ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದರ್ಶನಾತಿಥ್ಯ| CCB ಅಧಿಕಾರಿಗಳಿಂದ ಜೈಲಿನಲ್ಲಿ ಶೋಧ: ಪೆಟ್ಟಿಗೆಯಲ್ಲಿ ವಸ್ತು ಸಾಗಣೆ

ದಾಳಿ ಮಾಹಿತಿ ಸೋರಿಕೆ: ಅರ್ಧ ತಾಸು ಕಾದಿದ್ದ ಸಿಸಿಬಿ
Published : 27 ಆಗಸ್ಟ್ 2024, 23:30 IST
Last Updated : 27 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ದರ್ಶನ್ ಮತ್ತು ಸಹಚರರಿಗೆ ವಿಶೇಷ ಆತಿಥ್ಯ ನೀಡಿರುವ ಫೋಟೊ ಬಹಿರಂಗವಾದ ಬೆನ್ನಲ್ಲೇ ಸಿಸಿಬಿ ಅಧಿಕಾರಿಗಳು ಜೈಲಿನ ಮೇಲೆ ದಾಳಿ ನಡೆಸುವ ಮಾಹಿತಿ ಸೋರಿಕೆಯಾಗಿತ್ತೆ ಎಂಬ ಅನುಮಾನ ಮೂಡಿದೆ.

ಕಾರಾಗೃಹ ಪರಿಶೀಲನೆಗಾಗಿ ಶನಿವಾರ (ಆ.24) ಹೋಗಿದ್ದ ಸಿಸಿಬಿ ಅಧಿಕಾರಿಗಳು, ಸಿಬ್ಬಂದಿಯನ್ನು ಅರ್ಧ ಗಂಟೆ ಹೊರಗಡೆ ಕಾಯಿಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಸಿಸಿಬಿ ಅಧಿಕಾರಿಗಳು ಶೋಧ ನಡೆಸಲು ಬಂದಿದ್ದ ವೇಳೆ ಜೈಲು ಸಿಬ್ಬಂದಿ ಅರ್ಧ ಗಂಟೆ ಒಳಗೆ ಬಿಟ್ಟಿರಲಿಲ್ಲ. ‘ಏಕೆ ಕಾಯಬೇಕು’ ಎಂಬ ಅಧಿಕಾರಿಗಳ ಪ್ರಶ್ನೆಗೆ, ‘ಜೈಲು ಅಧೀಕ್ಷಕರು ಬಂದಿಲ್ಲ. ಅವರ ಅನುಮತಿ ಇಲ್ಲದೆ ಬಿಡುವುದಿಲ್ಲ’ ಎಂದು ಉತ್ತರಿಸಿದ್ದರು. ಅನ್ಯ ಮಾರ್ಗವಿಲ್ಲದೇ ಸಿಸಿಬಿ ಅಧಿಕಾರಿಗಳು ಸುಮಾರು ಅರ್ಧಗಂಟೆ ಜೈಲಿನ ಬಾಗಿಲಿನಲ್ಲೇ ಕಾಯುವಂತಾಯಿತು.

ದಾಳಿ ಮಾಹಿತಿ ಸೋರಿಕೆಯಾಗಿದೆ ಎಂಬ ಅನುಮಾನ ಇರುವ ಕಾರಣದಿಂದ ಆಂತರಿಕ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಗರ ಪೊಲೀಸ್ ಕಮೀಷನರ್‌ ಬಿ. ದಯಾನಂದ್ ಅವರು ಸಿಸಿಬಿ ಹೆಚ್ಚುವರಿ ಕಮಿಷನರ್‌ ಡಾ.ಚಂದ್ರಗುಪ್ತ ಅವರಿಗೆ ಸೂಚಿಸಿದ್ದಾರೆ.

ಪ್ರಾಥಮಿಕ ತನಿಖೆ ನಡೆಸಿದ ತನಿಖಾಧಿಕಾರಿಗೆ ಹಲವು ಮಾಹಿತಿ ದೊರೆಕಿದೆ. ಆಗಸ್ಟ್‌ 23ರ ರಾತ್ರಿ 10.58ರಿಂದ 11.30ರ ಅವಧಿಯಲ್ಲಿ ಭದ್ರತಾ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ಜೈಲು ಸಿಬ್ಬಂದಿ ಕೆ.ಎಸ್.ಸುದರ್ಶನ್, ಮುಜೀಬ್, ಪರಮೇಶ್ ನಾಯಕ ಲಮಾಣಿ, ಕೆ.ಬಿ.ರಾಯಮಾನೆ ಎಂಬವರು ಬ್ಯಾರಕ್‌ಗಳಿಂದ ಕೆಲವು ವಸ್ತುಗಳನ್ನು ಸಾಗಿಸುತ್ತಿರುವುದು ಸಿ.ಸಿ.ಟಿ.ವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಅನುಮಾನಾಸ್ಪದ ರೀತಿಯಲ್ಲಿ ವಸ್ತುಗಳನ್ನು ಸಾಗಿಸಿರುವ ಕಾರಣ ನಾಲ್ಕು ಸಿಬ್ಬಂದಿ ವಿರುದ್ಧ ಕಾರಾಗೃಹಗಳ ಡಿಐಜಿಯಾಗಿದ್ದ ಎಂ.ಸೋಮಶೇಖರ್ ಅವರು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಬ್ಯಾರಕ್‌ನಲ್ಲಿದ್ದ ವಸ್ತುಗಳನ್ನು ನಾಲ್ಕು ರಟ್ಟಿನ ಪೆಟ್ಟಿಗೆಗಳಲ್ಲಿ ತುಂಬಿ ಸಾಗಿಸಿರುವ ಕುರಿತ ತನಿಖಾಧಿಕಾರಿ ಪ್ರಶ್ನೆಗೆ, ‘ಕಸದ ಬಾಕ್ಸ್‌’ ಎಂದು ಜೈಲು ಸಿಬ್ಬಂದಿ ಸಮಜಾಯಿಷಿ ನೀಡಿದ್ದರು. ಆದರೆ, ‘ಜೈಲಿನ ಯಾವ ಬ್ಯಾರಕ್​​ನಿಂದಲೂ ಕಸ ತೆಗೆದುಕೊಂಡು ಹೋಗಿಲ್ಲ, ಕೇವಲ ಬ್ಯಾರಕ್ ನಂಬರ್ 10ರಿಂದ ಏಕೆ ಕಸ ತೆಗೆದುಕೊಂಡು ಹೋಗಿದ್ದೀರಿ’ ಎಂದು ಪ್ರಶ್ನಿಸಿದ್ದಾರೆ. ಸರಿಯಾದ ಮಾಹಿತಿ ನೀಡದ ಜೈಲು ಸಿಬ್ಬಂದಿಯ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ದರ್ಶನ್ ಮೊದಲ ಆರೋಪಿ

ಕಾರಾಗೃಹದಲ್ಲಿ ವಿಶೇಷ ಆತಿಥ್ಯ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎರಡು ಪ್ರಕರಣಗಳಲ್ಲೂ ನಟ ದರ್ಶನ್‌ ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ. ವಿಚಾರಣಾಧೀನ ಕೈದಿ ಧರ್ಮ ಜತೆ ದರ್ಶನ್ ಸಹ ರೌಡಿಶೀಟರ್‌ ಜಾನಿ ಅಲಿಯಾಸ್‌ ಜನಾರ್ದನ್ ಪುತ್ರ ಸತ್ಯ ಎಂಬಾತನೊಂದಿಗೆ ವಿಡಿಯೊ ಕರೆಯಲ್ಲಿ ಮಾತನಾಡಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿ ದರ್ಶನ್,  ಧರ್ಮ ಮತ್ತು  ಸತ್ಯನನ್ನು ಕ್ರಮವಾಗಿ ಎರಡು ಮತ್ತು ಮೂರನೇ ಆರೋಪಿಯಾಗಿ ಮಾಡಲಾಗಿದೆ.

ಕಾರಾಗೃಹದೊಳಗೆ  ಕೈದಿಗಳ ಜತೆ ಸಿಗರೇಟು ಸೇದುತ್ತಾ, ಕಾಫಿ ಕುಡಿಯುತ್ತಿದ್ದ ಆರೋಪದಡಿ ದಾಖಲಿಸಿರುವ ಪ್ರಕರಣದಲ್ಲೂ ದರ್ಶನ್ ಅವರನ್ನು ಮೊದಲ ಆರೋಪಿ ಎಂದು ಹೆಸರಿಸಲಾಗಿದೆ. ವಿಲ್ಸನ್‌ ಗಾರ್ಡನ್‌ ನಾಗ ಅಲಿಯಾಸ್ ನಾಗರಾಜ ಎರಡನೇ ಆರೋಪಿ, ದರ್ಶನ್ ಮ್ಯಾನೇಜರ್ ನಾಗರಾಜ ಮೂರನೇ ಆರೋಪಿ ಹಾಗೂ ಸೀನಾ ಅಲಿಯಾಸ್ ಕುಳ್ಳ ಸೀನಾನನ್ನು ನಾಲ್ಕನೇ ಆರೋಪಿ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಕಾರಾಗೃಹಗಳ ಡಿಐಜಿ ವರ್ಗಾವಣೆ

ಕಾರಾಗೃಹಗಳು ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಡಿಐಜಿಯಾಗಿದ್ದ ಸೋಮಶೇಖರ್‌ ಅವರನ್ನು ಮಂಗಳವಾರ ವರ್ಗಾವಣೆ ಮಾಡಿದ್ದು, ಆ ಹುದ್ದೆಗೆ ಮೈಸೂರಿನ ಕಾರಾಗೃಹ ಅಕಾಡೆಮಿ ಡಿಐಜಿ ದಿವ್ಯಶ್ರೀ ಅವರನ್ನು ನೇಮಿಸಲಾಗಿದೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರ ಹುದ್ದೆಗೆ ಕೆ. ಸುರೇಶ್‌ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.

ರೌಡಿಶೀಟರ್ ಪುತ್ರ ಸತ್ಯ ವಶಕ್ಕೆ

ದರ್ಶನ್ ಜತೆ ಮೊಬೈಲ್‌ನಲ್ಲಿ ವಿಡಿಯೊ ಕರೆ ಮಾಡಿ ಮಾತನಾಡಿರುವ ಸಂಬಂಧ ತನಿಖೆ ಚುರುಕುಗೊಳಿಸಿರುವ ಪೊಲೀಸರು, ರೌಡಿಶೀಟರ್‌ ಜಾನಿ ಅಲಿಯಾಸ್‌ ಜನಾರ್ದನ್ ಎಂಬಾತನ ಮಗ ಸತ್ಯನನ್ನು ವಶಕ್ಕೆ ಪಡೆದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

‘ದರ್ಶನ್ ಹಾಗೂ ಧರ್ಮಗೆ ಎಷ್ಟು ಬಾರಿ ವಿಡಿಯೊ ಕರೆ ಮಾಡಿ ಮಾತನಾಡಿದ್ದೆ?. ಯಾವಾಗ ಕರೆ ಮಾಡಿದ್ದೆ? ಮೊದಲು ವಿಡಿಯೊ ಕರೆ ಮಾಡಿದವರು ಯಾರು’ ಎಂಬ ಪ್ರಶ್ನೆಗಳನ್ನು ಪೊಲೀಸರು ಕೇಳಿದ್ದಾರೆ.

ಇದಕ್ಕೆ ಉತ್ತರಿಸಿರುವ ಆರೋಪಿ ಸತ್ಯ, ‘ನಾನು ಕರೆ ಮಾಡಿಲ್ಲ, ಧರ್ಮ ವಿಡಿಯೊ ಕರೆ ಮಾಡಿದ್ದು’ ಎಂಬ ಹೇಳಿಕೆ ನೀಡಿದ್ದಾನೆ. ಆತನ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗ ವಾಟ್ಸ್‌ಆ್ಯಪ್‌ನಲ್ಲಿನ ದತ್ತಾಂಶವನ್ನು ಅಳಿಸಿ ಹಾಕಿರುವುದು ಗೊತ್ತಾಗಿದೆ. ದತ್ತಾಂಶವನ್ನು ಮರುಸಂಗ್ರಹ ಮಾಡುವ ಸಲುವಾಗಿ ಆತನ ಮೊಬೈಲ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಪೊಲೀಸರು ನಿರ್ಧರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT