ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

PSI Death In Karnataka | ಶಾಸಕ, ಪುತ್ರನ ಮೇಲೆ ಎಫ್‌ಐಆರ್‌, ಪ್ರಕರಣ ಸಿಐಡಿಗೆ

ಪಿಎಸ್ಐ ಪರಶುರಾಮ್‌ ‘ಶಂಕಾಸ್ಪದ ಸಾವು’; ₹30 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ
Published 4 ಆಗಸ್ಟ್ 2024, 0:30 IST
Last Updated 4 ಆಗಸ್ಟ್ 2024, 0:30 IST
ಅಕ್ಷರ ಗಾತ್ರ

ಯಾದಗಿರಿ: ಕಾಂಗ್ರೆಸ್‌ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹಾಗೂ ಅವರ ಪುತ್ರ ಪಂಪನಗೌಡ (ಸನ್ನಿಗೌಡ) ಅವರು ₹30 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿರುವುದು ಹಾಗೂ ಜಾತಿ ನಿಂದನೆ ಮಾಡಿರುವುದರಿಂದ ಪತಿ ಪಿಎಸ್‌ಐ ಪರಶುರಾಮ್‌ ಖಿನ್ನತೆಗೊಳಗಾಗಿ ಸಾವಿಗೀಡಾಗಿದ್ದಾರೆ ಎಂದು ಅವರ ಪತ್ನಿ ಶ್ವೇತಾ ಆರೋಪಿಸಿದ್ದಾರೆ. ಅವರು ನೀಡಿದ ದೂರಿನಂತೆ ನಗರ ಪೊಲೀಸ್‌ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.

ಪರಿಶಿಷ್ಟ ಜಾತಿಗೆ ಸೇರಿದವರಾದ ಪರಶುರಾಮ್‌ (34) ಅವರು ಶುಕ್ರವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಆದರೆ, ಪಿಎಸ್‌ಐ ಸಾವಿನ ಪ್ರಕರಣ ತಿರುವು ಪಡೆದಿದ್ದು, ಅವರ ಕುಟುಂಬದವರು ಹಾಗೂ ಪರಿಶಿಷ್ಟ ಜಾತಿಯ ಸಮುದಾಯದವರು ಸೇರಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಶನಿವಾರ ಪ್ರತಿಭಟಿಸಿ, ಸಾವಿಗೆ ಕಾರಣರಾದವರ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ.

‘ನನ್ನ ಪತಿ ಕಳೆದ 7 ತಿಂಗಳಿಂದ ನಗರ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಮತ್ತೆ ಅವರನ್ನು ಸಿಇಎನ್‌ (ಸೆನ್) ಠಾಣೆಗೆ ವರ್ಗಾವಣೆ ಮಾಡಿದ್ದರು. ನಗರ ಠಾಣೆಯಲ್ಲಿ ಮುಂದುವರಿಯಲು ₹30 ಲಕ್ಷ ನೀಡುವಂತೆ ಶಾಸಕರು ಹಾಗೂ ಅವರ ಪುತ್ರ ಬೇಡಿಕೆ ಇಟ್ಟಿದ್ದರು. ಇದರಿಂದ ಪತಿ ಮನನೊಂದಿದ್ದರು’ ಎಂದು ಪತ್ನಿ ಶ್ವೇತಾ ದೂರಿನಲ್ಲಿ ತಿಳಿಸಿದ್ದಾರೆ. 

‘ಅವಧಿ ಮುಗಿಯುವವರೆಗೂ ನಗರ ಠಾಣೆಯಲ್ಲೇ ಮುಂದುವರಿಸುವಂತೆ ಹೇಳಿದಾಗ, ಶಾಸಕರು ಹಾಗೂ ಅವರ ಪುತ್ರ ಹಣ ಕೊಡದಿದ್ದರೆ ಇಲ್ಲಿ ಯಾಕೆ ಇರುತ್ತೀಯಾ ಎಂದು ಬೈದು ಜಾತಿ ನಿಂದನೆ ಮಾಡಿದ್ದಾರೆ. ಇದರಿಂದ ಪತಿ ಖಿನ್ನತೆಗೆ ಒಳಗಾಗಿದ್ದರು’ ಎಂದು ಪತ್ನಿ ದೂರಿದ್ದಾರೆ.

ಪ್ರತಿಭಟನೆ:

ಪರಶುರಾಮ್ ಸಾವಿಗೆ ಕಾರಣರಾದ ಶಾಸಕರು ಹಾಗೂ ಅವರ ಪುತ್ರನ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕುಟುಂಬದವರು ಶುಕ್ರವಾರ ರಾತ್ರಿ ಒತ್ತಾಯಿಸಿದ್ದರು. ಆದರೆ, ಪೊಲೀಸ್‌ ಇಲಾಖೆಯಿಂದ ತಕ್ಷಣಕ್ಕೆ ಸ್ಪಂದನೆ ಸಿಕ್ಕಿರಲಿಲ್ಲ. ಶನಿವಾರ ಬೆಳಿಗ್ಗೆ ಚಿತ್ತಾಪುರ ರಸ್ತೆಯ ಜಿಲ್ಲಾ ಆಸ್ಪತ್ರೆ ಮುಖ್ಯದ್ವಾರದ ಮುಂದೆ ಪರಿಶಿಷ್ಟ ಸಮುದಾಯದ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ರಸ್ತೆ ಬಂದ್‌ ಮಾಡಿ, ಪ್ರತಿಭಟಿಸಿದರು. ಪ್ರತಿಭಟನೆಯಿಂದ ಐದಾರು ಕಿ.ಮೀ ವರೆಗೆ ನೂರಾರು ವಾಹನಗಳು ರಸ್ತೆ ಮೇಲೆ ನಿಂತಿದ್ದವು. ಸುಮಾರು 6 ಗಂಟೆ ರಸ್ತೆ ತಡೆ ನಡೆಸಲಾಯಿತು.

‘ಶಾಸಕರು ಮತ್ತು ಅವರ ಪುತ್ರ ಲಕ್ಷಾಂತರ ರೂಪಾಯಿ ಬೇಡಿಕೆ ಇಟ್ಟಿದ್ದರಿಂದ ಒತ್ತಡಕ್ಕೆ ಒಳಗಾಗಿ ಪರಶುರಾಮ್‌ ಜೀವ ಕಳೆದುಕೊಂಡಿದ್ದಾರೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಅವರ ಎದುರು ಆಕ್ರೋಶ ಹೊರಹಾಕಿದ ಪರಶುರಾಮ್‌ ಅವರ ಪತ್ನಿ ಶ್ವೇತಾ ಅವರು, ‘ನಿಮ್ಮ ಮಗಳಿಗೆ ಈ ರೀತಿ ಆಗಿದ್ದರೆ ಸುಮ್ಮನಿರುತ್ತಿದ್ದಿರಾ? ನನ್ನ ಪತಿಯ ಸಾವಿಗೆ ನ್ಯಾಯ ಒದಗಿಸಿ’ ಎಂದು ಆಗ್ರಹಿಸಿದರು.

‌ಶಾಸಕರ ವಿರುದ್ಧ ಪ್ರಕರಣ ದಾಖಲಿಸುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದರು. ಪ್ರತಿಭಟನೆ ನಡೆಸಿದ ಐದಾರು ಗಂಟೆಗಳ ಬಳಿಕ ಪ್ರಕರಣ ದಾಖಲಿಸಿಕೊಳ್ಳಲಾಯಿತು. ನಂತರ ಪ್ರತಿಭಟನೆ ಕೈಬಿಡಲಾಯಿತು. 

ಪ್ರಕರಣ ದಾಖಲು:

ಶ್ವೇತಾ ಅವರು ನೀಡಿದ ದೂರಿನ್ವಯ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು‍ ಮೊದಲನೇ ಆರೋಪಿ ಹಾಗೂ ಅವರ ಪುತ್ರ ಪಂಪನಗೌಡ (ಸನ್ನಿಗೌಡ) ಎರಡನೇ ಆರೋಪಿ ಎಂದು ನಮೂದಿಸಿ ನಗರ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. 

ಪ್ರಕರಣ ದಾಖಲಾಗುತ್ತಿದ್ದಂತೆಯೇ ಶಾಸಕ ಮತ್ತು ಅವರ ಪುತ್ರನ ಮೊಬೈಲ್‌ಗಳು ಸ್ವಿಚ್ಡ್‌ ಆಫ್‌ ಆಗಿವೆ. ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ನಗರದ ಹೊರವಲಯದ ಜಿಲ್ಲಾ ಆಸ್ಪತ್ರೆಯಲ್ಲಿ ಮೃತ ಪರಶುರಾಮ್ ಮರಣೋತ್ತರ ಪರೀಕ್ಷೆ ಮಾಡಲಾಯಿತು. ನಂತರ ಕುಟುಂಬಸ್ಥರಿಗೆ ಶವ ಹಸ್ತಾಂತರಿ ಸಲಾಯಿತು. ಶನಿವಾರ ಸಂಜೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಸೋಮನಾಳದಲ್ಲಿ ಅಂತ್ಯಕ್ರಿಯೆ ನಡೆಯಿತು. ಕಾರಟಗಿ ಹಾಗೂ ಕನಕಗಿರಿಯಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದವು.

ಡಿವೈಎಸ್‌ಪಿ ನೇತೃತ್ವದ ತಂಡ ರಚನೆ

‘ಪಿಎಸ್‌ಐ ಪರಶುರಾಮ್‌ ಸಾವಿನ ವಿಚಾರವಾಗಿ ಪತ್ನಿ ನೀಡಿದ ದೂರಿನ ಬಗ್ಗೆ ತನಿಖೆ ನಡೆಸಲು ಡಿವೈಎಸ್‌ಪಿ ಜಾವೇದ್‌ ಇನಾಮ್ದಾರ್‌ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಮೂರು ದಿನಗಳ ಒಳಗೆ ಮರಣೋತ್ತರ ಪರೀಕ್ಷೆ ವರದಿ ಬರುವ ಅಂದಾಜು ಇದೆ. ಆ ಬಳಿಕ ಆರೋಪಿಗಳನ್ನು ಬಂಧಿಸುವ ಬಗ್ಗೆ ನಿರ್ಧಾರ ಕೈಗೊಳ್ಳ
ಲಾಗುವುದು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಕರಣ ಸಿಐಡಿಗೆ ವಹಿಸಲು ರಾಜ್ಯ ಸರ್ಕಾರ ತೀರ್ಮಾನ

ಬೆಂಗಳೂರು: 'ಯಾದಗಿರಿ ಪಿಎಸ್‌ಐ ಸಾವಿನ ಪ್ರಕರಣದಲ್ಲಿ ಕೇಳಿಬರುತ್ತಿರುವ ಆರೋಪಗಳ ಬಗ್ಗೆ ತನಿಖೆ ನಡೆಸಲಾಗುವುದು. ಯಾರಿಗೂ ಅನ್ಯಾಯ ಆಗಲು ಅವಕಾಶ ಕೊಡುವುದಿಲ್ಲ' ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಪಿಎಸ್‌ಐ ಪರುಶುರಾಮ್ ಅವರಿಂದ ಶಾಸಕ ಚನ್ನಾರೆಡ್ಡಿ ಪಾಟೀಲ, ಅವರ ಪುತ್ರ ₹30 ಲಕ್ಷ ಲಂಚ ಕೇಳಿದ್ದರು ಎಂಬ ಆರೋಪದ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, 'ಅದು ಆರೋಪವಷ್ಟೆ, ತನಿಖೆಯಿಂದಷ್ಟೇ ನಿಜ ಗೊತ್ತಾಗಬೇಕಿದೆ' ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಶನಿವಾರ ಸಂಜೆ ಗೃಹಸಚಿವರು ಚರ್ಚೆ ನಡೆಸಿದರು. ಚರ್ಚೆಯ ಬಳಿಕ ಈ ಪ್ರಕರಣವನ್ನು ಸಿಐಡಿಗೆ ವಹಿಸಲು ನಿರ್ಧರಿಸಲಾಗಿದೆ.

ಚನ್ನಾರೆಡ್ಡಿ ಅವರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಪಡೆಯಬೇಕು ಮತ್ತು ಪಿಎಸ್‌ಐ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು
-ಆರ್.ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT