ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಡಳಿತವನ್ನೇ ಇಕ್ಕಟ್ಟಿಗೆ ಸಿಲುಕಿಸಿದ ಜ್ವರಪೀಡಿತ!

ವೈರುಧ್ಯದ ಹೇಳಿಕೆ ನೀಡಿದ ಆರೋಗ್ಯ ಇಲಾಖೆ ಅಧಿಕಾರಿಗಳು
Last Updated 10 ಮಾರ್ಚ್ 2020, 2:35 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್‌–19 ಸೋಂಕಿನ ಶಂಕೆಯ ಮೇಲೆ ನಿಗಾ ಇರಿಸಲು ಕರೆತಂದಿದ್ದ ವ್ಯಕ್ತಿಯೊಬ್ಬ ವೆನ್ಲಾಕ್‌ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವಿಶೇಷ ವಾರ್ಡ್‌ನಿಂದ ನಾಪತ್ತೆ ಆದ ಪ್ರಕರಣ ದಕ್ಷಿಣ ಕನ್ನಡ ಜಿಲ್ಲಾಡಳಿತವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ದುಬೈನಿಂದ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಾನುವಾರ ಸಂಜೆ ಬಂದಿಳಿದ ವ್ಯಕ್ತಿಯಲ್ಲಿ ತೀವ್ರ ಜ್ವರದ ಲಕ್ಷಣಗಳು ಕಂಡುಬಂದಿದ್ದವು. ಕೋವಿಡ್‌–19 ನಿಗಾ ತಜ್ಞರ ತಂಡ ನೀಡಿದ ವರದಿ ಆಧರಿಸಿ ಆ ಪ್ರಯಾಣಿಕನನ್ನು ಕರೆತಂದು ವೆನ್ಲಾಕ್‌ ಆಸ್ಪತ್ರೆಯ ಕೋವಿಡ್‌ ನಿಗಾ ವಿಶೇಷ ವಾರ್ಡ್‌ನಲ್ಲಿ ಇರಿಸಲಾಗಿತ್ತು. ತಡ ರಾತ್ರಿ ಆ ವ್ಯಕ್ತಿ ಅಲ್ಲಿಂದ ನಾಪತ್ತೆಯಾಗಿದ್ದಾನೆ.

ಜ್ವರ ಪೀಡಿತ ವ್ಯಕ್ತಿ ಎಲ್ಲಿದ್ದಾನೆ ಎಂಬುದು ಈವರೆಗೂ ಪತ್ತೆಯಾಗಿಲ್ಲ. ಉಳ್ಳಾಲ ಸಮೀಪದಲ್ಲಿರುವ ಆತನ ಮನೆಯ ಬಾಗಿಲಿಗೆ ಬೀಗ ಹಾಕಿದ್ದು, ಇಡೀ ಕುಟುಂಬವೇ ಹೊರಹೋಗಿದೆ. ಪೊಲೀಸರ ನೆರವು ಪಡೆದರೂ ಆ ವ್ಯಕ್ತಿ ಮತ್ತು ಆತನ ಕುಟುಂಬದವರನ್ನು ರಾತ್ರಿಯವರೆಗೂ ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ವಿಟ್ಲ ಸಮೀಪದಲ್ಲಿ ಪತ್ತೆಮಾಡಿ ಕರೆತರಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮಾದರಿಗಳನ್ನೇ ಸಂಗ್ರಹಿಸಿಲ್ಲ:

ದುಬೈನಿಂದ ಬಂದಿದ್ದ ಪ್ರಯಾಣಿಕನ ರಕ್ತ ಮತ್ತು ಗಂಟಲಿನ ದ್ರವದ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲು ವೆನ್ಲಾಕ್‌ ಆಸ್ಪತ್ರೆಯ ವೈದ್ಯರು ಸಿದ್ಧತೆ ನಡೆಸಿದ್ದರು. ಅಷ್ಟರಲ್ಲೇ ಆತನ ಕುಟುಂಬದ ಸದಸ್ಯರು ವೆನ್ಲಾಕ್‌ ಆಸ್ಪತ್ರೆಗೆ ಬಂದಿದ್ದರು. ತಮ್ಮ ಕುಟುಂಬದ ಸದಸ್ಯನನ್ನು ಕಳುಹಿಸಿಕೊಡುವಂತೆ ಪಟ್ಟು ಹಿಡಿದಿದ್ದರು.

ರಾತ್ರಿ ಕೆಲಹೊತ್ತು ಆಸ್ಪತ್ರೆಯಲ್ಲಿ ವಾಗ್ವಾದ ನಡೆದಿದೆ. ಆ ಬಳಿಕ, ‘ಖಾಸಗಿ ಆಸ್ಪತ್ರೆಯಲ್ಲಿ ನಾನು ಚಿಕಿತ್ಸೆ ಪಡೆಯುತ್ತೇನೆ’ ಎಂದು ಹೇಳಿದ ಜ್ವರಪೀಡಿತ ಅಲ್ಲಿಂದ ಕುಟುಂಬದೊಂದಿಗೆ ಹೊರ ಹೋಗಿದ್ದಾನೆ. ಯಾವುದೇ ರೀತಿಯ ಮಾದರಿಗಳನ್ನು ಸಂಗ್ರಹಿಸಲು ವೈದ್ಯರಿಗೆ ಆತ ಅವಕಾಶ ನೀಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಗೊಂದಲದ ಹೇಳಿಕೆ:

ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿಕಂದರ್‌ ಪಾಷಾ ಮತ್ತು ವೆನ್ಲಾಕ್‌ ಆಸ್ಪತ್ರೆಯ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ ಬೆಳಿಗ್ಗೆಯಿಂದಲೂ ನೀಡಿದ ಹೇಳಿಕೆಗಳು ಗೊಂದಲ ಸೃಷ್ಟಿಸಿದವು. ಜಿಲ್ಲಾ ಆರೋಗ್ಯಾಧಿಕಾರಿ ರೋಗಿ ನಾಪತ್ತೆ ಆಗಿರುವುದನ್ನು ಖಚಿತಪಡಿಸಿದರೆ, ವೆನ್ಲಾಕ್‌ ಆಸ್ಪತ್ರೆ ಅಧೀಕ್ಷಕಿ ಆತನನ್ನು ದಾಖಲು ಮಾಡಿದ್ದನ್ನೇ ನಿರಾಕರಿಸಿದರು.

ವಾರ್ಡ್‌ನಿಂದ ವ್ಯಕ್ತಿ ನಾಪತ್ತೆಯಾದ ಕುರಿತು ಬೆಳಿಗ್ಗೆಯೇ ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆ ವಿವರವನ್ನು ಮಾಧ್ಯಮಗಳಿಗೆ ಖಚಿತಪಡಿಸಿದ ಡಾ.ಸಿಕಂದರ್‌ ಪಾಷಾ, ಆತನನ್ನು ಪತ್ತೆಹಚ್ಚಿ ಕರೆತರಲು ಪ್ರಯತ್ನಿಸುತ್ತಿರುವುದಾಗಿ ಹೇಳಿದರು.

ರಾಜೇಶ್ವರಿ ದೇವಿ ಅವರನ್ನು ಸಂಪರ್ಕಿಸಿದರೆ, ‘ಅಂತಹ ಯಾವ ವ್ಯಕ್ತಿಯನ್ನೂ ನಮ್ಮ ಆಸ್ಪತ್ರೆಗೆ ಕರೆ ತಂದಿಲ್ಲ. ಯಾರನ್ನೂ ದಾಖಲು ಮಾಡಿರಲಿಲ್ಲ. ಅಂತಹ ವಿಚಾರವೇ ನಮಗೆ ಗೊತ್ತಿಲ್ಲ’ ಎಂದು ಉತ್ತರ ನೀಡುತ್ತಲೇ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT