ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಯೂಟ ಲೋಪಕ್ಕೆ ಮುಖ್ಯ ಶಿಕ್ಷಕರೇ ಹೊಣೆ: ಶಿಕ್ಷಣ ಇಲಾಖೆ

ಎಲ್ಲ ಶಾಲೆಗಳಲ್ಲೂ ಎಸ್‌ಒಪಿ ನಿಯಮ ಪಾಲನೆ ಕಡ್ಡಾಯ
Published 5 ಡಿಸೆಂಬರ್ 2023, 15:47 IST
Last Updated 5 ಡಿಸೆಂಬರ್ 2023, 15:47 IST
ಅಕ್ಷರ ಗಾತ್ರ

ಬೆಂಗಳೂರು: ಶಾಲಾ ಮಕ್ಕಳನ್ನು ಸಾಲಾಗಿ ಕೂರಿಸಿ ಮಧ್ಯಾಹ್ನ ಬಿಸಿಯೂಟ ಬಡಿಸಬೇಕು. ಸರದಿಯಲ್ಲಿ ನಿಲ್ಲಿಸಿ ನೀಡಿದರೆ ಮುಖ್ಯ ಶಿಕ್ಷಕರು, ಬಿಸಿಯೂಟ ತಯಾರಕರು ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೂಚಿಸಿದೆ.

ಕಲಬುರಗಿ ಜಿಲ್ಲೆಯ ಚಿಣಮಗೇರಾ ಶಾಲೆಯಲ್ಲಿ ಬಿಸಿ ಊಟ ತಯಾರಿಸುವ ಕಡಾಯಿಗೆ ಬಿದ್ದು ಎರಡನೇ ತರಗತಿ ಮಗು ಮೃತಪಟ್ಟಿತ್ತು. ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಊಟ ಬಡಿಸುವಾಗ ಆಗುವ ನೂಕುನುಗ್ಗಲಿನಿಂದ ಇಂತಹ ಅವಘಡ ನಡೆದಿದೆ ಎನ್ನುವುದು ಖಚಿತಪಟ್ಟಿತ್ತು. ಉಳಿದ ಶಾಲೆಗಳೂ ಭವಿಷ್ಯದಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಶಿಕ್ಷಣ ಇಲಾಖೆ ಆಯುಕ್ತೆ ಬಿ.ಬಿ. ಕಾವೇರಿ ಅವರು ಎಲ್ಲ ಶಾಲೆಗಳಿಗೂ ಸೂಚನೆ ನೀಡಿದ್ದಾರೆ.

ಮಕ್ಕಳನ್ನು ಸಾಲಾಗಿ ಕೂರಿಸಿದ ನಂತರ ಊಟ ಬಡಿಸಬೇಕು. ಕಡಾಯಿಯನ್ನು ಅದು ಖಾಲಿಯಾಗುವವರೆಗೂ ಒಲೆಯ ಮೇಲಿಂದ ಇಳಿಸಬಾರದು. ಅಡುಗೆ ಮಾಡುವ ಸಿಬ್ಬಂದಿ ತಲೆಗೆ ಎಪ್ರಾನ್, ತಲೆಟೋಪಿ ಧರಿಸಬೇಕು. ಊಟದ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಬೇಕು. ಅಕ್ಕಿ, ತರಕಾರಿಗಳನ್ನು ಬಿಸಿ ನೀರಿನಿಂದ ತೊಳೆಯಬೇಕು. ಮಕ್ಕಳಿಗೆ ಬಡಿಸುವ ಮೊದಲು, ತಯಾರಿಸಿದ ಆಹಾರವನ್ನು ಶಿಕ್ಷಕರು ತಿಂದು ಪರೀಕ್ಷಿಸಿರಬೇಕು ಎಂಬ ವಿವರಗಳನ್ನು ಒಳಗೊಂಡ ಪ್ರಮಾಣಿತ ಕಾರ್ಯಕಾರಿ ವಿಧಾನವನ್ನು (ಎಸ್‌ಒಪಿ) ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ತಾಕೀತು ಮಾಡಿದ್ದಾರೆ.

ಚಿಣಮಗೇರಾ ಶಾಲೆಯಲ್ಲಿ ಊಟ ಬಡಿಸುವಾಗ ತಳ್ಳಾಟ ನಡೆದಿತ್ತು. ಆಗ ಮಕ್ಕಳನ್ನು ಜಾಗ್ರತೆಯಿಂದ ನೋಡಿಕೊಳ್ಳಬೇಕಾದ ಶಿಕ್ಷಕಿ ಮೊಬೈಲ್‌ನಲ್ಲಿ ಮಾತನಾಡುವುದರಲ್ಲಿ ಮಗ್ನರಾಗಿದ್ದರು. ಘಟನೆ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ. ಬಿಸಿಯೂಟದ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಇಲಾಖಾ ವಿಚಾರಣೆಗೂ ಆದೇಶಿಸಲಾಗಿದೆ ಎಂದು ವಿವರ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT