ಬೆಂಗಳೂರು: ‘ಮೇಲ್ಮನೆಯಲ್ಲಿ ನಾವು (ಕಾಂಗ್ರೆಸ್) ಬಹುಮತ ಪಡೆದ ನಂತರ ಭೂ ಸುಧಾರಣಾ ಕಾಯ್ದೆಗೆ ಮತ್ತೆ ತಿದ್ದುಪಡಿ ತಂದು ಕೃಷಿಕರ ಜಮೀನುಗಳು ಉದ್ಯಮಿಗಳ ಪಾಲಾಗುತ್ತಿರುವುದಕ್ಕೆ ಕಡಿವಾಣ ಹಾಕುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಂಗಳವಾರ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ದೇವರಾಜ ಅರಸು ಅವರು ಕೃಷಿಕರ ಅನುಕೂಲಕ್ಕಾಗಿ ‘ಉಳುವವನೇ ಹೊಲದೊಡೆಯ’ ಎಂದು ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿದರು. ಆದರೆ, ಬಿಜೆಪಿ ಸರ್ಕಾರ ಅದಕ್ಕೆ ತಿದ್ದುಪಡಿ ತಂದ ಪರಿಣಾಮ ಉದ್ಯಮಿಗಳೂ ಕೃಷಿಕರ ಭೂಮಿ ಪಡೆಯುವಂತಾಗಿದೆ’ ಎಂದರು.
‘ವಿಧಾನ ಪರಿಷತ್‌ನಲ್ಲಿ ನಮ್ಮ ಪಕ್ಷ ಬಹುಮತ ಪಡೆದ ತಕ್ಷಣ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಭೂಮಿಯ ಹಕ್ಕು ಖಾತ್ರಿಪಡಿಸಲು ‘79 ಎ’ ಮತ್ತು ‘ಬಿ’ ಗೆ ಮಾಡಿರುವ ತಿದ್ದುಪಡಿಯನ್ನು ಮತ್ತೆ ಸರಿಪಡಿಸಲಾಗುವುದು’ ಎಂದರು.
‘ಪ್ರತಿಯೊಬ್ಬರಿಗೂ ಶಿಕ್ಷಣ ಹಾಗೂ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿದರೆ ಮಾತ್ರ ಜಾತಿ ವ್ಯವಸ್ಥೆ ಹೋಗಬಹುದು. ಅದಕ್ಕಾಗಿಯೇ ಅರಸು ಅವರು ದಲಿತರು, ಮಹಿಳೆಯರು, ರೈತರು, ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಒತ್ತು ನೀಡಿದರು. ಮಲ ಹೊರುವ ಪದ್ಧತಿ ಸೇರಿದಂತೆ ಅನೇಕ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಿದರು. ಹಿಂದುಳಿದವರನ್ನು ತುಳಿಯಲು ಈಗಲೂ ನಿರಂತರ ಹುನ್ನಾರಗಳು ನಡೆಯುತ್ತಿವೆ. ನಾನು ಮುಖ್ಯಮಂತ್ರಿಯಾದ ಮೇಲೆ ಬಡವರಿಗೆ ಮಹಿಳೆಯರಿಗೆ, ರೈತರಿಗೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇವೆ. ಆದರೆ, ಬದಲಾವಣೆ ಬಯಸದ, ಬಡವರ ವಿರೋಧಿ ಪಟ್ಟಭದ್ರರು ಇದನ್ನು ವಿರೋಧಿಸುತ್ತಿದಾರೆ’ ಎಂದರು.
ದೇವರಾಜ ಅರಸು ಅವರ ಸಮಾಜಮುಖಿ ಕಾರ್ಯಕ್ರಮಗಳಿಂದಾಗಿ ಅಸಂಖ್ಯಾತ ಹಿಂದುಳಿದ ವರ್ಗದ ಜನರು ಇಂದು ನೆಮ್ಮದಿಯಿಂದ ಬದುಕು ನಡೆಸುವಂತಾಗಿದೆ. ಅದೇ ಹಾದಿಯಲ್ಲಿ ಸಿದ್ದರಾಮಯ್ಯ ಅವರು ಅಧಿಕಾರ ನಡೆಸುತ್ತಿದ್ದಾರೆ.-ಶಿವರಾಜ ತಂಗಡಗಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ
‘ಅರಸುಗೆ ಮರಣೋತ್ತರ ಭಾರತ ರತ್ನ’ಕ್ಕೆ ಶಿಫಾರಸು
‘ಅರಸು ಅವರ ಜೀವನ ಸಾಧನೆ ಪರಿಗಣಿಸಿ ಅವರಿಗೆ ಕೇಂದ್ರ ಸರ್ಕಾರ ‘ಮರಣೋತ್ತರ ಭಾರತ ರತ್ನ’ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ‘ದೇವರಾಜ ಅರಸು ಎಲೆಕ್ಟ್ರಾನಿಕ್ ಸಿಟಿ’ ಎಂದು ನಾಮಕರಣ ಮಾಡಲಾಗುವುದು’ ಎಂದು ಸಿದ್ದರಾಮಯ್ಯ ಹೇಳಿದರು. ‘ಸಮಾಜದಲ್ಲಿ ಮೇಲು-ಕೀಳು ಜಾತಿ ವ್ಯವಸ್ಥೆ ಇರಬಾರದು. ಎಲ್ಲರೂ ಮನುಷ್ಯರಾಗಿ ಸಮಾನವಾಗಿ ಬದುಕಬೇಕು ಎಂಬುವುದೇ ಬಸವಾದಿ ಶರಣರ ಕನಸು. ಇದೇ ತತ್ವದ ಆಧಾರದಲ್ಲಿ ಅಂಬೇಡ್ಕರ್ ಅವರು ಸಂವಿಧಾನ ರಚಿಸಿದರು. ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಅವರೂ ಈ ತತ್ವ ಸಿದ್ಧಾಂತಗಳ ಆಧಾರದಲ್ಲಿ ಆಡಳಿತ ನಡೆಸಿದರು’ ಎಂದು ಬಣ್ಣಿಸಿದರು.
ಕಾರ್ಮಿಕ ನಿಧಿಗೆ ₹5 ಲಕ್ಷ : ಕಾಂತಾ
‘ಪ್ರಶಸ್ತಿ ಮೊತ್ತ ₹ 5 ಲಕ್ಷವನ್ನು ಅಸಂಘಟಿತ ವಲಯದ ಕಾರ್ಮಿಕ ನಿಧಿಗೆ ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡುತ್ತೇನೆ’ ಎಂದು ಎಸ್.ಕೆ. ಕಾಂತಾ ಹೇಳಿದರು. 2024ನೇ ಸಾಲಿನ ಡಿ. ದೇವರಾಜ ಅರಸು ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು ‘ಪ್ರಶಸ್ತಿ ನೀಡಿರುವುದಕ್ಕೆ ಅಭಾರಿ. ಪ್ರಶಸ್ತಿ ಮೊತ್ತ ಕಾರ್ಮಿಕರ ಕಲ್ಯಾಣಕ್ಕೆ ಬಳಕೆಯಾಗುವುದೇ ಸರಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.