ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ: ತಕ್ಷಣವೇ ₹10 ಸಾವಿರ ಕೋಟಿ ಬಿಡುಗಡೆಗೆ ಆಗ್ರಹಿಸಿದ ಎಚ್‌.ಡಿ.ಕುಮಾರಸ್ವಾಮಿ

₹2 ಲಕ್ಷದವರೆಗೆ ಕೃಷಿ ಸಾಲ ಮನ್ನಾಕ್ಕೆ ಎಚ್‌ಡಿಕೆ ಒತ್ತಾಯ
Published 7 ಡಿಸೆಂಬರ್ 2023, 15:24 IST
Last Updated 7 ಡಿಸೆಂಬರ್ 2023, 15:24 IST
ಅಕ್ಷರ ಗಾತ್ರ

ವಿಧಾನಸಭೆ: ಬರದಿಂದಾಗಿ ರೈತರು ಸಂಕಷ್ಟದಲ್ಲಿದ್ದು ₹2 ಲಕ್ಷದವರೆಗಿನ ಕೃಷಿ ಸಾಲ ಮನ್ನಾ ಮಾಡುವುದರ ಜತೆಗೆ ಬರ ಪರಿಹಾರಕ್ಕಾಗಿ ₹10 ಸಾವಿರ ಕೋಟಿಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು.

ಬರದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯವ್ಯಾಪಿ ವಿವಿಧ ಬೆಳೆಗಳ ನಷ್ಟವಾಗಿದೆ. ಉತ್ತರ ಕರ್ನಾಟಕ ಭಾಗದ ರೈತರು ಬೆಂಗಳೂರು, ಮುಂಬೈ ಅಲ್ಲದೇ ವಿವಿಧ ರಾಜ್ಯಗಳಿಗೆ ಗುಳೇ ಹೋಗುತ್ತಿದ್ದಾರೆ. ಇದನ್ನು ತಡೆಯಲು ನರೇಗಾ ಅಡಿ ಉದ್ಯೋಗ ಕೊಡಿಸಬೇಕು ಎಂದು ಆಗ್ರಹಿಸಿದರು.

‘ನರೇಗಾ ಯೋಜನೆ ಸಾಕಷ್ಟು ದುರ್ಬಳಕೆಗೆ ಕಾರಣವಾಗಿದೆ. ಯಾರಿಗೆ ಅಗತ್ಯವಿದೆಯೋ ಅವರಿಗೆ ಉದ್ಯೋಗ ಸಿಗುತ್ತಿಲ್ಲ. ಅದು ಹೇಗೆ ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಅಧಿಕಾರಿಗಳು ಬರ ನಿರ್ವಹಣೆಯಲ್ಲಿ ಅಸಡ್ಡೆ ತೋರುತ್ತಿದ್ದಾರೆ. ಇತ್ತೀಚೆಗೆ ಬರ ವೀಕ್ಷಣೆಗೆ ಕೇಂದ್ರ ತಂಡ ಬಂದಾಗ ತಹಶೀಲ್ದಾರ್‌ ಒಬ್ಬರು ತಮ್ಮ ಕಾರಿನಲ್ಲಿ ನಿದ್ದೆ ಮಾಡಿದ್ದರು. ಅಧಿಕಾರಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳದಿದ್ದರೆ ಅಧಿಕಾರಿಗಳಿಗೆ ಸರ್ಕಾರದ ಬಗ್ಗೆ ಭಯ– ಭಕ್ತಿ ಇರುವುದಿಲ್ಲ’ ಎಂದು ಕುಮಾರಸ್ವಾಮಿ ಹೇಳಿದರು.

ಕೇಂದ್ರದಲ್ಲಿ ಯಾವುದೇ ಸರ್ಕಾರ ಇದ್ದರೂ ಅಷ್ಟೇ, ಪರಿಹಾರ ಹಣ ಬಿಡುಗಡೆಗೆ ಒಂದೇ ಮಾನದಂಡವನ್ನು ಅನುಸರಿಸಲಾಗುತ್ತದೆ. ಕೇಂದ್ರದಿಂದ  ಮೊದಲ ಕಂತಿನ ಹಣ ಈಗಾಗಲೇ ಬಂದಿರಬಹುದು. ಎರಡನೇ ಕಂತಿನ ಹಣ ಬರಬೇಕಾಗಿದೆ. ಈ ಬಗ್ಗೆ ಕಂದಾಯ ಸಚಿವರು ಮಾಹಿತಿ ನೀಡಬೇಕು ಎಂದು ಹೇಳಿದರು.

16 ಬಾರಿ ಬಜೆಟ್‌ ಮಂಡಿಸಿದವರು ಇದ್ದಾರೆ. ಕೃಷಿಕನಾಗಿ ಹುಟ್ಟಿ, ವೃತ್ತಿಯಲ್ಲಿ ವಾಣಿಜ್ಯೋದ್ಯಮಿಯಾಗಿ ಹವ್ಯಾಸಕ್ಕಾಗಿ ರಾಜಕಾರಣಿಯಾಗಿರುವ ಮತ್ತೊಬ್ಬ ಮಹಾನ್ ನಾಯಕರೂ ಇರುವ ಈ ಸರ್ಕಾರಕ್ಕೆ ಬರ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಕಾಲೆಳೆದರು.

ರೈತರ ಎಟಿಎಂ ಆಗಿ: ರಾಜ್ಯದ ಕಾಂಗ್ರೆಸ್ ಸರ್ಕಾರ ಐದು ರಾಜ್ಯಗಳ ಚುನಾವಣೆಗೆ ‘ಎಟಿಎಂ’ ಆಗಿ ಕೆಲಸ ಮಾಡಿದೆ. ರೈತರ ಪಾಲಿಗೆ ಎಟಿಎಂ ಆಗಿ ಕೆಲಸ ಮಾಡಲಿ ಎಂದು ಜೆಡಿಎಸ್‌ನ ಜಿ.ಟಿ. ದೇವೇಗೌಡ ಆಗ್ರಹಿಸಿದರು.

ಬರದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಅವರು, ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸರ್ಕಾರ ಸಾಲ ನೀಡುತ್ತಿದೆ. ಮರುಪಾವತಿ ಅಥವಾ ಕಂತು ಒಂದು ದಿನ ವಿಳಂಬವಾದರೂ ಬಡ್ಡಿ ವಸೂಲು ಮಾಡಲಾಗುತ್ತದೆ. ಜನವರಿ 25ರವರೆಗೆ ರೈತರು ಪಾವತಿಸಬೇಕಾದ ಬಡ್ಡಿ ಬಾಕಿಯನ್ನಾದರೂ ಮನ್ನಾ ಮಾಡಿ ಎಂದು ಒತ್ತಾಯಿಸಿದರು.

ನಮ್ಮ ಜಿಲ್ಲೆಯಲ್ಲಿ ಬರಪರಿಹಾರಕ್ಕಾಗಿ ಪಿಡಿಎಫ್‌ ಖಾತೆಯಲ್ಲಿ ಇಟ್ಟಿರುವ ₹8 ಕೋಟಿ ಹಣಕ್ಕೆ ಜಿಲ್ಲಾಧಿಕಾರಿಗಳು ಪ್ರತಿ ದಿನ ಬೆಳಿಗ್ಗೆ ಗಂಧದಕಡ್ಡಿ ಹಚ್ಚಿ ಪೂಜೆ ಮಾಡುತ್ತಾರೆ
ಎಚ್‌.ಡಿ.ರೇವಣ್ಣ ಜೆಡಿಎಸ್ ಶಾಸಕ

ಅಕ್ಕಿ ಸಕ್ಕರೆ ಈರುಳ್ಳಿ ರಫ್ತು ನಿಷೇಧ ತಪ್ಪು ಕೇಂದ್ರ ಸರ್ಕಾರವು ಅಕ್ಕಿ ಸಕ್ಕರೆ ಈರುಳ್ಳಿ ಸೇರಿ ಹಲವು ಕೃಷಿ ಉತ್ಪನ್ನಗಳ ರಫ್ತಿನ ಮೇಲೆ ನಿಷೇಧ ವಿಧಿಸಿರುವುದರಿಂದ ರೈತರಿಗೆ ತೊಂದರೆ ಆಗಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.  ರಫ್ತು ಮಾಡುವುದರಿಂದ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುತ್ತಿತ್ತು. ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ಕೊಬ್ಬರಿ ಬೆಲೆ ಕುಸಿದಿದೆ ಎಂದು ಹೇಳಿದರು.

ಸಿಎಂ ಆಸನದಲ್ಲಿ ಕುಳಿತ ನಯನಾ ಮೋಟಮ್ಮ! ತೆಲಂಗಾಣ ವಿಧಾನಸಭೆಯ ಫಲಿತಾಂಶದ ಕಾರಣಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಅಭಿನಂದಿಸಲು ಮುಂದಿನ ಸಾಲಿಗೆ ಬಂದ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರು ಮುಖ್ಯಮಂತ್ರಿ ಆಸನದಲ್ಲಿ ಕುಳಿತರು ಇದರಿಂದ ಗಲಿಬಿಲಿಗೊಂಡ ಶಿವಕುಮಾರ್‌ ಅವರು ತಕ್ಷಣವೇ ‘ಇದು ಮುಖ್ಯಮಂತ್ರಿಯವರ ಆಸನ ಅಲ್ಲಿ ಕೂರಬಾರದು’ ಎಂದು ಕೈಹಿಡಿದು ಎಬ್ಬಿಸಿದರು. ತೆಲಂಗಾಣ ಮುಖ್ಯಮಂತ್ರಿ ಪ್ರಮಾಣ ಸ್ವೀಕಾರ ಕಾರ್ಯಕ್ರಮದ ಬಳಿಕ ಶಿವಕುಮಾರ್‌ ಅವರು ನೇರವಾಗಿ ಸದನಕ್ಕೆ ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT