ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಸಿಎಂ ಬಿಜೆಪಿಯಲ್ಲಿ ಸಾಧ್ಯ: ಛಲವಾದಿ ನಾರಾಯಣ ಸ್ವಾಮಿ

ಗೋವಿಂದ ಕಾರಜೋಳ ಮುಖ್ಯಮಂತ್ರಿ ಆಗುವ ಅವಕಾಶ ಬರಲಿದೆ: ಛಲವಾದಿ ನಾರಾಯಣ ಸ್ವಾಮಿ
Last Updated 24 ಜುಲೈ 2022, 13:07 IST
ಅಕ್ಷರ ಗಾತ್ರ

ವಿಜಯಪುರ: ರಾಜ್ಯದಲ್ಲಿ ದಲಿತರು ಮುಖ್ಯಮಂತ್ರಿ ಆಗಬೇಕು ಎಂದಾದರೆ ಅದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದು ವಿಧಾನ ಪರಿಷತ್‌ ಸದಸ್ಯ, ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಹಿರಿಯ ದಲಿತ ನಾಯಕ ಗೋವಿಂದ ಕಾರಜೋಳ ಅವರನ್ನು ಸಚಿವ, ಉಪ ಮುಖ್ಯಮಂತ್ರಿ ಮಾಡಲಾಗಿದೆ. ಮುಂದೆ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶವೂ ಬರಬಹುದು. ಕಾರಜೋಳ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 36 ವಿಧಾನಸಭಾ ಕ್ಷೇತ್ರಗಳು ಎಸ್‌ಸಿ, ಎಸ್‌ಟಿಗೆ ಮೀಸಲಿವೆ. ಮೀಸಲು ಕ್ಷೇತ್ರಗಳನ್ನು ಹೊರತು ಪಡಿಸಿಯೂ ದಲಿತರಿಗೆ ಸ್ಪರ್ಧಿಲು ಬಿಜೆಪಿ ಹೆಚ್ಚಿನ ಅವಕಾಶ ಕಲ್ಪಿಸಲಿದೆ.ಶೇ 70ಕ್ಕಿಂತ ಹೆಚ್ಚು ದಲಿತರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. 150 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ, ಅಧಿಕಾರಕ್ಕೆ ಮರಳಿ ಬರುತ್ತೇವೆ ಎಂದು ಹೇಳಿದರು.

ರಾಜ್ಯದಲ್ಲಿ ಈಗಾಗಲೇ ಮುಖ್ಯಮಂತ್ರಿ ಆಗಬೇಕಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್‌ ಅವರಂತ ದಲಿತ ನಾಯಕನ್ನು ವ್ಯವಸ್ಥಿತವಾಗಿ ಕಾಂಗ್ರೆಸ್‌ ಸೋಲಿಸಿದೆ. ದಲಿತ ಸಮುದಾಯವನ್ನು ಕಾಂಗ್ರೆಸ್‌ ಕೇವಲ ಮತಬ್ಯಾಂಕ್‌ ಮಾಡಿಕೊಂಡಿದೆ. ಇದೀಗ ದಲಿತರು ವಿದ್ಯಾವಂತ, ಬುದ್ದಿವಂತರಾಗಿದ್ದಾರೆ. ಕಾಂಗ್ರೆಸ್‌ ನೀತಿ ಅರ್ಥಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ ಪಕ್ಷದಲ್ಲಿ ಇಲ್ಲದ ಸ್ಥಾನಕ್ಕೆ ಗುದ್ದಾಟ ನಡೆದಿದೆ. ಒಂದು ಡಜನ್‌ ನಾಯಕರು ಮುಖ್ಯಮಂತ್ರಿ ಸ್ಥಾನಕ್ಕೆ ಮುಗಿಬಿದ್ದಿದ್ದಾರೆ. ಆದರೆ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 60–65 ಸ್ಥಾನ ಗೆಲ್ಲುವುದು ಕಷ್ಟವಿದೆ ಎಂದರು.

ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗುವ ಉದ್ದೇಶದಿಂದ ಜನುಮ ದಿನದ ನೆಪದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು.

ಇಡಿ, ಸಿಬಿಐಯನ್ನು ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂಬ ಆರೋಪ ಸುಳ್ಳು. ದೇಶದ ಸಂವಿಧಾನಕ್ಕಿಂತ ಕಾಂಗ್ರೆಸ್‌ನವರು ದೊಡ್ಡವರಲ್ಲ. ಸೋನಿಯಾಗಾಂಧಿ, ರಾಹುಲ್‌ಗಾಂಧಿ ತಪ್ಪು ಮಾಡಿದ್ದರೆ ವಿಚಾರಣೆ, ಶಿಕ್ಷೆ ಅನುಭವಿಸಲೇ ಬೇಕು ಎಂದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕಾಂಗ್ರೆಸ್‌ ರಾಜಕೀಯ ಪಕ್ಷವಾಗಿರಲಿಲ್ಲ, ಅದೊಂದು ಸಂಘಟನೆಯಾಗಿತ್ತು.ದೇಶದಲ್ಲಿ ಸದ್ಯ ಇರುವುದು ಅಸಲಿ ಕಾಂಗ್ರೆಸ್‌ ಅಲ್ಲ, ನಕಲಿ ಕಾಂಗ್ರೆಸ್‌, ಕುಟುಂಬ ಕಾಂಗ್ರೆಸ್‌. ನೆಹರೂ ಕುಟುಂಬ ಬಿಟ್ಟು ಹೊರಬರಲು ಕಾಂಗ್ರೆಸ್‌ಗೆ ಸಾಧ್ಯವೇ ಇಲ್ಲ ಎಂದು ಟೀಕಿಸಿದರು.

ದೇಶದಲ್ಲಿ ಅಂಬೇಡ್ಕರ್‌ ಅವರಿಗೆ ಸಂಬಂಧಿಸಿದ ಪಂಚ ಕ್ಷೇತ್ರಗಳನ್ನು ರಾಷ್ಟ್ರೀಯ ಸ್ಮಾರಕವಾಗಿ ಕೇಂದ್ರ ಬಿಜೆಪಿ ಸರ್ಕಾರ ಅಭಿವೃದ್ಧಿ ಪಡಿಸಲು ಆದ್ಯತೆ ನೀಡಿದೆ. ಇದೇ ರೀತಿ ರಾಜ್ಯದಲ್ಲೂ ಅಂಬೇಡ್ಕರ್‌ ಅವರು ಭೇಟಿ ನೀಡಿದ ಏಳು ಜಿಲ್ಲೆಗಳಲ್ಲಿ ರಾಷ್ಟ್ರೀಯ ಸ್ಮಾರಕ ಮಾಡಲು ಬೊಮ್ಮಾಯಿ ಸರ್ಕಾರ ಒತ್ತು ನೀಡಲಿದೆ ಎಂದು ಹೇಳಿದರು.

ಯಡಿಯೂರಪ್ಪ ಅವರಿಗೆ ವಯಸ್ಸಾಗಿರುವ ಕಾರಣಕ್ಕೆ ಪೂರ್ಣಾವಧಿ ಮುಖ್ಯಮಂತ್ರಿ ಆಗಲು ಸಾಧ್ಯವಾಗಿಲ್ಲ. ರಾಜಕೀಯದಿಂದ ಅವರು ನಿವೃತ್ತಿ ಘೋಷಣೆ ಮಾಡಿಲ್ಲ, ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದರು.

ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಉಮೇಶ ಕಾರಜೋಳ, ಬಿಜೆಪಿ ಎಸ್‌ಸಿ ಮೋರ್ಚಾ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಳ ಘಟಕಾಂಬಳೆ, ಮುಖಂಡರಾದ ಶಿವರುದ್ರ ಬಾಗಲಕೋಟೆ, ಮಲ್ಲಿಕಾರ್ಜುನ ಜೋಗೂರ, ಚಿದಾನಂದ , ವಿಜಯ್‌ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

***

ಬಿಜೆಪಿ ದಲಿತ, ಸಂವಿಧಾನ, ಅಂಬೇಡ್ಕರ್‌ ವಿರೋಧಿ. ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತದೆ, ಮೀಸಲಾತಿ ತೆಗೆಯುತ್ತದೆ ಎಂಬ ಅಪಪ್ರಚಾರವನ್ನು ಸುಳ್ಳು ಮಾಡುವ ಕೆಲಸ ಬಿಜೆಪಿ ಮಾಡಿ ತೋರಿಸಿದೆ

–ಛಲವಾದಿ ನಾರಾಯಣ ಸ್ವಾಮಿ,ವಿಧಾನ ಪರಿಷತ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT