ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಕಾಲೇಜು | ಅವರಿಗೆ ಬೇಕಾದ್ದು ಅವರಿಗೆ, ನಮಗೆ ಬೇಕಾದ್ದು ನಮಗೆ: ಡಿಕೆಶಿ

ವೈದ್ಯಕೀಯ ಕಾಲೇಜು ಸ್ಥಳಾಂತರ: ಗೊಂದಲ ಸೃಷ್ಟಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ
Published 5 ಸೆಪ್ಟೆಂಬರ್ 2023, 16:08 IST
Last Updated 5 ಸೆಪ್ಟೆಂಬರ್ 2023, 16:08 IST
ಅಕ್ಷರ ಗಾತ್ರ

ಕನಕಪುರ (ರಾಮನಗರ): ‘ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಮಾಡಬೇಕು ಅಂದುಕೊಂಡಿದ್ದರು. ಇವತ್ತಿನ ತನಕ ಆಗಿಲ್ಲ. ಕನಕಪುರಕ್ಕೆ ಬಜೆಟ್‌ನಲ್ಲಿ ವೈದ್ಯಕೀಯ ಕಾಲೇಜು ಮಂಜೂರು ಮಾಡಿದ್ದರು. ಎರಡೂ ಕಡೆಯೂ ಕಟ್ಟಡ ನಿರ್ಮಾಣಕ್ಕೆ ಯೋಜನೆ ಆಗಿದೆ. ಅವರಿಗೆ ಸಿಗಬೇಕಾದ್ದು ಅವರಿಗೆ, ನಮಗೆ ಸಿಗಬೇಕಾದ್ದು ನಮಗೆ...’

ಆರೋಗ್ಯ ವಿವಿ ವೈದ್ಯಕೀಯ ಕಾಲೇಜನ್ನು ರಾಮನಗರದಿಂದ ಕನಕಪುರಕ್ಕೆ ಸ್ಥಳಾಂತರ ಹಾಗೂ ಬಂದ್ ಕರೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿದ ಪ್ರತಿಕ್ರಿಯೆ ಇದು. ತಮ್ಮ ಮಾತಿನುದ್ದಕ್ಕು ಕಾಲೇಜು ಸ್ಥಳಾಂತರ ಕುರಿತು ಸ್ಪಷ್ಟಪಡಿಸದ ಅವರ ಮಾತುಗಳು, ಮತ್ತಷ್ಟು ಗೊಂದಲ ಸೃಷ್ವಿಸಿವೆ.

‘ಕನಕಪುರ ಕಾಲೇಜು ಯೋಜನೆ ಕಾರ್ಯಗತಗೊಂಡು, ಟೆಂಡರ್ ಆಗಿ ಭೂಮಿ ಪೂಜೆಯಷ್ಟೇ ಬಾಕಿ ಇತ್ತು. ಬಿಜೆಪಿ ಅವಧಿಯಲ್ಲಿ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಕೊಡಲಾಯಿತು. ಆಗ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಸ್ಥಳಾಂತರ ಮಾಡಿ ಕೊಡುತ್ತೇವೆ ಎಂದಿದ್ದರು’ ಎಂದು ಹೇಳಿದರು.

‘ರಾಮನಗರಕ್ಕೆ ಏನು ಬರಬೇಕೊ ಅದು ಬರಬೇಕು. ಕನಕಪುರಕ್ಕೆ ಏನು ಬರಬೇಕು ಅದೂ ಬರಬೇಕು. ರಾಮನಗರಕ್ಕೆ ಬರಬಾರದು ಎಂದು ಹೇಳಿದವರು ಯಾರು? ಜಿಲ್ಲೆಗೆ ಒಂದು ವೈದ್ಯಕೀಯ ಕಾಲೇಜು ಇರಬೇಕು ಎನ್ನುವ ನಿಯಮವಿರುವ ಕಾರಣ, ಅದನ್ನು ಕನಕಪುರದ ಬಳಿ ಮಾಡಲಾಗುತ್ತಿದೆ. ವಿಶ್ವವಿದ್ಯಾಲಯ ಮಾಡಬೇಕು ಅಂದುಕೊಂಡಿದ್ದ ಕುಮಾರಸ್ವಾಮಿ ಅವರ ಶಿಷ್ಯನ 15 ಎಕರೆ ಜಮೀನು ಬಿಟ್ಟು ಹೋಗಿದೆ. ಅದನ್ನು ಹೇಗೆ ತೆಗೆದುಕೊಳ್ಳಬೇಕು ಎಂದು ತೀರ್ಮಾನ ಮಾಡಬೇಕು’ ಎಂದು ತಿಳಿಸಿದರು.

‘ಕನಕಪುರದಲ್ಲಿ ತಾಯಿ- ಮಗು ಆಸ್ಪತ್ರೆ ಉದ್ಘಾಟನೆ ವೇಳೆ ನಾನು ಆಡಿರುವ ಮಾತು, ಕುಮಾರಸ್ವಾಮಿ ಅವರ ಬಜೆಟ್ ಭಾಷಣ ಹಾಗೂ ಸಿದ್ದರಾಮಯ್ಯ ಅವರು ಬಜೆಟ್ ಭಾಷಣದ ಮಾತುಗಳನ್ನು ಕೇಳಿದರೆ, ಯಾರು ರಾಜಕೀಯ ಮಾಡುತ್ತಿದ್ದಾರೆ ಎನ್ನುವ ಸತ್ಯ ತಿಳಿಯುತ್ತದೆ. ಈ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನವರು ರಾಜಕಾರಣ ಮಾಡಬೇಕು ಎಂದರೆ ಮಾಡಲಿ. ನನಗೆ ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ’ ಎಂದು ಒಗಟಿನ ರೂಪದಲ್ಲಿ ತಿಳಿಸಿದರು.

ಎರಡು ಕಡೆ ಸಿಕ್ಕಿರುವುದು ಪುಣ್ಯ: ‘ಕಾಲೇಜು ಕುರಿತು ಹಾದಿ ಬೀದಿಯಲ್ಲಿ ಹೋಗುವವರಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಪ್ರಶ್ನೆ ಕೇಳುವವರನ್ನು ಕೇಳಬೇಡಿ ಎಂದು ಹೇಳಲಾಗುತ್ತದೆಯೇ? ಯಾರಿಗೂ ಉತ್ತರ ಕೊಡಲು ತಯಾರಿಲ್ಲ. ಮೊದಲೇ ಕನಕಪುರಲ್ಲಿ ಟೆಂಡರ್ ಕರೆಯಲಾಗಿತ್ತು. ಈಗ ಮಾಡದಿದ್ದರೆ ನಷ್ಟ ತುಂಬಿ ಕೊಡಬೇಕಾಗುತ್ತದೆ. ರಾಮನಗರದ ಜನತೆಗೆ ಎರಡು ಕಡೆ ಸಿಕ್ಕಿರುವುದು ಪುಣ್ಯ’ ಎಂದು ಪ್ರತಿಕ್ರಿಯಿಸಿದರು.

ಕಾಲೇಜು ಸ್ಥಳಾಂತರ ವಿರೋಧಿ ಹೋರಾಟಗಾರರು ಮುಖ್ಯಮಂತ್ರಿ ಭೇಟಿ ಮಾಡಿದ ಕುರಿತ ಪ್ರಶ್ನೆಗೆ, ‘ನಾನು ರಾಮನಗರದ ಪಿಎಲ್‌ಡಿ ಕಟ್ಟಡವನ್ನು ಕೆಡವಿ ಜಿಲ್ಲಾಸ್ಪತ್ರೆ ಕಟ್ಟಿಸಿದಾಗ ಜೆಡಿಎಸ್ ಮತ್ತು ಬಿಜೆಪಿಯವರು ಬರಲಿಲ್ಲ ಏಕೆ? ಅಂತಹ ಧೈರ್ಯ ಮಾಡಿದ್ದರಿಂದ, ರಾಮನಗರದಲ್ಲಿ ಅತ್ಯುತ್ತಮ ಜಿಲ್ಲಾಸ್ಪತ್ರೆ ಆಗಿದೆ. ನನ್ನ ಮೊದಲ ಆದ್ಯತೆ ಕನಕಪುರಕ್ಕಲ್ಲ. ಬದಲಿಗೆ, ರಾಮಮನಗರಕ್ಕೆ’ ಎಂದರು.

ಈಗ ಪ್ರಸ್ತಾವವಾಗಿರುವ ಕಾಲೇಜು ಮರಳವಾಡಿಯಲ್ಲಿ ಆಗಲಿದೆ. ಅದು ರಾಮನಗರ ಕ್ಷೇತ್ರದಿಂದ ಕೇವಲ 3 ಕಿಲೋಮೀಟರ್ ದೂರದಲ್ಲಿದೆ. ರಾಮನಗರದಲ್ಲಿ ವಿಶ್ವವಿದ್ಯಾಲಯ ಇರಲಿದೆ

– ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ

ಎರಡೂ ಕಡೆ ಕಾಲೇಜು ಎಂದಿದ್ದ ಸಂಸದ

‘ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಮತ್ತು ವೈದ್ಯಕೀಯ ಕಾಲೇಜು ಎಲ್ಲೂ ಹೋಗಲ್ಲ. ರಾಮನಗರ ಮತ್ತು ಕನಕಪುರದಲ್ಲೂ ಕಾಲೇಜು ಸ್ಥಾಪನೆಯಾಗಲಿದೆ. ಯಾರ‍್ಯಾರು ರಾಮನಗರ ಬಂದ್ ಮಾಡುತ್ತಾರೊ ಎಲ್ಲವನ್ನೂ ನೋಡೋಣ’ ಎಂದು ಸಂಸದ ಡಿ.ಕೆ. ಸುರೇಶ್ ಇತ್ತೀಚೆಗೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದರು. ಕ್ಯಾಂಪಸ್‌ನಲ್ಲೇ ಕಾಲೇಜು ಇರಲಿದೆ ಎಂದಿದ್ದ ಶಾಸಕ ಇದಕ್ಕೆ ಪೂರಕವಾಗಿ ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ರಾಮನಗರ ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ‘ಆರೋಗ್ಯ ವಿವಿ ಕಾಲೇಜು ಎಲ್ಲಿಗೂ ಸ್ಥಳಾಂತರವಾಗುವುದಿಲ್ಲ. ವಿವಿ ಕ್ಯಾಂಪಸ್‌ನಲ್ಲೇ ಇರಲಿದೆ. ಈ ಕುರಿತು ಎದ್ದಿರುವ ಗೊಂದಲ ಕುರಿತು ಸಂಸದ ಡಿ.ಕೆ. ಸುರೇಶ್ ಅವರ ಸಮ್ಮುಖದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಅವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಸಂಸದರೊಂದಿಗೆ ಕ್ಷೇತ್ರಕ್ಕೆ ಬಂದು ಕಾಲೇಜಿಗೆ ಪೂಜೆ ನೆರವೇರಿಸುವಂತೆ ಸಚಿವರನ್ನು ಕೇಳಿಕೊಂಡಿದ್ದೇನೆ’ ಎಂದಿದ್ದರು.

ರಾಮನಗರದಲ್ಲಿ ವಿವಿ ಕ್ಯಾಂಪಸ್

ಕನಕಪುರದಲ್ಲಿ ಕಾಲೇಜು ಎಂದಿದ್ದ ಸಚಿವ ‘ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್) ಕ್ಯಾಂಪಸ್ ನಿರ್ಮಾಣವಾಗಲಿದ್ದು ಬಜೆಟ್‌ನಲ್ಲಿ ಘೋಷಿಸಿದಂತೆ ಕನಕಪುರದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ ಆಗಲಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿವಿ ನಿರ್ಮಾಣಕ್ಕೆ ₹400 ಕೋಟಿ ಬಿಡುಗಡೆ ಮಾಡಲಾಗಿತ್ತು. ಟೆಂಡರ್ ಕೂಡ ಕರೆಯಲಾಗಿದೆ. ರಾಮನಗರದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಕಾಲೇಜನ್ನು ಕನಕಪುರಕ್ಕೆ ಸ್ಥಳಾಂತರಿಸಲಾಗುವುದು. ರಾಮನಗರದಲ್ಲಿ ವಿವಿ ಆಡಳಿತ ಕಟ್ಟಡ ಮಾತ್ರ ಇರಲಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಅವರು ಕಳೆದ ತಿಂಗಳು  ಆರ್‌ಜಿಯುಎಚ್‌ಎಸ್ ಕ್ಯಾಂಪಸ್ ನಿರ್ಮಾಣ ಕುರಿತು ಅಧಿಕಾರಿಗಳ ಜೊತೆ ನಡೆಸಿದ್ದ ಸಭೆಯಲ್ಲಿ ಸ್ಪಷ್ಟಪಡಿಸಿದ್ದರು. ರಾಮನಗರದಿಂದ ಕನಕಪುರಕ್ಕೆ ಕಾಲೇಜು ಸ್ಥಳಾಂತರ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT