ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಋಣ ಪರಿಹಾರ ಕಾಯ್ದೆ ಅನುಷ್ಠಾನ; ಮೀಟರ್‌ ಬಡ್ಡಿ ಸುಳಿಯಿಂದ ವಿಮೋಚನೆ?

ಗಿರವಿದಾರರು, ಲೇವಾದೇವಿದಾರರಿಗೆ ಚಾಟಿ
Last Updated 25 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೀಟರ್‌ ಬಡ್ಡಿಯ ಸುಳಿಯೊಳಗೆ ಸಿಲುಕಿ ನರಳುತ್ತಿರುವ ಬಡ ವರ್ಗದವರನ್ನು ಶೋಷಣೆ ಮುಕ್ತಗೊಳಿಸಲು ರಾಜ್ಯ ಸರ್ಕಾರ ತರಲು ಉದ್ದೇಶಿಸಿರುವ ಋಣ ಪರಿಹಾರ ಕಾಯ್ದೆಯ ಅನುಷ್ಠಾನದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಜಿಜ್ಞಾಸೆ ಆರಂಭವಾಗಿದೆ.

ಸಹಕಾರಿ ಸಂಸ್ಥೆಗಳ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಯೋಜನೆ ಘೋಷಿಸಿದ ಬಳಿಕವೂ ರೈತರ ಆತ್ಮಹತ್ಯೆ ಪ್ರಕರಣಗಳು ಅಲ್ಲಲ್ಲಿ ನಡೆದಿವೆ. ಗಿರವಿದಾರರು, ಲೇವಾದೇವಿದಾರರು ಮತ್ತು ಖಾಸಗಿ ಹಣಕಾಸು ಸಂಸ್ಥೆಗಳ ಭಾರಿ ಬಡ್ಡಿಗೆ ಬೇಸತ್ತು ಕೆಲವರು ಸಾವಿಗೆ ಶರಣಾಗಿದ್ದಾರೆ. ಇನ್ನೂ ಕೆಲವರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅದಕ್ಕೆ ಅಂತ್ಯ ಹಾಡಲು, ಸಣ್ಣ ರೈತರ ಋಣ ಭಾರ ಇಳಿಸಲು ಕಾನೂನು ಮತ್ತು ಸಂಸದೀಯ ಇಲಾಖೆ ಸುಗ್ರೀವಾಜ್ಞೆ ಸಿದ್ಧಪಡಿಸುತ್ತಿದೆ ಎಂದು ಸಹಕಾರ ಇಲಾಖೆ ಮೂಲಗಳು ತಿಳಿಸಿವೆ.

ಗಿರವಿದಾರರು ಮತ್ತು ಲೇವಾದೇವಿದಾರರು ಭದ್ರತೆ ಪಡೆದು ನೀಡಿದ ಸಾಲಕ್ಕೆ ವಾರ್ಷಿಕ ಶೇ 14ರಷ್ಟು ಮತ್ತು ಭದ್ರತೆ ಪಡೆಯದ ಸಾಲಕ್ಕೆ ಶೇ 16ರಷ್ಟು ಬಡ್ಡಿ ವಸೂಲಿ ಮಾಡಲು ಕರ್ನಾಟಕ ಮನಿ ಲೆಂಡರ್‌ (ಲೇವಾದೇವಿ) ಕಾಯ್ದೆ ಅಡಿ ಅವಕಾಶ ಇದೆ. ಮೀಟರ್‌ ಬಡ್ಡಿ ಹಾಕಿ ಸುಲಿಗೆ ಮಾಡುವವರ ವಿರುದ್ಧ ತಹಶೀಲ್ದಾರ್‌ರವರ ಸಹಾಯವಾಣಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಉಪ ನಿಬಂಧಕರು ಅಥವಾ ಪೊಲೀಸ್‌ ಠಾಣೆಯಲ್ಲಿ ದೂರು ನೀಡಬಹುದು.

‘ನೋಂದಾಯಿಸಿದ ಗಿರವಿದಾರರು, ಲೇವಾದೇವಿದಾರರು ರಾಜ್ಯದಾದ್ಯಂತ ಇದ್ದಾರೆ. ಸುಗ್ರೀವಾಜ್ಞೆ ಜಾರಿಗೆ ಬಂದರೆ, ನಿಯಮ ಪ್ರಕಾರ ಅರ್ಹತೆ ಪಡೆದವರು ಸಾಲ ಮತ್ತು ಬಡ್ಡಿ ಪಾವತಿಸದೆ ಭದ್ರತೆಯಾಗಿ ನೀಡಿದ ಚರಾಸ್ತಿ ಮತ್ತು ಸ್ಥಿರಾಸ್ತಿ ದಾಖಲೆ ವಾಪಸು ಪಡೆದು ಋಣ ಮುಕ್ತರಾಗಬಹುದು. ಋಣ ವಿಮೋಚನೆ ಸಾಲಕ್ಕೆ ಸಂಬಂಧಿಸಿದಂತೆ ಯಾವುದೇ ನ್ಯಾಯಾಲಯ ವ್ಯಾಜ್ಯವನ್ನು ಪರಿಗಣಿಸುವಂತಿಲ್ಲ’ ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕ (ಪಟ್ಟಣ ಬ್ಯಾಂಕುಗಳ ವಿಭಾಗ) ಎಂ.ಪಿ. ಮಂಜುನಾಥ ತಿಳಿಸಿದರು.

‘ಅನುಷ್ಠಾನಕ್ಕೆ ಇಚ್ಛಾಶಕ್ತಿ ಅಗತ್ಯ’
‘ಕಾನೂನು ಅನುಷ್ಠಾನಗೊಳಿಸುವ ಇಚ್ಛಾಶಕ್ತಿಯನ್ನು ಕುಮಾರಸ್ವಾಮಿ ಸರ್ಕಾರ ಪ್ರದರ್ಶಿಸಬೇಕು. ಕಂದಾಯ, ಪೊಲೀಸ್‌ ಇಲಾಖೆ ನೆರವಿನಿಂದ ಸಹಕಾರ ಇಲಾಖೆ ದೃಢ ಹೆಜ್ಜೆ ಇಟ್ಟರೆ ಮಾತ್ರ ಅಕ್ರಮ ಬಡ್ಡಿ ವ್ಯವಹಾರ ನಡೆಸುವವರನ್ನು ತಹಬಂದಿಗೆ ತರಲು ಸಾಧ್ಯ ಎನ್ನುತ್ತಾರೆ’ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಮಾರುತಿ ಮಾನ್ಪಡೆ.

‘ದೊಡ್ಡ ಪ್ರಮಾಣದ ಪ್ರಯತ್ನ’
‘ಉದ್ದೇಶಿತ ಕಾಯ್ದೆ ಸಾಮಾಜಿಕವಾಗಿ ಶ್ಲಾಘನೀಯ. ಆದರೆ, ಇದರ ಪ್ರಯೋಜನವನ್ನು ಜನರಿಗೆ ತಲುಪಿಸಲು ಸರ್ಕಾರ ದೊಡ್ಡ ಪ್ರಮಾಣದ ಪ್ರಯತ್ನ ಮಾಡಬೇಕಾಗುತ್ತದೆ. ಹಲವು ದಶಕಗಳಿಂದೀಚೆಗೆ ರಾಜ್ಯವು ಇಂತಹ ದೊಡ್ಡ ಮಟ್ಟದ ಕಾಯ್ದೆ ಅನುಷ್ಠಾನ ಮಾಡಿದ್ದನ್ನು ನೋಡಿಲ್ಲ’ ಎಂದು ಸುಪ್ರೀಂಕೋರ್ಟ್ ವಕೀಲ ಕೆ.ವಿ. ಧನಂಜಯ ಹೇಳಿದರು.

‘ಹಸ್ತಕ್ಷೇಪ ಇಲ್ಲದಿದ್ದರೆ ಜಾರಿ ಸಾಧ್ಯ’
‘ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದಾಗ ಋಣ ಮುಕ್ತ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗಿತ್ತು. ಎರಡೂ ಕಾಲಘಟ್ಟಗಳು ಬೇರೆ ಇರಬಹುದು. ಆದರೆ, ಮೀಟರ್‌ ಬಡ್ಡಿ ವ್ಯವಹಾರ ನಡೆಸುವವರು ರಾಜಕಾರಣಿಗಳ ಶಿಷ್ಯರು. ರಾಜಕಾರಣಿಗಳು ಹಸ್ತಕ್ಷೇಪ ಮಾಡದಿದ್ದರೆ ಕಾಯ್ದೆ ಜಾರಿ ಕಷ್ಟವಾಗಲಾರದು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌. ವಿಶ್ವನಾಥ್‌ ಅಭಿಪ್ರಾಯಪಟ್ಟರು.

‘ತಕ್ಷಣ ಪೊಲೀಸ್‌ ರಕ್ಷಣೆ ಒದಗಿಸಬೇಕು’
‘ಉದ್ದೇಶಿತ ಸುಗ್ರೀವಾಜ್ಞೆ ಕಾನೂನು ಆಗಿ ಜಾರಿಗೆ ಬರಲು ಸಮಯ ಬೇಕು. ಅದಕ್ಕೂ ಮೊದಲೇ ಖಾಸಗಿ ಲೇವಾದೇವಿಗಾರರು ಸಾಲ ಪಡೆದವರಿಗೆ ಕಿರುಕುಳ, ಹಲ್ಲೆ ಮತ್ತಿತರ ಒತ್ತಡದ ಮೂಲಕ ಸಾಲ ವಸೂಲಾತಿಗೆ ಮುಂದಾಗುವ ಸಾಧ್ಯತೆ ಇದೆ. ಅದನ್ನು ತಪ್ಪಿಸಲು ಕಾನೂನಾತ್ಮಕ ಕ್ರಮ ಅಗತ್ಯ. ಸಾಲ ಪಡೆದ ಬಡವರಿಗೆ ತಕ್ಷಣ ಪೊಲೀಸ್‌ ರಕ್ಷಣೆ ಒದಗಿಸಬೇಕು’ ಎಂದು ಕಾಂಗ್ರೆಸ್‌ ಶಾಸಕ ಎಚ್‌.ಕೆ.ಪಾಟೀಲ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ಅಂಕಿ–ಅಂಶ
* 8,274 ರಾಜ್ಯದಲ್ಲಿರುವ ನೋಂದಾಯಿತ ಗಿರವಿದಾರರು
* 10,692 ಲೇವಾದೇವಿದಾರರು
* 200ಕ್ಕೂ ಹೆಚ್ಚು ಖಾಸಗಿ ಹಣಕಾಸು ಸಂಸ್ಥೆಗಳು

ಮುಖ್ಯಾಂಶಗಳು
* ದುರ್ಬಲರು, ಸಣ್ಣ ರೈತರು, ಭೂರಹಿತ ಕೃಷಿ ಕಾರ್ಮಿಕರಿಗೆ ಅನುಕೂಲ
* ಯಾವುದೇ ನ್ಯಾಯಾಲಯ ವ್ಯಾಜ್ಯ ಪರಿಗಣಿಸುವಂತಿಲ್ಲ
* ಚಿನ್ನ ಅಡವಿಟ್ಟುಕೊಂಡು ಸಾಲ ನೀಡುವ ಕಂಪನಿಗಳಿಗೂ ಅನ್ವಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT