ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಲಿತ’ ಪದದ ಮರು ವ್ಯಾಖ್ಯಾನ ನಡೆಯಲಿ: ಸಾಹಿತಿ ಕೆ.ಬಿ.ಸಿದ್ಧಯ್ಯ

Last Updated 7 ಅಕ್ಟೋಬರ್ 2018, 18:10 IST
ಅಕ್ಷರ ಗಾತ್ರ

ತುಮಕೂರು: ‘ದಲಿತ’ ಎನ್ನುವ ಪದವನ್ನು ಮರು ವ್ಯಾಖ್ಯಾನಿಸುವ ಸಂದರ್ಭ ಈಗ ಬಂದಿದೆ ಎಂದು ಹಿರಿಯ ಸಾಹಿತಿ ಕೆ.ಬಿ.ಸಿದ್ಧಯ್ಯ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಎಚ್.ಗೋವಿಂದಯ್ಯ ದ್ವಾರನಕುಂಟೆ ಅವರ ‘ಉರಿದ ಮರ’ ಕವನ ಸಂಕಲ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದಲಿತ ಕಾವ್ಯ, ದಲಿತ ಅಭಿವ್ಯಕ್ತಿ, ದಲಿತ ರಾಜಕಾರಣ, ದಲಿತ ಸಂಸ್ಕೃತಿ ಎಂದು ಹೇಳಿಕೊಳ್ಳುವ ಕಾಲಘಟ್ಟದಲ್ಲಿ ಕೇಂದ್ರ ಸರ್ಕಾರವು ‘ದಲಿತ’ ಪದದ ಬದಲು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಎಂದೇ ಬಳಸಬೇಕು ಎಂದು ಸುತ್ತೋಲೆ ಹೊರಡಿಸಿದರೆ ಏನು ಪ್ರತಿಕ್ರಿಯೆ ನೀಡಬೇಕು’ ಎಂದು ಪ್ರಶ್ನಿಸಿದರು.

‘ದಲಿತ ಎನ್ನುವುದು ಜಾತಿ ಅಲ್ಲ. ಈ ಕಾರಣದಿಂದ ದಲಿತ ಪದ ಕೈ ಬಿಡಬೇಕು ಎಂದು ಕೇಂದ್ರ ಸರ್ಕಾರ ಕಾರಣ ನೀಡಿದೆ. ಆದರೆ, ಇದರ ಹಿಂದೆ ಬಹಳ ದೊಡ್ಡ ರಾಜಕೀಯ ತಂತ್ರ ಇದೆ' ಎಂದು ಆರೋಪಿಸಿದರು.

‘ದಲಿತ ಎನ್ನುವ ಪದ ಭಾರತದಲ್ಲಿ ಹಿಂದೂ ಎನ್ನುವ ಶಬ್ದಕ್ಕೆ ಪರ್ಯಾಯವಾಗಿದೆ. ಪ್ರಭಾವಿಯಾಗಿ ಪ್ರಚಲಿತದಲ್ಲಿದೆ. ಮತೀಯ ಮತ್ತು ಕೋಮುವಾದಿ ರಾಜಕಾರಣಕ್ಕೆ ಪರ್ಯಾಯವಾಗಿರುವುದರಿಂದ ಆ ಪದವನ್ನೇ ಇಲ್ಲವಾಗಿಸುವ ಹುನ್ನಾರ ನಡೆದಿದೆ’ ಎಂದು ದೂರಿದರು.

‘ದಲಿತ ಎನ್ನುವುದು ಒಂದು ದೊಡ್ಡ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ನ್ಯಾಯ, ಸಾಮಾಜಿಕ ಬದಲಾವಣೆಯ ಪರಿಭಾಷೆ ಆಗಿದೆ’ ಎಂದು ವಿವರಿಸಿದರು.

ನ. 3, 4ರಂದು ಮಂಗಳೂರು ಸಾಹಿತ್ಯೋತ್ಸವ

ಮಂಗಳೂರು: ‘ಭಾರತದ ಕಲ್ಪನೆ’ ಎಂಬ ಘೋಷವಾಕ್ಯದಡಿ ನವೆಂಬರ್ 3 ಮತ್ತು 4ರಂದು ನಗರದ ಟಿ.ಎಂ.ಎ. ಪೈ ಸಭಾಂಗಣದಲ್ಲಿ ‘ಮಂಗಳೂರು ಸಾಹಿತ್ಯೋತ್ಸವ–2018’ ನಡೆಯಲಿದೆ. ಹಿರಿಯ ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ ಅವರಿಗೆ ಈ ಸಮ್ಮೇಳನದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

‘ಪ್ರಾಚೀನ ಭಾರತದ ವಿದ್ವತ್ತು ಶಾಂತಿ, ಭ್ರಾತೃತ್ವ ಮತ್ತು ಜಗತ್ತಿನ ಎಲ್ಲರ ಒಳಿತನ್ನು ಬಯಸುವುದಕ್ಕೆ ‍ಪೂರಕವಾಗಿತ್ತು. ‘ಉದಾರ ಚರಿತಾನಾಂ ತು ವಸುಧೈವ ಕುಟುಂಬಕಂ’ ಎಂಬ ತತ್ವದಲ್ಲಿ ದೇಶ ನಂಬಿಕೆ ಹೊಂದಿದೆ. ಈ ಕುರಿತು ದೇಶದ ಪ್ರಸಿದ್ಧ ಚಿಂತಕರು ಎರಡು ದಿನಗಳ ಸಾಹಿತ್ಯೋತ್ಸವದಲ್ಲಿ ಚಿಂತನ ಮಂಥನ ನಡೆಸಲಿದ್ದಾರೆ. ವಿಚಾರ ಮಂಡನೆ, ಚರ್ಚೆ, ಸಂವಾದ, ಪುಸ್ತಕ ವಿಮರ್ಶೆ, ಕಾರ್ಯಾಗಾರ, ಪುಸ್ತಕ ಮತ್ತು ಚಿತ್ರಕಲಾ ಪ್ರದರ್ಶನಗಳು ಈ ಉತ್ಸವದ ಭಾಗವಾಗಿರುತ್ತವೆ’ ಎಂದು ಮಂಗಳೂರು ಸಾಹಿತ್ಯೋತ್ಸವದ ಸಂಘಟನಾ ಸಮಿತಿಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT