ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯದುವೀರ್ ಪರ ಮಾವನ ಲಾಬಿ?

ಮೈಸೂರಿನ ಅರಸರ ಎರಡನೇ ಕುಡಿ ರಾಜಕೀಯ ಪ್ರವೇಶ ಸನ್ನಿಹಿತ
Published 12 ಮಾರ್ಚ್ 2024, 23:32 IST
Last Updated 12 ಮಾರ್ಚ್ 2024, 23:32 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೆಸರು ಮತ್ತೆ ಮುನ್ನಲೆಗೆ ಬರಲು ಅವರ ಮಾವ, ರಾಜಸ್ಥಾನದ ಡುಂಗರ್‌ಪುರ್‌ ಮನೆತನದ ರಾಜವಂಶಸ್ಥ ಹರ್ಷವರ್ಧನ್ ಸಿಂಗ್ ಡುಂಗರ್‌ಪುರ್‌ ಪಾತ್ರ ಪ್ರಮುಖವಾಗಿದೆ ಎಂದು ಹೇಳಲಾಗಿದೆ.

ರಾಜಸ್ಥಾನದ ಪ್ರಮುಖ ರಾಜಮನೆತನಗಳಲ್ಲಿ ಒಂದಾದ ಡುಂಗರ್‌ಪುರ್ ವಂಶದ ಹರ್ಷವರ್ಧನ್ ಸಿಂಗ್‌ ಅವರ ಪುತ್ರಿ ತ್ರಿಷಿಕಾ ಕುಮಾರಿ ಅವರನ್ನು ಮೈಸೂರಿನ ಯದುವೀರ್ ವಿವಾಹವಾಗಿದ್ದಾರೆ. ದಸರಾ ಸೇರಿದಂತೆ ಹಲವು ಪ್ರಮುಖ ಸಂದರ್ಭಗಳಲ್ಲಿ ಡುಂಗರ್‌ಪುರ್‌ ಕುಟುಂಬದವರು ಮೈಸೂರಿಗೆ ಬಂದು ಹೋಗುತ್ತಿದ್ದಾರೆ.

ಹರ್ಷವರ್ಧನ್ ಸಿಂಗ್‌ 2016ರಿಂದ 2022ರವರೆಗೆ ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಈಗಲೂ ಬಿಜೆಪಿಯ ಕೇಂದ್ರ ನಾಯಕರ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಅವರೇ ಯದುವೀರ್ ಹೆಸರನ್ನು ಕೇಂದ್ರದ ಮಟ್ಟದಲ್ಲಿ ಪ್ರಸ್ತಾಪ ಮಾಡಿದ್ದು, ಅಳಿಯನನ್ನೂ ರಾಜಕೀಯಕ್ಕೆ ಒಪ್ಪಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಮೈಸೂರು ಅರಸರಿಗೆ ರಾಜಕೀಯ ಹೊಸತೇನಲ್ಲ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಇಲ್ಲಿಂದಲೇ ಸಂಸದರಾಗಿ ಆಯ್ಕೆಯಾಗಿದ್ದು, ಸೋಲು–ಗೆಲುವಿನ ರುಚಿಯನ್ನೂ ಕಂಡಿದ್ದಾರೆ. ಒಟ್ಟು ಆರು ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಅವರು ನಾಲ್ಕು ಬಾರಿ ಕಾಂಗ್ರೆಸ್‌ನಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಎರಡು ಬಾರಿ ಪರಭಾವಗೊಂಡಿದ್ದರು. ಒಮ್ಮೆ ಬಿಜೆಪಿ ಅಭ್ಯರ್ಥಿಯಾಗಿಯೂ ಸೋಲು ಕಂಡಿದ್ದರು.

ಮೈಸೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್ ಹೆಸರು ಈ ಹಿಂದೆಯೇ ಕೇಳಿಬಂದಿತ್ತು. ಆದರೆ ಅವರು ರಾಜಕೀಯ ಪ್ರವೇಶವನ್ನು ನಯವಾಗಿ ನಿರಾಕರಿಸುತ್ತಲೇ ಬಂದಿದ್ದಾರೆ. ಪ್ರಮೋದಾದೇವಿ ಒಡೆಯರ್‌ ಸಹ ಪುತ್ರನ ರಾಜಕೀಯಕ್ಕೆ ಸಮ್ಮತಿಸಿರಲಿಲ್ಲ. ಹಾಗೊಂದು ವೇಳೆ ತಮ್ಮ ಕುಟುಂಬದವರಿಗೆ ರಾಜಕೀಯ ಪ್ರಾತಿನಿಧ್ಯ ಕೊಡಲೇಬೇಕು ಎಂದಾದರೆ ಲೋಕಸಭೆ ಚುನಾವಣೆ ಬದಲಿಗೆ ರಾಜ್ಯಸಭೆಗೆ ನೇರವಾಗಿ ಆರಿಸಿ ಕಳುಹಿಸುವಂತೆ ಕೋರಿದ್ದರು ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆಗೆ ಯದುವೀರ್‌ ಮಾಧ್ಯಮಗಳಿಗೆ ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT