಪ್ಪ ಮನೆಯಲ್ಲಿ ಕೋಟಿ, ಕೋಟಿ ಹಣ ಸಿಕ್ಕಿದೆ. ಸಬ್‌ಇನ್‌ಸ್ಪೆಕ್ಟರ್‌ ನೇಮಕಾತಿ ಅಕ್ರಮದಲ್ಲಿ ಅಂದಿನ ಎಡಿಜಿಪಿ ಅಮೃತ್ ಪಾಲ್ ಜೈಲು ಸೇರಿದ್ದಾರೆ. ರಾಜ್ಯದೆಲ್ಲೆಡೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೆ ಎಂದು ಪಾಟೀಲ ಪ್ರಶ್ನಿಸಿದರು.

ನೇಮಕಾತಿ ಅಕ್ರಮ: ಸಮಗ್ರ ತನಿಖೆ

ನೀರಾವರಿ, ಲೋಕೋಪಯೋಗಿ, ಬೆಂಗಳೂರು ಅಭಿವೃದ್ಧಿ, ವಿವಿಧ ನೇಮಕಾತಿ ಅಕ್ರಮಗಳ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಲಾಗುವುದು. ಇದರಿಂದ ಸತ್ಯ ಹೊರ ಬರಲಿದೆ. ದಾಖಲೆ ಕೇಳುವವರಿಗೆ ತನಿಖೆಯಲ್ಲಿ ಉತ್ತರ ಸಿಗಲಿದೆ. ಹಿಂದಿನ ಸರ್ಕಾರದ ಅವಧಿಯ ಎಲ್ಲಾ ಹಗರಣಗಳ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದರು.

ಮೀಸಲಾತಿ: ‘ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿರುವುದು ಕೋರ್ಟ್‌ನಲ್ಲಿ ನಿಲ್ಲುವುದಿಲ್ಲ. ಒಟ್ಟಾರೆ ಮೀಸಲಾತಿ ಪ್ರಮಾಣ ಶೇ 50ರಷ್ಟು ಮೀರುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನಮ್ಮ ಮುಂದಿದೆ. ಈಗ ಮೀಸಲಾತಿ ಪ್ರಮಾಣವನ್ನು ಶೇ 56ಕ್ಕೆ ಹೆಚ್ಚಿಸಿದ್ದು, ಇದಕ್ಕೆ ಕೋರ್ಟ್ ಒಪ್ಪುವುದಿಲ್ಲ. ಲಿಂಗಾಯತರು, ಒಕ್ಕಲಿಗರು ಮೀಸಲಾತಿ ಹೆಚ್ಚಿಸುವಂತೆ ಕೇಳಿದ್ದರೇ ಹೊರತು, ಮುಸ್ಲಿಮರ ಮೀಸಲಾತಿ ಕಿತ್ತು ನಮಗೆ ಕೊಡಿ ಎಂದು ಹೇಳಿಲ್ಲ. ಮುಸ್ಲಿಮರ ಮೀಸಲಾತಿ ಕಿತ್ತುಕೊಂಡಿದ್ದೂ ಸರಿಯಲ್ಲ. ಪರಿಶಿಷ್ಟ ಜಾತಿ, ಪಂಗಡದವರ ಮೀಸಲಾತಿ ಹೆಚ್ಚಿಸಿದ್ದರೂ 9ನೇ ಶಡ್ಯೂಲ್‌ನಲ್ಲಿ ಸೇರಿಸದೆ ಜಾರಿಯಾಗುವುದಿಲ್ಲ’ ಎಂದು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT