ಬೆಂಗಳೂರು: ‘ವಕ್ಫ್ ಆಸ್ತಿಗಳ ಮೇಲೆ ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ಅವಕಾಶ ಮಾಡಿಕೊಡುವ ‘ವಕ್ಫ್ ತಿದ್ದುಪಡಿ ಮಸೂದೆ’ ವಿರುದ್ಧ ರಾಜ್ಯ ಸರ್ಕಾರವು ಖಂಡನಾ ನಿರ್ಣಯ ಕೈಗೊಳ್ಳಬೇಕು. ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕು’ ಎಂದು ವಕ್ಫ್ ಆಡಳಿತ ಮಂಡಳಿ ಮತ್ತು ಮುಸ್ಲಿಂ ಧರ್ಮಗುರುಗಳ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು.
ವಕ್ಫ್ ಆಡಳಿತ ಮಂಡಳಿ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಮುಸ್ಲಿಂ ಧರ್ಮಗುರುಗಳು ಶನಿವಾರ ನಡೆಸಿದ ಸಭೆಯಲ್ಲಿ, ಉದ್ದೇಶಿತ ತಿದ್ದುಪಡಿ ಮಸೂದೆಯನ್ನು ವಿರೋಧಿಸಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು. ನಂತರ, ನಿರ್ಣಯವನ್ನು ಒಳಗೊಂಡ ಮನವಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಲಾಯಿತು.
‘ಮುಸ್ಲಿಮರ ಕಲ್ಯಾಣಕ್ಕಾಗಿ ಈ ತಿದ್ದುಪಡಿ ತರಲಾಗುತ್ತಿದೆ ಎಂದು ಕೇಂದ್ರ ಸರ್ಕಾರವು ಬಿಂಬಿಸುತ್ತಿದೆ. ಆದರೆ ಈ ಮಸೂದೆಯಲ್ಲಿ ಹಲವು ಅಪಾಯಕಾರಿ ಅಂಶಗಳಿವೆ. ವಕ್ಫ್ ಮಂಡಳಿಯ ಸ್ವಾಯತ್ತೆಯನ್ನು ಈ ಮಸೂದೆ ಇಲ್ಲವಾಗಿಸುತ್ತದೆ. ಹೀಗಾಗಿಯೇ ಇದನ್ನು ನಾವು ವಿರೋಧಿಸಬೇಕು’ ಎಂದು ನಿಯೋಗ ಒತ್ತಾಯಿಸಿತು.
‘ಈಗ ವಕ್ಫ್ ಆಡಳಿತ ಮಂಡಳಿಗಳಲ್ಲಿ ಒಬ್ಬ ಮುಸ್ಲಿಮೇತರ ಸದಸ್ಯರಿರಲು ಅವಕಾಶವಿದೆ. ಆ ಸಂಖ್ಯೆಯನ್ನು ಕೇಂದ್ರ ಸರ್ಕಾರವು 13ಕ್ಕೆ ಏರಿಕೆ ಮಾಡಲು ಹೊರಟಿದೆ. ಮಂಡಳಿಗಳಲ್ಲಿ ಸರ್ಕಾರದಿಂದ ನಾಮನಿರ್ದೇಶನಗೊಂಡ ಮುಸ್ಲಿಮೇತರರು ಮತ್ತು ಸರ್ಕಾರದ ಪ್ರತಿನಿಧಿಗಳ ಪ್ರಾಬಲ್ಯ ಹೆಚ್ಚಾದರೆ, ವಕ್ಫ್ ಮಂಡಳಿಯ ಅಧಿಕಾರ ಮೊಟಕಾಗುತ್ತದೆ. ಅದರಿಂದ ಧಾರ್ಮಿಕ ಚಟುವಟಿಕೆಗಳಿಗೆ ತೊಡಕಾಗುತ್ತದೆ’ ಎಂದು ನಿಯೋಗ ಕಳವಳ ವ್ಯಕ್ತಪಡಿಸಿತು.
‘ಮುಸ್ಲಿಮರು ಮತ್ತು ಮುಸ್ಲಿಮೇತರರು ಧರ್ಮಕಾರ್ಯಗಳಿಗಾಗಿ ದಾನ ನೀಡಿದ ಆಸ್ತಿಗಳನ್ನು ವಕ್ಫ್ ಮಂಡಳಿಗಳು ನಿರ್ವಹಿಸುತ್ತವೆ. ಸರ್ಕಾರವು ಆ ಆಸ್ತಿಗಳನ್ನು ದಾನ ನೀಡಿರುವುದಿಲ್ಲ ಮತ್ತು ಸರ್ಕಾರದ ಹಣದಲ್ಲಿ ಅವುಗಳನ್ನು ಖರೀದಿಸಿರುವುದಿಲ್ಲ. ಆದರೆ ಈಗಿನ ತಿದ್ದುಪಡಿ ಮಸೂದೆಯು ವಕ್ಫ್ ಆಸ್ತಿಗಳ ಮೇಲೆ ಸರ್ಕಾರದ ನಿಯಂತ್ರಣವನ್ನು ಸಾಧ್ಯವಾಗಿಸುತ್ತದೆ. ಹೀಗಾಗಿ ಈ ಮಸೂದೆ ವಿರುದ್ಧ ಮುಂದಿನ ಅಧಿವೇಶನದಲ್ಲಿ ಖಂಡನಾ ನಿರ್ಣಯವನ್ನು ಕೈಗೊಳ್ಳಲು ಕ್ರಮ ತೆಗೆದುಕೊಳ್ಳಬೇಕು’ ಎಂದು ನಿಯೋಗ ಕೋರಿತು.