ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ವಿವಿಧೆಡೆ ನಾಡಹಬ್ಬದ ಸಂಭ್ರಮ

Published 24 ಅಕ್ಟೋಬರ್ 2023, 19:58 IST
Last Updated 24 ಅಕ್ಟೋಬರ್ 2023, 19:58 IST
ಅಕ್ಷರ ಗಾತ್ರ

ಮಡಿಕೇರಿ: ಮಡಿಕೇರಿ ದಸರೆಯ ದಶಮಂಪಟಗಳ ಶೋಭಾಯಾತ್ರೆ ಮಂಗಳವಾರ ರಾತ್ರಿ ವಿಜೃಂಭಣೆಯಿಂದ ಆರಂಭಗೊಂಡಿತು. ರಾತ್ರಿಯನ್ನೇ ಹಗಲಾಗಿಸಿದಂತೆ ಚಲಿಸಿದ ಬೆಳಕಿನ ಮಂಟಪಗಳನ್ನು ಲಕ್ಷಾಂತರ ಮಂದಿ ಕಣ್ತುಂಬಿಕೊಂಡರು.

₹2.11 ಕೋಟಿ ವೆಚ್ಚದಲ್ಲಿ ರೂಪಿಸಲಾಗಿದ್ದ ಹತ್ತು ಮಂಟಪಗಳಲ್ಲಿಯೂ ಕಣ್ಣುಕೋರೈಸುವ ಬೆಳಕಿನಲ್ಲಿ ಕಂಡು ಬಂದ ವಿವಿಧ ಆಕೃತಿಗಳ ಚಲನವಲನಗಳು ವಿಸ್ಮಯಗೊಳಿಸಿದವು. ಹತ್ತು ಮಂಟಪಗಳನ್ನೂ ಸುತ್ತುವರಿದ ಅಪಾರ ಜನಸ್ತೋಮ ಮನದಣಿಯೇ ವೀಕ್ಷಿಸಿತು.

ಮಂಟಪದಲ್ಲಿ ಪೌರಾಣಿಕ ಕಥಾವಸ್ತು ಪ್ರದರ್ಶಿತಗೊಳ್ಳುತ್ತಿದ್ದರೆ, ಮತ್ತೊಂದೆಡೆ ಯುವಕರು ಗುಂಪುಗೂಡಿ ಕುಣಿದು ಸಂಭ್ರಮಿಸಿದರು. ಕರತಾಡನ, ಶಿಳ್ಳೆಗಳ ನಡುವೆ ಮಂಟಪಗಳಲ್ಲಿ ವಿವಿಧ ಕಥಾವಸ್ತುಗಳನ್ನು ಪ್ರಸ್ತುತಪಡಿಸಲಾಯಿತು.

ಮೊದಲಿಗೆ ಪೇಟೆ ಶ್ರೀರಾಮಮಂದಿರದ ಮಂಟಪವು ‘ವೈಕುಂಠ ದರ್ಶನ’ ಕಥಾವಸ್ತುವನ್ನು ಪ್ರದರ್ಶಿಸುತ್ತಾ ಮುಂದೆ ಸಾಗಿತು. ನಂತರ ದೇಚೂರು ಶ್ರೀರಾಮಮಂದಿರ, ದಂಡಿನ ಮಾರಿಯಮ್ಮ, ಚೌಡೇಶ್ವರಿ, ಕಂಚಿ ಕಾಮಾಕ್ಷಿ, ಚೌಟಿ ಮಾರಿಯಮ್ಮ, ಕೋದಂಡರಾಮ, ಕೋಟೆ ಮಾರಿಯಮ್ಮ, ಕೋಟೆ ಗಣಪತಿ ಹಾಗೂ ಕರವಲೆ ಭಗವತಿ ದೇಗುಲಗಳು ಮಂಟಪಗಳಲ್ಲಿ ಪೌರಾಣಿಕ ಕಥಾವಸ್ತುಗಳನ್ನು ಪ್ರದರ್ಶಿಸಿದವು.ಗೋಣಿಕೊಪ್ಪಲಿನಲ್ಲೂ ದಸರಾ ಪ್ರಯುಕ್ತ ಸ್ತಬ್ಧಚಿತ್ರಗಳ ಮೆರವಣಿಗೆ ಮಂಟಪಗಳ ಶೋಭಾಯಾತ್ರೆ ನಡೆಯಿತು.

ಮಂಗಳೂರು: ನವದುರ್ಗೆಯರ ಶೋಭಾಯಾತ್ರೆ ಸಡಗರ

ಮಂಗಳೂರು: ‘ಭಾವೈಕ್ಯದ ದಸರಾ’ ಎಂದೇ ಖ್ಯಾತವಾಗಿರುವ ‘ಮಂಗಳೂರು ದಸರಾ’ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಪೂಜೆಗೊಂಡ ಶ್ರೀಶಾರದಾ ದೇವಿ ಹಾಗೂ ನವದುರ್ಗೆಯರ ಮೂರ್ತಿಗಳ ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡ ಲಕ್ಷಾಂತರ ಮಂದಿ ಭಕ್ತಿ ಭಾವದಲ್ಲಿ ಮಿಂದೆದ್ದರು.

ಶ್ರೀಶಾರದೆ, ದೇವಿಯ ವಿವಿಧ ಅವತಾರಗಳನ್ನು ಬಿಂಬಿಸುವ ಮೂರ್ತಿಗಳು, ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಹಾಗಣಪತಿ ಮೂರ್ತಿ ವಿದ್ಯುದ್ದೀಪಗಳಿಂದ ಅಲಂಕೃತವಾಗಿದ್ದ ರಥದಲ್ಲಿ ಒಂದರ ಹಿಂದೆ ಒಂದರಂತೆ ಸಾಗಿ ಬರುತ್ತಿದ್ದಂತೆಯೇ ಝಗಮಗಿಸುವ ಬೆಳಕಿನ ಲೋಕವೇ ಸೃಷ್ಟಿಯಾಗಿತ್ತು.

ಈ ಮನಮೋಹಕ ದೃಶ್ಯ ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಭಕ್ತರ ಮನದಲ್ಲಿ ಅಚ್ಚಾಯಿತು. ನಗರದೆಲ್ಲೆಡೆ ತಾಸೆ ಪೆಟ್ಟಿನ ಸದ್ದು ಮಾರ್ದನಿಸುತ್ತಿದ್ದರೆ, ‘ಮಾರ್ನೆಮಿ’ಯ ಹುಲಿವೇಷಗಳ ಕುಣಿತದ ಅಬ್ಬರಕ್ಕೆ ಪ್ರೇಕ್ಷಕರು ನಿಬ್ಬೆರಗಾದರು.

ಶೋಭಾಯಾತ್ರೆಯಲ್ಲಿ ರಂಗು ರಂಗಿನ ಸ್ತಬ್ಧಚಿತ್ರಗಳು ಹಾಗೂ ಹುಲಿವೇಷ ತಂಡಗಳು ಪ್ರಮುಖ ಆಕರ್ಷಣೆಯಾಗಿದ್ದವು. ಕರಾವಳಿಯ ಚೆಂಡೆ ವಾದನ, ಡೊಳ್ಳು ಕುಣಿತ, ಸೋಮನ ಕುಣಿತ, ಪೂಜಾ ಕುಣಿತ, ವೀರಗಾಸೆ, ಬ್ಯಾಂಡ್‌ ವಾದನ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು.

ಊರಿನ ಭಕ್ತಾದಿಗಳಲ್ಲದೇ, ಪರವೂರುಗಳಿಂದ ಬಂದಿದ್ದ ಲಕ್ಷಾಂತರ ಮಂದಿ ಜಾತಿ ಮತ ಭೇದ ಮರೆತು ಉತ್ಸವದಲ್ಲಿ ಭಾಗಿಯಾದರು. ವಿದ್ಯುದ್ದೀಪಗಳಿಂದ ಅಲಂಕೃತ 12 ಕಿ.ಮೀ ಉದ್ದದ ಮಾರ್ಗದುದ್ದಕ್ಕೂ ಜನ ಕಿಕ್ಕಿರಿದು ಸೇರಿದ್ದರು. ವೈಭವೋಪೇತ ದಸರಾ ಮೆರವಣಿಗೆಯ ಸೊಬಗನ್ನು ಆಸ್ವಾದಿಸಲು ಕೆಲವರು ಕಟ್ಟಡಗಳನ್ನೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT