ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಆಡಳಿತ ಮಂಡಳಿಯ ಅನುಮೋದನೆ ಇಲ್ಲದೇ ಮೊದಲ ಬಾರಿಗೆ ಆಯ್ಕೆ ಪಟ್ಟಿ ಬಿಡುಗಡೆ ಮಾಡಿರುವುದು ಅಧ್ಯಕ್ಷರು ಮತ್ತು ಕಾರ್ಯದರ್ಶಿ ಮಧ್ಯದ ಭಿನ್ನಮತಕ್ಕೆ ಕಾರಣವಾಗಿದೆ.

ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ಗ್ರೂಪ್ ‘ಸಿ’ ವೃಂದದ ಕಿರಿಯ ಎಂಜಿನಿಯರ್ (ಜೆಇ) 330 ಹುದ್ದೆಗಳಿಗೆ ಆಯ್ಕೆಯಾದವರ ತಾತ್ಕಾಲಿಕ ಪಟ್ಟಿಯನ್ನು ಆಯೋಗದ ಒಪ್ಪಿಗೆ ಇಲ್ಲದೆ, ಕೆಪಿಎಸ್ಸಿ ಕಾರ್ಯದರ್ಶಿ ವಿಕಾಸ್ ಕಿಶೋರ್ ಸುರಳ್ಕರ್ ಪ್ರಕಟಿಸಿದ್ದಾರೆ. ಅಲ್ಲದೆ, ಪಟ್ಟಿ ಅನುಮೋದನೆಗಾಗಿ ಆಯೋಗದ ಅಧ್ಯಕ್ಷರಿಗೆ ಈಗಾಗಲೇ ರವಾನಿಸಿದ್ದ ಇತರ ಕಡತಗಳ ಮಾಹಿತಿಯನ್ನೂ ವೆಬ್ಸೈಟ್ನಲ್ಲಿ ನೀಡಿದ್ದಾರೆ.

ಕಾರ್ಯದರ್ಶಿಯ ಈ ನಡೆ ಆಯೋಗವನ್ನು (ಅಧ್ಯಕ್ಷರು ಮತ್ತು ಸದಸ್ಯರು) ಕೆರಳಿಸಿದೆ. ‘ಅನುಮೋದನೆ ಪಡೆಯದೆ ಪಟ್ಟಿ ಬಿಡುಗಡೆ ಕುರಿತ ಬಗ್ಗೆ ಚರ್ಚಿಸಲು ಸೋಮವಾರ (ಡಿ.19) ಆಯೋಗದ ಸಭೆ ನಡೆಸುವ ಚಿಂತನೆ ಇದೆ’ ಎಂದು ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಜೆಇ ಹುದ್ದೆಗೆ ಆಯ್ಕೆಯಾದವರ ಪಟ್ಟಿಯನ್ನು ಅನುಮೋದನೆಗೆ ನ. 30ರಂದೇ ಕಾರ್ಯದರ್ಶಿ ಸಲ್ಲಿಸಿದ್ದರು. 15 ದಿನ ಕಳೆದರೂ ಅನುಮೋದನೆ ನೀಡಿರಲಿಲ್ಲ. ‘ಅಭ್ಯರ್ಥಿಗಳ ಮಾಹಿತಿಗೆ ಮಾತ್ರ’ ಎಂದು ಉಲ್ಲೇಖಿಸಿ ತಾತ್ಕಾಲಿಕ ಪಟ್ಟಿಯನ್ನು ಕಾರ್ಯದರ್ಶಿ ಶುಕ್ರವಾರ ಬಿಡುಗಡೆ ಮಾಡಿದ್ದಾರೆ.

‘ಕಾನೂನಿನ ಪ್ರಕಾರ ಈ ಪಟ್ಟಿಗೆ ಯಾವುದೇ ಮಾನ್ಯತೆ ಇಲ್ಲ. ಆಯೋಗದಿಂದ ನ್ಯಾಯಸಮ್ಮತವಾದ ಆಕ್ಷೇಪಣೆಗಳಿದ್ದರೆ ಪಟ್ಟಿ ಬದಲಾವಣೆಗೆ ಒಳಪಡುತ್ತದೆ. ಅಭ್ಯರ್ಥಿಗಳು ಅಂತಿಮ ಅನುಮೋದನೆ ಪಡೆಯುವವರೆಗೆ ನಿರೀಕ್ಷಿಸಬೇಕು’ ಎಂದೂ ಕಾರ್ಯದರ್ಶಿ ಉಲ್ಲೇಖಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಕಾರ್ಯದರ್ಶಿ, ‘ಆಯೋಗಕ್ಕೆ ಪಟ್ಟಿ ರವಾನಿಸಿ 15 ದಿನ ಕಳೆದಿದೆ. ಎರಡು ಸಭೆಗಳಾದರೂ ಅನುಮೋದನೆ ಆಗಿಲ್ಲ. ಅಭ್ಯರ್ಥಿಗಳ ಒತ್ತಡ ಹೆಚ್ಚಿದ್ದರಿಂದ, ಅಂತಿಮ ಅನುಮೋದನೆಯ ಷರತ್ತಿನಲ್ಲಿ ಪಟ್ಟಿ ಬಿಡುಗಡೆ ಮಾಡಿದ್ದೇನೆ. ಮುಂದೆಯೂ ಆಯೋಗಕ್ಕೆ ರವಾನಿಸಿ 15 ದಿನ ಕಳೆದರೂ ಅನುಮೋದನೆ ಸಿಗದಿದ್ದರೆ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗುವುದು’ ಎಂದರು.

‘ಈ ನಡೆ ಆಯೋಗಕ್ಕೆ ವಿರುದ್ಧ ಅಲ್ಲವೇ?‘ ಎಂಬ ಪ್ರಶ್ನೆಗೆ ಅವರು, ‘ಈಗಾಗಲೇ 1:3 ಅನುಪಾತದಲ್ಲಿ ಅರ್ಹರಾದವರ ಅಂಕಗಳನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೆ, ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಯೋಗ ವ್ಯಕ್ತಪಡಿಸಿದ್ದ ಆಕ್ಷೇಪಣೆಗಳಿಗೂ ಉತ್ತರಿಸಿದ್ದೇನೆ. ಅಧ್ಯಕ್ಷರಿಗೆ ಲಿಖಿತವಾಗಿ ಮಾಹಿತಿ ನೀಡಿಯೇ ಪಟ್ಟಿ ಬಿಡುಗಡೆ ಮಾಡಿದ್ದೇನೆ. ಆದರೆ, ಅವರು ಬಿಡುಗಡೆ ಮಾಡಬೇಡಿ ಎಂದಿದ್ದರು’ ಎಂದರು.

‘ಮುಂದೆ ಸಂದರ್ಶನ ಇಲ್ಲದ ಎಲ್ಲ ಹುದ್ದೆಗಳಿಗೆ 1:3 ಅನುಪಾತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಹೆಸರಿನ ಜೊತೆಗೆ ಅಂಕಗಳನ್ನೂ ಬಿಡುಗಡೆ ಮಾಡುತ್ತೇನೆ. ಅರ್ಹರ ಅಂಕ ಗೊತ್ತಾದರೆ ಕೆಲ ಅಭ್ಯರ್ಥಿಗಳು ಕೋರ್ಟ್ ಮೆಟ್ಟಿಲೇರುತ್ತಾರೆ ಎಂದು ಹಿಂದೆ ಈ ರೀತಿ ಮಾಡುತ್ತಿರಲಿಲ್ಲ. ನಮ್ಮ ತಪ್ಪುಗಳು ಗೊತ್ತಾದರೆ ತಿದ್ದಿಕೊಳ್ಳಬಹುದು. ನಮ್ಮದು ಸರಿ ಎಂಬ ಖಚಿತತೆ ಇರುವುದರಿಂದ ಕೋರ್ಟ್ನಲ್ಲಿ ನಮಗೇ ಗೆಲುವು ಆಗಬಹುದು. ಪಾರದರ್ಶಕತೆ ಕಾಪಾಡಲು ಅರ್ಹರ ಅಂಕಗಳು ಮತ್ತು ಆಯ್ಕೆ ಪಟ್ಟಿಯನ್ನು ಆದಷ್ಟು ಬೇಗ ಬಿಡುಗಡೆ ಮಾಡುವುದು ನನ್ನ ಉದ್ದೇಶ’ ಎಂದರು.

‘ಜೆಇ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಅನುಮೋದನೆ ನೀಡಲು ವಿಳಂಬ ಏಕೆ ಎನ್ನುವುದು ನನಗೆ ಗೊತ್ತಿಲ್ಲ. ತಾತ್ಕಾಲಿಕ ಆಯ್ಕೆ ಪಟ್ಟಿ ಸರಿಯಿದೆ ಎಂಬ ಖಚಿತತೆ ನನಗಿದೆ. ಹಾಗೆಂದು, ಆಯೋಗದ ಅಧಿಕಾರ ಮೀರಿ ನಾನು ಈ ಕೆಲಸ ಮಾಡಿಲ್ಲ. ಅಭ್ಯರ್ಥಿಗಳ ಹಿತದೃಷ್ಟಿಯಿಂದ ಬಿಡುಗಡೆ ಮಾಡಿದ್ದೇನೆ’ ಎಂದೂ ಹೇಳಿದರು.

ಈ ಬಗ್ಗೆ ಪ್ರತಿಕ್ರಿಯೆಗೆ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅವರಿಗೆ ಹಲವು ಬಾರಿ ಕರೆ, ಸಂದೇಶ ಕಳುಹಿಸಿದರೂ ಅವರು ಸಂಪರ್ಕಕ್ಕೆ ಲಭ್ಯರಾಗಲಿಲ್ಲ.

ಎರಡೂ ಪಟ್ಟಿಯಲ್ಲಿ 161 ಅಭ್ಯರ್ಥಿಗಳು

ಜೆಇ 330 ಹುದ್ದೆಗಳಿಗೆ 1:3 ಅನುಪಾತದಲ್ಲಿ 977 ಹಾಗೂ ಸಹಾಯಕ ಎಂಜಿನಿಯರ್ (ಎಇ) 660 ಹುದ್ದೆಗಳಿಗೆ 1:3 ಅನುಪಾತದಲ್ಲಿ 1,974 ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಎರಡೂ ಹುದ್ದೆಗಳಿಗೆ ಅರ್ಹರಾದವರ ಪಟ್ಟಿಯಲ್ಲಿ 161 ಅಭ್ಯರ್ಥಿಗಳ ಹೆಸರಿವೆ. ಜೆಇಗೆ ಸಂದರ್ಶನ ಇಲ್ಲದೇ ಇರುವುದರಿಂದ ಆಯ್ಕೆ ಪಟ್ಟಿಗೆ ಅನುಮೋದನೆ ನೀಡದಿರಲು ಯಾವುದೇ ಸಕಾರಣ ಇಲ್ಲ. ಎಇ ಹುದ್ದೆಗಳಿಗೆ 50 ಅಂಕಗಳಿಗೆ ಸಂದರ್ಶನವಿದ್ದು, 40ಕ್ಕಿಂತ ಹೆಚ್ಚು, 20ಕ್ಕಿಂತ ಕಡಿಮೆ ಅಂಕ ನೀಡಿದರೆ ಸಂದರ್ಶನ ಮಂಡಳಿ ಸ್ಪಷ್ಟವಾದ ಕಾರಣ ನೀಡಬೇಕು. ಎಇ ಹುದ್ದೆಗಳ ಆಯ್ಕೆ ಪಟ್ಟಿಯ ಜೊತೆಗೇ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಗಳಿಸಿದ ಮತ್ತು ಸಂದರ್ಶನದ ಅಂಕ ನೀಡಲಾಗುವುದು’ ಎಂದು ಸುರಳ್ಕರ್ ತಿಳಿಸಿದರು.

ನನಗೆ ಆಯೋಗ ಸಂಪೂರ್ಣ ಸಹಕಾರ ನೀಡುತ್ತಿದೆ. ಆದರೆ, ಪಿಡಬ್ಲ್ಯುಡಿ ಸಂದರ್ಶನ ಅಂಕ ನಿಗದಿ, ಜೆಇ ಪಟ್ಟಿ ಬಿಡುಗಡೆ ಸೇರಿದಂತೆ ಕೆಲವು ವಿಷಯಗಳಲ್ಲಿ ಅಭಿಪ್ರಾಯ ವ್ಯತ್ಯಾಸ ಇರುವುದು ನಿಜ.
-ವಿಕಾಸ್ ಕಿಶೋರ್ ಸುರಳ್ಕರ್, ಕಾರ್ಯದರ್ಶಿ, ಕೆಪಿಎಸ್ಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.