ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ. ಸಿ.ಎನ್. ಮಂಜುನಾಥ್ ಚುನಾವಣ ಕಣಕ್ಕೆ: ರಾಜಕೀಯಕ್ಕಿಳಿದ ದೇವೇಗೌಡರ ಅಳಿಯ

ಬೆಂಗಳೂರು ಗ್ರಾಮಾಂತರ: ಬಿಜೆಪಿಯಿಂದ ಟಿಕೆಟ್
Published 13 ಮಾರ್ಚ್ 2024, 16:25 IST
Last Updated 13 ಮಾರ್ಚ್ 2024, 16:25 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಡಾ. ಸಿ.ಎನ್. ಮಂಜುನಾಥ್ ಅವರನ್ನು ಬಿಜೆಪಿ ಘೋಷಿಸಿದ್ದು, ಈ ಕುರಿತು ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರಲ್ಲಿದ್ದ ಕುತೂಹಲಕ್ಕೆ ತೆರೆ ಬಿದ್ದಿದೆ. ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡರ ಅಳಿಯನಾಗಿರುವ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ನಿವೃತ್ತ ನಿರ್ದೇಶಕರಾದ ಡಾ. ಮಂಜುನಾಥ್, ಇದರೊಂದಿಗೆ ರಾಜಕೀಯ ಇನ್ನಿಂಗ್ ಆರಂಭಿಸಿದ್ದಾರೆ.

ಎರಡೂ ಪಕ್ಷಗಳ ನಡುವೆ ಮೈತ್ರಿ ಏರ್ಪಟ್ಟಾಗಿನಿಂದಲೂ ಕ್ಷೇತ್ರದ ಟಿಕೆಟ್‌ ಮೇಲೆ ವಿಧಾನ ಪರಿಷತ್ ಸದಸ್ಯರಾದ ಬಿಜೆಪಿಯ ಸಿ.ಪಿ. ಯೊಗೇಶ್ವರ್ ಕಣ್ಣಿಟ್ಟಿದ್ದರು. ಇದೇ ಕಾರಣಕ್ಕೆ ಮೈತ್ರಿ ಬಳಿಕ, ರಾಜಕೀಯ ದ್ವೇಷ ಮರೆತು ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ಒಡನಾಟ ಹೆಚ್ಚಿಸಿಕೊಂಡಿದ್ದರು. ದುಬೈನಲ್ಲೂ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು.

ತಮಗೆ ಟಿಕೆಟ್ ಖಚಿತ ಎಂಬ ವಿಶ್ವಾಸದಲ್ಲಿದ್ದ ಯೋಗೇಶ್ವರ್, ಬಿಜೆಪಿಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಡಿ.ಕೆ. ಸಹೋದರರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಅವರ ಹೆಸರು ಘೋಷಣೆಯೊಂದೇ ಬಾಕಿ ಎಂಬ ಮಟ್ಟಕ್ಕೆ ರಾಜಕೀಯ ಬೆಳವಣಿಗೆಗಳಾಗಿದ್ದವು. ಇದೇ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತರಾದ ಡಾ. ಮಂಜುನಾಥ್ ಅವರ ಹೆಸರು ಕ್ಷೇತ್ರದಲ್ಲಿ ಮುನ್ನೆಲೆಗೆ ಬರತೊಡಗಿತು.

ಆರಂಭದಲ್ಲಿ ರಾಜಕೀಯ ಪ್ರವೇಶದ ಕುರಿತು ನಿರಾಕರಿಸಿದ್ದ ಡಾ. ಮಂಜುನಾಥ್, ನಂತರ ಸಾರ್ವಜನಿಕ ಸಮಾರಂಭಗಳಲ್ಲಿ ಕಾಣಿಸಿಕೊಳ್ಳತೊಡಗಿದರು. ಇದರ ಜೊತೆಗೆ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರ ಬಾಯಲ್ಲಿ ಅವರ ಹೆಸರು ಹರಿದಾಡತೊಡಗಿತು. ಇದರ ಮಧ್ಯೆ ಯೋಗೇಶ್ವರ್ ಹೆಸರು ಹಿಂದಕ್ಕೆ ಸರಿಯಿತು.

ಅಭ್ಯರ್ಥಿ ಆಯ್ಕೆ ಕುರಿತು ಇತ್ತೀಚೆಗೆ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದಿದ್ದ ಉಭಯ ಪಕ್ಷಗಳ ಮುಖಂಡರ ಸಭೆಯಲ್ಲಿದ್ದವರು ಯೋಗೇಶ್ವರ್ ಪರ ಒಲವು ತೋರಿದ್ದರು. ಇದರ ಬೆನ್ನಲ್ಲೇ, ಅವರಿಗೆ ದೆಹಲಿಯಿಂದ ವರಿಷ್ಠರ ಬುಲಾವ್ ಬಂದಿತ್ತು. ಇದು ಟಿಕೆಟ್ ಹಂಚಿಕೆ ಮತ್ಯಾವ ತಿರುವು ಪಡೆದುಕೊಳ್ಳಲಿದೆ ಎಂಬ ಕುತೂಹಲ ಕೆರಳಿಸಿತ್ತು. ಆದರೆ ಯೋಗೇಶ್ವರ್, ‘ಮಂಜುನಾಥ್ ಅವರೇ ಸ್ಪರ್ಧಿಸಲಿದ್ದಾರೆ. ನಾನೂ ಅವರ ಮನವೊಲಿಸುವೆ’ ಎಂದು ದೆಹಲಿಯಲ್ಲಿ ಹೇಳುವ ಮೂಲಕ, ಮಂಜುನಾಥ್ ಕಣಕ್ಕಿಳಿಯುವ ಸ್ಪಷ್ಟ ಸೂಚನೆ ನೀಡಿದ್ದರು.

ಇದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ಕುಮಾರಸ್ವಾಮಿ ಅವರು ಪಕ್ಷದ ಮುಖಂಡರ ಸಭೆ ನಡೆಸಿದ್ದರು. ಆಗ ಡಾ. ಮಂಜುನಾಥ್ ಅವರು ಕಣಕ್ಕಿಳಿಯಲು ಒಪ್ಪಿದ್ದರು. ಅದಾದ ಎರಡು ದಿನಗಳ ಬಳಿಕ ಬಿಜೆಪಿ ಇಂದು ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಂಜುನಾಥ್ ಅವರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT