ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯದತ್ತ ಯದುವೀರ್ ಮೊದಲ ಹೆಜ್ಜೆ– 32 ವರ್ಷದ ಯುವಕ, ಹೊಸ ಮುಖಕ್ಕೆ ಬಿಜೆಪಿ ಮಣೆ

Published 13 ಮಾರ್ಚ್ 2024, 15:25 IST
Last Updated 13 ಮಾರ್ಚ್ 2024, 15:25 IST
ಅಕ್ಷರ ಗಾತ್ರ

ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಪಡೆದಿರುವ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ರಾಜಕೀಯ ಕ್ಷೇತ್ರ ಹೊಸದು. 32 ವರ್ಷ ವಯಸ್ಸಿನ ಅವರು ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ.

ಮಾಜಿ ಸಂಸದರೂ ಆಗಿದ್ದ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹಿರಿಯ ಸಹೋದರಿ ದಿವಂಗತ ಗಾಯತ್ರಿದೇವಿ ಅವರ ಮೊಮ್ಮಗ.

1992ರ ಮಾರ್ಚ್‌ 24ರಂದು ಸ್ವರೂಪ್ ಆನಂದ್ ಗೋಪಾಲ್‌ರಾಜ್ ಅರಸ್– ತ್ರಿಪುರಸುಂದರಿ ದೇವಿ ದಂಪತಿಯ ಮಗನಾಗಿ ಜನಿಸಿದರು. ಅವರ ಮೂಲ ಹೆಸರು ಯದುವೀ‌ರ್ ಗೋಪಾಲ್‌ರಾಜ್ ಅರಸ್.

23 ವರ್ಷ ವಯಸ್ಸಿನ ಅವರನ್ನು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪತ್ನಿ ಪ್ರಮೋದಾದೇವಿ ಒಡೆಯರ್ 2015ರ ಫೆ.23ರಂದು ದತ್ತು ಸ್ವೀಕರಿಸಿದ್ದರು. ಅದೇ ವರ್ಷ ಪಟ್ಟಾಭಿಷೇಕವೂ ನಡೆದಿತ್ತು. ದತ್ತು ಸ್ವೀಕಾರದ ನಂತರ ಮರುನಾಮಕರಣ ನಡೆದಿತ್ತು. ಇವರು, ಯದುವಂಶದ 27ನೇ ಸಂತತಿಯ ಅರಸು.

ಪಟ್ಟಾಭಿಷೇಕದ ನಂತರ ಅವರು, ಮೈಸೂರು ದಸರಾ ಸಂದರ್ಭದಲ್ಲಿ ಮೈಸೂರಿನ ಅರಮನೆಯಲ್ಲಿ ‘ಖಾಸಗಿ ದರ್ಬಾರ್‌’ ನಡೆಸುತ್ತಾ ಬಂದಿದ್ದಾರೆ.

ಯದುವೀರ್‌ ಬೆಟ್ಟದಕೋಟೆ ಮನೆತನಕ್ಕೆ ಸೇರಿದವರು. ಮೈಸೂರಿನ ಒಡೆಯರ್ ಮನೆತನ ಮತ್ತು ಬೆಟ್ಟದಕೋಟೆ ಮನೆತನದ ನಡುವಿನ ಒಡನಾಟಕ್ಕೆ 200 ವರ್ಷಕ್ಕೂ ಮಿಗಿಲಾದ ಇತಿಹಾಸ ಇದೆ. ಮಹಾರಾಣಿಯಾಗಿದ್ದ ಲಕ್ಷ್ಮಮ್ಮಣ್ಣಿ ಅವರು ಇದೇ ಮನೆತನಕ್ಕೆ ಸೇರಿದವರು. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗೆ ರಾಜ್ಯಭಾರ ಮರಳಿ ಲಭಿಸುವಂತೆ ಮಾಡುವಲ್ಲಿ ಲಕ್ಷ್ಮಮ್ಮಣ್ಣಿ ಅವರ ಪಾತ್ರ ಅವಿಸ್ಮರಣೀಯವಾದುದು.

ಮುಮ್ಮಡಿ ಒಡೆಯ‌ರ್ ಅವರ ದತ್ತು ಪುತ್ರ 10ನೇ ಚಾಮರಾಜ ಒಡೆಯರ್ (ಲಕ್ಷ್ಮಮ್ಮಣ್ಣಿ ಅವರ ಅಣ್ಣನ ಮಗ) ಅವರೂ ಇದೇ ಮನೆತನಕ್ಕೆ ಸೇರಿದವರು. ಈ ಕಾರಣದಿಂದ ಯದುವೀರ್ ಅವರನ್ನು ಮೈಸೂರು ರಾಜಮನೆತನದ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂದು ರಾಜಮನೆತನದವರು ತಿಳಿಸಿದ್ದರು.

ಯದುವೀರ್ ಬೆಂಗಳೂರಿನ ವಿದ್ಯಾನಿಕೇತನ್ ಶಾಲೆಯಲ್ಲಿ 10ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದಾರೆ. ಕೆನಡಿಯನ್ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ 12ನೇ ತರಗತಿ ಮುಗಿಸಿ, ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ಇಂಗ್ಲಿಷ್ ಸಂಯೋಜನೆಯಲ್ಲಿ ಬಿಎ ಪದವಿ ಪಡೆದಿದ್ದಾರೆ.

ಹಿಂದಿನ ಮೈಸೂರು ರಾಜ್ಯದ 625 ವರ್ಷಗಳ ಯದುವಂಶದ ಪರಿವಾರದವರು. ಪಟ್ಟಾಭಿಷೇಕದ ನಂತರ, ಯುವಜನರನ್ನು ತಮ್ಮತ್ತ ಸೆಳೆದುಕೊಳ್ಳುವಲ್ಲಿ ‍ಪ್ರಭಾವಶಾಲಿಯಾಗಿ ಹೊರಹೊಮ್ಮಿದ್ದಾರೆ.

ಸಂಗೀತದಲ್ಲಿ ಒಲವು ಹೊಂದಿರುವ ಅವರು ವೀಣೆ ಮತ್ತು ಗಿಟಾರ್ ನುಡಿಸುತ್ತಾರೆ. ವನ್ಯಜೀವಿಗಳ ಬಗ್ಗೆ ಅಪಾರ ಪ್ರೇಮ ಹೊಂದಿರುವ ಅವರು ಆ ನಿಟ್ಟಿನಲ್ಲಿ ಜಾಗೃತಿಯಲ್ಲಿ ತೊಡಗಿದ್ದಾರೆ. ಆಗಾಗ ಅವರು ಸಫಾರಿಗೂ ಹೋಗುತ್ತಾರೆ.

ಕ್ರಿಕೆಟ್, ಓದುವುದು ಮತ್ತು ಬರವಣಿಗೆ ಅವರ ಇತರ ಆಸಕ್ತಿಗಳಾಗಿವೆ. ಸಾಮಾಜಿಕ ಚಟುವಟಿಕೆಗಳು, ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುತ್ತಿರುತ್ತಾರೆ. ಅರಸು ಶಿಕ್ಷಣ ಸಂಸ್ಥೆ ಮೂಲಕ ಶಾಲಾ–ಕಾಲೇಜುಗಳನ್ನೂ ಅವರು ನಡೆಸುತ್ತಿದ್ದಾರೆ. ಚಾಮರಾಜ ಸ್ಕೂಲ್ ಆಫ್‌ ಆರ್ಕಿಟೆಕ್ಚರ್‌ ಕೂಡ ನಡೆಸುತ್ತಿದ್ದಾರೆ.

2016ರ ಜೂನ್‌ 28ರಂದು ರಾಜಸ್ಥಾನದ ಡುಂಗರಪುರದ ಹರ್ಷವರ್ಧನ್ ಸಿಂಗ್ ಮತ್ತು ಮಹೇಶ್ರಿ ಕುಮಾರಿ ಅವರ ಪುತ್ರಿ ತ್ರಿಷಿಕಾ ಕುಮಾರಿ ಸಿಂಗ್ ಅವರನ್ನು ವಿವಾಹವಾದರು. ಯದುವೀರ್‌–ತ್ರಿಷಿಕಾ ಕುಮಾರಿ ದಂಪತಿಗೆ ಆದ್ಯವೀರ್‌ ಎಂಬ ಇದ್ದಾನೆ.

ಯದುವೀರ್ ತಮ್ಮ ‘ಭೇರುಂಡ ಫೌಂಡೇಶನ್’ ಮೂಲಕ ಪರಂಪರೆ, ಸಂಸ್ಕೃತಿ, ಪರಿಸರ, ಉದ್ಯಮ ಮತ್ತು ಸಾಮಾಜಿಕ ಕಲ್ಯಾಣಕ್ಕೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮೈಸೂರು ಮಹಾನಗರಪಾಲಿಕೆಯಿಂದ 2016 ಮತ್ತು 2017ರಲ್ಲಿ ಕೈಗೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ತಾಯಿ ಪ್ರಮೋದಾದೇವಿ ಒಡೆಯರ್ ಅವರೊಂದಿಗೆ ರಾಯಭಾರಿಗಳಲ್ಲಿ ಒಬ್ಬರಾಗಿದ್ದರು. 2018ರಲ್ಲಿ ಅವರನ್ನು ಹಳೆಯ ಮೈಸೂರು ಪ್ರದೇಶದ ಪ್ರವಾಸೋದ್ಯಮ ರಾಯಭಾರಿಯನ್ನಾಗಿ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT