ಹುಬ್ಬಳ್ಳಿ: ಭಾರಿ ಮಳೆಯಿಂದಾಗಿ, ದೂದ್‌ಸಾಗರ್ ಜಲಪಾತದ ಬಳಿಯ ಕ್ಯಾಸಲ್‌ರಾಕ್– ಕುಲೇಂ ರೈಲು ಮಾರ್ಗದಲ್ಲಿ ಮಂಗಳವಾರ ಮಧ್ಯಾಹ್ನ ಗುಡ್ಡ ಕುಸಿದು ಹಳಿಯ ಮೇಲೆ ಬಿದ್ದಿದೆ.
ಇದರಿಂದಾಗಿ ಆ ಮಾರ್ಗವಾಗಿ ಸಾಗಬೇಕಿದ್ದ ಹುಬ್ಬಳ್ಳಿ–ನಿಜಾಮುದ್ದೀನ್ ಎಕ್ಸ್‌ಪ್ರೆಸ್ ಹಾಗೂ ವಾಸ್ಕೊ–ಬೆಂಗಳೂರು ರೈಲುಗಳ ಸಂಚಾರವನ್ನು ನೈರುತ್ಯ ರೈಲ್ವೆ ರದ್ದುಪಡಿಸಿದೆ. ವಾಸ್ಕೊ–ನಿಜಾಮುದ್ದೀನ್ ಮತ್ತು ಎರ್ನಾಕುಲಂ– ಪುಣೆ ವೀಕ್ಲಿ ಎಕ್ಸ್‌ಪ್ರೆಸ್ ರೈಲುಗಳ ಮಾರ್ಗ ಬದಲಿಸಲಾಯಿತು.
ಮಣ್ಣು ತೆರವುಗೊಳಿಸಿದ ನಂತರ ರಾತ್ರಿ 9.30ಕ್ಕೆ ರೈಲು ಸಂಚಾರ ಮತ್ತೆ ಆರಂಭವಾಯಿತು. ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ರಾಜೇಶ್ ಮೋಹನ್ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ಪರಿಶೀಲಿಸಿದರು.