ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಂಡಿಯಾ’ ವಿದೇಶಿ ಪ್ರೇಮದ ಜನ ಇಟ್ಟ ಹೆಸರು: ಸದಾನಂದ ಗೌಡ

‘ನನ್ನ ಮಣ್ಣು ನನ್ನ ದೇಶ’ ಕಾರ್ಯಕ್ರಮ
Published 6 ಸೆಪ್ಟೆಂಬರ್ 2023, 15:35 IST
Last Updated 6 ಸೆಪ್ಟೆಂಬರ್ 2023, 15:35 IST
ಅಕ್ಷರ ಗಾತ್ರ

ಬೆಂಗಳೂರು: ‘ವಿದೇಶಿ ಪ್ರೇಮದ ಜನ ಭಾರತಕ್ಕೆ ‘ಇಂಡಿಯಾ’ ಎಂದು ಹೆಸರಿಟ್ಟರು. ಸಾವಿರಾರು ವರ್ಷ ಇತಿಹಾಸ ಇರುವ ಭರತಭೂಮಿಗೆ ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲೇ ‘ಭಾರತ’ ಎಂಬ ಒಂದೇ ಹೆಸರಿಡಬೇಕಿತ್ತು’ ಎಂದು ಬಿಜೆಪಿ ಸಂಸದ ಡಿ.ವಿ.ಸದಾನಂದಗೌಡ ಹೇಳಿದರು.

ನಗರದ ಕಾಡುಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಬಿಜೆಪಿ ಬುಧವಾರ ಹಮ್ಮಿಕೊಂಡಿದ್ದ ‘ನನ್ನ ಮಣ್ಣು ನನ್ನ ದೇಶ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

‘ಇಂದು ಭಾರತವು ವಿಶ್ವದಲ್ಲಿ ಅತ್ಯಂತ ಯಶಸ್ವಿ ದೇಶವಾಗಿದೆ. ದೇಶಕ್ಕೆ ನಮ್ಮ ಮಣ್ಣಿನ ಆಚಾರ, ವಿಚಾರ, ಸಂಸ್ಕೃತಿ ಮತ್ತು ಪರಂಪರೆ ಎತ್ತಿ ಹಿಡಿಯುವ ‘ಭಾರತ’ ಹೆಸರೇ ಸೂಕ್ತ. ಗರಿಷ್ಠ ದೇಶ ಪ್ರೇಮ ಇರುವ ದೇಶ ಅತಿ ಹೆಚ್ಚು ಅಭಿವೃದ್ಧಿ ಕಾಣುತ್ತದೆ. ಇದಕ್ಕೆ ಇಸ್ರೇಲ್‌, ಜಪಾನ್‌ ಉದಾಹರಣೆ. ರಾಜಕೀಯ ಕಾರಣಕ್ಕಾಗಿ ಹಲವರು ಭಾರತ ಹೆಸರನ್ನು ವಿರೋಧಿಸಿ ಇಂಡಿಯಾ ಹೆಸರಿಗೆ ಪ್ರಾಮುಖ್ಯ ನೀಡುತ್ತಿರುವುದು ದುರ್ದೈವ. ಈಗ ಒಳ್ಳೆಯ ದಿನ ಬಂದಿದೆ ಎಂದು ಹೇಳಿದರು.

ಸನಾತನ ಧರ್ಮ ಪುರಾತನವಾದದು. ಅದರ ಬೇರುಗಳು ಆಳವಾಗಿವೆ. ಸಚಿವ ಜಿ.ಪರಮೇಶ್ವರ ಅವರಿಗೂ ಅದರ ಬೇರುಗಳನ್ನು ಕಂಡು ಹಿಡಿಯಲು ಸಾಧ್ಯವಿಲ್ಲ. ಅದೇ ಧರ್ಮದಲ್ಲಿ ಹುಟ್ಟಿದ ವ್ಯಕ್ತಿ ಆ ಧರ್ಮದ ಬಗ್ಗೆ ಮಾತನಾಡುವಾಗ ಸ್ವಲ್ಪ ಪರಿಜ್ಞಾನ ಇಟ್ಟುಕೊಂಡು ಮಾತನಾಡುವುದು ಸೂಕ್ತ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸನಾತನ ಧರ್ಮಕ್ಕೆ ಹುಟ್ಟಿದವನಲ್ಲ ಎಂದು ನಟ ಪ್ರಕಾಶ್‌ರಾಜ್‌ ಹೇಳಿರುವುದು ಬಾಲಿಶ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದ ಅವರು, ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರ ಇಂಡಿಯಾ ಒಕ್ಕೂಟದ ಪಾಲುದಾರರಂತೆ ವರ್ತಿಸುತ್ತಿರುವುದು ರಾಜ್ಯದ ಜನರಿಗೆ ಮಾಡುತ್ತಿರುವ ದ್ರೋಹ ಎಂದು ಕಿಡಿಕಾರಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಕರೆಯ ಮೇರೆಗೆ ಪುಣ್ಯಭೂಮಿಯ ಮಣ್ಣು ಶೇಖರಿಸಿ ದೇಶದ ವೀರ ಯೋಧರ ಅಮೃತ ವಾಟಿಕಾ ವನದಲ್ಲಿ ಅದನ್ನು ಸೇರಿಸುವ ಸಂಕಲ್ಪದ ಪುಣ್ಯ ದಿನ ಎಂದು ಬಣ್ಣಿಸಿದರು. ಈ ಕಾರ್ಯಕ್ರಮ ಇಡೀ ರಾಜ್ಯದಲ್ಲಿ ಅಕ್ಟೋಬರ್ 30ರವರೆಗೆ  ನಡೆಯಲಿದೆ ಎಂದೂ ಸದಾನಂದಗೌಡ ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ್, ಸಂಸದ ಪಿ.ಸಿ.ಮೋಹನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ನಗರ ಜಿಲ್ಲಾ ಅಧ್ಯಕ್ಷರು ಉಪಸ್ಥಿತರಿದ್ದರು.

‘ಭಾರತ ವಿರೋಧಿಸುವುದು ಊಳಿಗಮಾನ್ಯ ಮನಸ್ಥಿತಿ’

‘ಭಾರತವನ್ನು ವಿರೋಧಿಸುವ ಮನಸ್ಥಿತಿ ಊಳಿಗಮಾನ್ಯ ಮನಸ್ಥಿತಿ’ ಎಂದು ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ‘ಭಾರತ ಹೆಸರನ್ನು ಟೀಕಿಸುವವರು ವಸಾಹತಶಾಹಿ ಮನಸ್ಥಿತಿಯಿಂದ ಇನ್ನೂ ಹೊರಕ್ಕೆ ಬಂದಿಲ್ಲ ಎನ್ನುವುದನ್ನು ತೋರಿಸುತ್ತದೆ. ಮಹಾತ್ಮಗಾಂಧಿಯವರು ಇದೇ ಕಾರಣಕ್ಕೆ ಕಾಂಗ್ರೆಸ್ಸನ್ನು ವಿಸರ್ಜಿಸಿ’ ಎಂದು ಕರೆಕೊಟ್ಟಿದ್ದರು. ‘ಅದೆಷ್ಟೋ ಲಕ್ಷ ಜನ ಕಾಂಗ್ರೆಸ್‌ ಕಾರ್ಯಕರ್ತರು ಹೆಮ್ಮೆಯಿಂದ ಭಾರತ್‌ ಮಾತಾಕೀ ಜೈ ಎಂದು ಕೂಗಿ ಲಾಠಿ ಏಟು ತಿಂದಿದ್ದನ್ನು ಇಂದಿನ ಕಾಂಗ್ರೆಸ್ಸಿಗರು ನೆನಪಿಸಿಕೊಳ್ಳಬೇಕು. ಅದನ್ನು ಮರೆತಿರುವುದು ಇವತ್ತಿನ ಕಾಂಗ್ರೆಸ್‌ನ ದುಸ್ಥಿತಿಯನ್ನು ತೋರಿಸುತ್ತದೆ. ಭಾರತ ಮತ್ತು ಸನಾತನ ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದೆ. ಭಾರತ ಎಂಬುದನ್ನು ಇವತ್ತು ನಿನ್ನೆ ಇಟ್ಟ ಹೆಸರಲ್ಲ. ಸಾವಿರಾರು ವರ್ಷಗಳಿಂದ ನಮ್ಮ ದೇಶವನ್ನು ಭಾರತವೆಂದು ಗುರುತಿಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT