ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ದಿನಗಳೊಳಗೆ ರೈತರ ಖಾತೆಗೆ ಪರಿಹಾರ ಮೊತ್ತ: ಸಚಿವ ಕೃಷ್ಣಬೈರೇಗೌಡ

Published 6 ಮೇ 2024, 16:00 IST
Last Updated 6 ಮೇ 2024, 16:00 IST
ಅಕ್ಷರ ಗಾತ್ರ

ಬೆಂಗಳೂರು: ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ₹3,454.22 ಕೋಟಿಯನ್ನು ಸೋಮವಾರದಿಂದಲೇ ರೈತರ ಖಾತೆಗಳಿಗೆ ಜಮೆ ಮಾಡುವ ಪ್ರಕ್ರಿಯೆ ಆರಂಭಿಸಿದ್ದು, ಮುಂದಿನ 2– 3 ದಿನಗಳಲ್ಲಿ ಎಲ್ಲ ರೈತರ ಖಾತೆಗಳಿಗೂ ಹಣ ಜಮೆ ಆಗಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇಂದ್ರದಿಂದ ಬಾಕಿ ಪರಿಹಾರದ ಹಣ ಪಡೆಯಲು ಕಾನೂನು ಹೋರಾಟ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರ ಏ.26ರಂದು ₹3,454.22 ಕೋಟಿಯನ್ನು ರಾಜ್ಯಕ್ಕೆ ಬಿಡುಗಡೆ ಮಾಡಿದೆ. ಕೇಂದ್ರದಿಂದ ಹಣ ಬಿಡುಗಡೆ ಆಗುತ್ತಿದ್ದಂತೆಯೇ ಅರ್ಹ ರೈತರಿಗೆ ಪರಿಹಾರ ಪಾವತಿಸಲು ತಕ್ಷಣ ಕ್ರಮಕೈಗೊಳ್ಳಲಾಗಿದೆ. ಆದರೆ, ಏ.27 ಮತ್ತು 28 ಎರಡೂ ರಜಾದಿನಗಳು ಆಗಿದ್ದವು. ಏ.29 ಮತ್ತು 30ರಂದು ಬೆಳೆ ಹಾನಿ ಪರಿಹಾರ ವಿತರಿಸಲು ಎಲ್ಲ ತಾಂತ್ರಿಕ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿತ್ತು. ಮೇ 1 ಕಾರ್ಮಿಕರ ದಿನಾಚರಣೆ ಆಗಿದ್ದರಿಂದ ಸರ್ಕಾರಿ ರಜೆ ಇತ್ತು ಎಂದು ಅವರು ಹೇಳಿದ್ದಾರೆ.

ಮೊದಲ ಹಂತದ ಬೆಳೆ ಹಾನಿ ಪರಿಹಾರ ನೀಡಿ ಇನ್ನುಳಿದ ಬಾಕಿ ಮೊತ್ತಕ್ಕೆ ಎಸ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಎಲ್ಲಾ ಅರ್ಹ ರೈತರಿಗೆ ಪಾವತಿ ಮಾಡಲು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಕೇಂದ್ರದ ಹಣ ಬಿಡುಗಡೆಗೊಳಿಸಲು ಮೇ 2ರಂದು ಆದೇಶ ಹೊರಡಿಸಲಾಗಿತ್ತು ಎಂದು ಕೃಷ್ಣ ಬೈರೇಗೌಡ ವಿವರಿಸಿದ್ದಾರೆ.

ಕೇಂದ್ರ ಸರ್ಕಾರದ ಎಸ್‌ಡಿಆರ್‌ಎಫ್‌ ಮಾರ್ಗಸೂಚಿಗಳ ಅನ್ವಯ ಮೊದಲ ಹಂತದ ಪರಿಹಾರವಾಗಿ 33,58,999 ರೈತರಿಗೆ ಒಟ್ಟು ₹636.45 ಕೋಟಿಯನ್ನು ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಪಾವತಿಸಲಾಗಿದೆ. ಈ ಪೈಕಿ ಅತಿ ಕಡಿಮೆ ಜಮೀನು ಹೊಂದಿರುವ 4,43,691 ರೈತರಿಗೆ ಎಸ್‌ಡಿಆರ್‌ಎಫ್‌ ಮಾರ್ಗಸೂಚಿ ಅನ್ವಯ ಸಂಪೂರ್ಣ ಪರಿಹಾರ ಪಾವತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇಲ್ಲಿಯವರೆಗೆ ಒಟ್ಟು 31,82,602 ರೈತರಿಗೆ ಸಂಪೂರ್ಣ ಬೆಳೆ ಹಾನಿ ಪರಿಹಾರ ಪಾವತಿಸಲಾಗಿದೆ. ಇನ್ನೂ 2 ಲಕ್ಷ ರೈತರಿಗೆ ಬರ‍ಪರಿಹಾರ ಮೊತ್ತವನ್ನು ಪಾವತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT