ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯ ಶಿಕ್ಷಣ ಕೋರ್ಸ್‌ ಪ್ರವೇಶ ಶುಲ್ಕ ಹೆಚ್ಚಳ: ಡಿಕೆಶಿ ಸುಳಿವು

Last Updated 23 ಜೂನ್ 2018, 19:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವೈದ್ಯಕೀಯ ಶಿಕ್ಷಣ ಕೋರ್ಸ್‌ಗಳ ಪ್ರವೇಶ ಶುಲ್ಕ ಹೆಚ್ಚಿಸುವ ಸುಳಿವನ್ನು ಸಚಿವ ಡಿ.ಕೆ. ಶಿವಕುಮಾರ್ ಶನಿವಾರ ಇಲ್ಲಿ ನೀಡಿದರು.

ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ಲಕ್ಷಾಂತರ ರೂಪಾಯಿ ಕೊಟ್ಟು ಖಾಸಗಿ ಸಂಸ್ಥೆಗಳಲ್ಲಿ ಓದುತ್ತಾರೆ. ಸ್ವಲ್ಪ ಹೆಚ್ಚಿನ ಶುಲ್ಕ ಕಟ್ಟಲು ವಿದ್ಯಾರ್ಥಿಗಳು ಸಹ ಮುಂದೆ ಬರಬೇಕು. ಅವರದ್ದೇ ಆಸ್ಪತ್ರೆ ಎಂದು ಭಾವಿಸಬೇಕು. ಎಲ್ಲದಕ್ಕೂ ಸರ್ಕಾರದ ಮೇಲೆ ಅವಲಂಬಿತರಾಗಬಾರದು. ಶುಲ್ಕ ಹೆಚ್ಚಳದ ಬಗ್ಗೆ ಸಾರ್ವಜನಿಕರು ಹಾಗೂ ವೈದ್ಯರ ಸಲಹೆ ಪಡೆಯಲಾಗುವುದು. ಆ ಬಗ್ಗೆ ವ್ಯಾಪಕ ಚರ್ಚೆ ಸಹ ನಡೆಸಲಾಗುವುದು’ ಎಂದು ಅವರು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

‘ವೈದ್ಯಕೀಯ ಪದವೀಧರರಿಗೆ ಗ್ರಾಮೀಣ ಸೇವೆ ಕಡ್ಡಾಯಗೊಳಿಸಿದ್ದರೂ ಅದು ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಆದ್ದರಿಂದ ಮತ್ತಷ್ಟು ಕಠಿಣವಾದ ನಿಯಮಗಳನ್ನು ರೂಪಿಸುವ ಅಗತ್ಯ ಇದೆ. ಗ್ರಾಮೀಣ ಸೇವೆಗೆ ವಿದ್ಯಾರ್ಥಿಗಳು ಮನಸ್ಸು ಮಾಡುತ್ತಿಲ್ಲ. ಕೆಲವರು ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ. ದಂಡ ಪಾವತಿಸಿ ಸೇವೆಯಿಂದ ವಿನಾಯಿತಿ ಪಡೆಯಲು ಸಹ ಈಗ ಅವಕಾಶ ಇದೆ’ ಎಂದು ಕಿಮ್ಸ್ ನಿರ್ದೇಶಕ ಡಾ.ಡಿ.ಡಿ.ಬಂಟ್‌ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಪ್ರತಿ ವೈದ್ಯಕೀಯ ವಿದ್ಯಾರ್ಥಿ ಮೇಲೆ ಸರ್ಕಾರ ಸುಮಾರು ₹10 ಲಕ್ಷ ವೆಚ್ಚ ಮಾಡುತ್ತಿದೆ. ಹಾಗಿದ್ದ ಮೇಲೆ ಅವರೂ ಸಹ ಈ ಸಮಾಜಕ್ಕೆ ಏನಾದರೂ ನೀಡಲೇಬೇಕು. ದಂಡ ಕಟ್ಟಿ ಗ್ರಾಮೀಣ ಸೇವೆಯಿಂದ ವಿನಾಯಿತಿ ಪಡೆಯುವ ಆಯ್ಕೆ ನೀಡಿದ್ದು ಸಹ ಸರಿಯಲ್ಲ. ಈ ವಿಷಯದಲ್ಲಿ ಏನು ಮಾಡಬಹುದು ಎಂಬುದರ ಬಗ್ಗೆ ವರದಿಯೊಂದನ್ನು ನೀಡಿ’ ಎಂದು ಕಿಮ್ಸ್‌ ನಿರ್ದೇಶಕರಿಗೆ ಸೂಚಿಸಿದರು.

ವಿದ್ಯಾರ್ಥಿಗಳು ಪಾವತಿಸುವ ಶುಲ್ಕದ ಸಿಂಹ ಪಾಲು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಹೋಗುತ್ತಿದೆ. ಅದರಲ್ಲಿ ಒಂದಿಷ್ಟು ವೈದ್ಯಕೀಯ ಕಾಲೇಜುಗಳಿಗೆ ಸಿಗುವ ಹಾಗೆ ಮಾಡಲಾಗುವುದು ಎಂದರು.

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ರಚನೆಯ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT