ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಪ್ರಕರಣ: ಅಜಿತ್ ಕುಮಾರ್ ರೈಗೆ ಜಾಮೀನು

Published 14 ಆಗಸ್ಟ್ 2023, 11:47 IST
Last Updated 14 ಆಗಸ್ಟ್ 2023, 11:47 IST
ಅಕ್ಷರ ಗಾತ್ರ

ಬೆಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಪ್ರಕರಣದ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಕೆ.ಆರ್. ಪುರ ತಾಲ್ಲೂಕಿನ ತಹಶೀಲ್ದಾರ್ ಆಗಿದ್ದ ಅಜಿತ್ ಕುಮಾರ್ ರೈ ಅವರಿಗೆ ನಗರದ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಈ ಸಂಬಂಧ ಜಾಮೀನು ಕೋರಿ ಅಜಿತ್‌ ಕುಮಾರ್‌ ರೈ ಸಲ್ಲಿಸಿದ್ದ ಅರ್ಜಿಯನ್ನು ಸಿಟಿ ಸಿವಿಲ್‌ ಸೆಷನ್ಸ್ ನ್ಯಾಯಾಲಯ-23ರ ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ ಸೋಮವಾರ ವಿಚಾರಣೆ ನಡೆಸಿದರು.

ಹೈಕೋರ್ಟ್ ನ ಹಿರಿಯ ವಕೀಲ ಎಂ.ಎಸ್. ಶ್ಯಾಮಸುಂದರ್, ಅಜಿತ್ ರೈ ಪರ ವಾದ ಮಂಡಿಸಿ, ‘ಅರ್ಜಿದಾರರ ಪತ್ನಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ ಕಾರಣ ಅವರ ಚಿಕಿತ್ಸೆಯ ದೃಷ್ಟಿಯಿಂದ ಜಾಮೀನು ಮಂಜೂರು ಮಾಡಬೇಕು’ ಎಂದು ಕೋರಿದರು.

ಕೆಲ ಕಾಲ ವಾದ ಆಲಿಸಿದ ನ್ಯಾಯಾಧೀಶರು ಮನವಿ ಪುರಸ್ಕರಿಸಿ, ‘ಆರೋಪಿಯು ₹ 5 ಲಕ್ಷ ಮೊತ್ತದ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ನೀಡಬೇಕು. ತನಿಖಾಧಿಕಾರಿಗೆ ಸಹಕರಿಸಬೇಕು’ ಎಂಬ ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದರು.

ಅಜಿತ್ ರೈ ಈ ಹಿಂದೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯ ವಜಾ ಮಾಡಿತ್ತು.

ಲೋಕಾಯುಕ್ತ ಪೊಲೀಸರು 2023ರ ಜೂನ್‌ 28ರಂದು ಅಜಿತ್‌ ರೈ ಮನೆ ಮೇಲೆ ದಾಳಿ ಮಾಡಿ ಶೋಧ ಕಾರ್ಯ ನಡೆಸಿದ್ದರು. ವಿಚಾರಣೆಗೆ ಸಹಕರಿಸದ ಆರೋಪದ ಅಡಿಯಲ್ಲಿ ಜೂನ್‌ 29ರಂದು ಅವರನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT