ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಕ್ಷೇತ್ರಗಳ ಮತ ಎಣಿಕೆ ಇಂದು

ವಿಧಾನ ಪರಿಷತ್ತಿನ ವಾಯವ್ಯ ಶಿಕ್ಷಕರ, ಪದವೀಧರ ಹಾಗೂ ಪಶ್ಚಿಮ ಶಿಕ್ಷಕರ ಮತಕ್ಷೇತ್ರ
Last Updated 14 ಜೂನ್ 2022, 19:30 IST
ಅಕ್ಷರ ಗಾತ್ರ

ಬೆಳಗಾವಿ: ವಾಯವ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯ ಮತಗಳ ಎಣಿಕೆ ಪ್ರಕ್ರಿಯೆ, ಇಲ್ಲಿನ ಜ್ಯೋತಿ ಕಾಲೇಜಿನಲ್ಲಿ ಬುಧವಾರ (ಜೂನ್‌ 15) ನಡೆಯಲಿದೆ. ಇದರೊಂದಿಗೆ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಎಣಿಕೆಯನ್ನೂ ಇಲ್ಲೇ ಮಾಡಲಾಗುತ್ತಿದ್ದು, ಮೂರೂ ಕ್ಷೇತ್ರಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಬುಧವಾರ ಬೆಳಿಗ್ಗೆ 7.45ಕ್ಕೆ ಸ್ಟ್ರಾಂಗ್‌ರೂಮ್‌ನ ಬಾಗಿಲು ತೆರೆದು ಮತಪೆಟ್ಟಿಗೆ ತೆಗೆದುಕೊಳ್ಳಲಾಗುವುದು. ಈ ವೇಳೆ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ, ಅಭ್ಯರ್ಥಿ ಅಥವಾ ಅವರ ಪರ ಏಜೆಂಟರ ಸಮ್ಮುಖದಲ್ಲಿ ಇದನ್ನು ತೆರೆಯಲಾಗುತ್ತದೆ. ಬೆಳಿಗ್ಗೆ 8ಕ್ಕೆ ಮತ ಎಣಿಕೆ ಆರಂಭಿಸಲಾಗುವುದು.

ವಾಯವ್ಯ ಪದವೀಧರ ಕ್ಷೇತ್ರಕ್ಕೆ 10 ಟೇಬಲ್‌, ಶಿಕ್ಷಕರ ಕ್ಷೇತ್ರಕ್ಕೆ 10 ಟೇಬಲ್‌ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ 11 ಟೇಬಲ್‌ಗಳನ್ನು ಸಿದ್ಧಗೊಳಿಸಲಾಗಿದೆ. ಅಲ್ಲದೇ, ಪ್ರತಿ ಕ್ಷೇತ್ರಕ್ಕೂ ಒಂದೊಂದು ಹೆಚ್ಚುವರಿ ಟೇಬಲ್‌ ನೀಡಲಾಗಿದೆ.

ತಲಾ ಕೌಂಟರ್‌ಗೆ ಒಬ್ಬ ಚುನಾವಣಾ ಏಜೆಂಟ್‌, ಒಬ್ಬ ಅಭ್ಯರ್ಥಿ, ಒಬ್ಬ ಅಭ್ಯರ್ಥಿ ಪರವಾದ ಏಜೆಂಟ್‌ ಇರಲು ಅವಕಾಶವಿದೆ. ಮತ ಎಣಿಕೆ ಕೇಂದ್ರದೊಳಗೆ ಬರುವರಿಗಾಗಿ ಈ ಮುಂಚೆಯೇ ಪ್ರತ್ಯೇಕ ಪಾಸ್‌ ವಿತರಿಸಲಾಗಿದ್ದು, ಅದನ್ನು ತಂದವರು ಮಾತ್ರ ಒಳಗೆ
ಹೋಗಬಹುದು.

ಕೇಂದ್ರದಲ್ಲಿ ಏನೇನಿದೆ?: ಎಲೆಕ್ಟ್ರಾನಿಕ್‌ ಸಲಕರಣೆಗಳನ್ನು ಒಳಗೊಂಡ ಒಂದು ಮಾಧ್ಯಮ ಕೊಠಡಿ, ಅಭ್ಯರ್ಥಿಗಳು, ಪೊಲೀಸರಿಗಾಗಿ ತಲಾ ಒಂದು ಕೊಠಡಿ ಮೀಸಲಿಸಲಾಗಿದೆ. ಕೋವಿಡ್‌ ನಿಯಮಗಳನ್ನು ಪಾಲಿಸುವ ಕಾರಣ ಒಂದು ಐಸೋಲೇಷನ್‌ ರೂಮ್‌ ಸಿದ್ಧಗೊಳಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆಗೆ ಬೇಕಾದ ಒಬ್ಬ ವೈದ್ಯ, ಸಿಬ್ಬಂದಿ ಹಾಗೂ ಚಿಕಿತ್ಸಾ ಕೊಠಡಿಯೂ ಲಭ್ಯ.

ಕೇಂದ್ರದ ಸುತ್ತ 200 ಮೀಟರ್‌ ವ್ಯಾಪ್ತಿಯ ಒಳಗೆ ನಿಷೇಧಾಜ್ಞೆ ವಿಧಿಸಲಾಗಿದೆ. ಹೀಗಾಗಿ, ಚುನಾವಣೆಗೆ ಸಂಬಂಧಿಸಿದವರನ್ನು ಬಿಟ್ಟು ಬೇರೆ ಯಾರೂ ಅನಗತ್ಯ ಪ್ರವೇಶ ಮಾಡುವಂತಿಲ್ಲ. ಅಲ್ಲದೇ, ವಿಜೇತ ಅಭ್ಯರ್ಥಿಗಳು ಅಥವಾ ಬೆಂಬಲಿಗರು ಈ ವ್ಯಾಪ್ತಿಯಿಂದ ಹೊರಗೆ ವಿಜಯೋತ್ಸವ ಆಚರಿಸಿಕೊಳ್ಳಬೇಕು ಎಂದು ಚುನಾವಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

*

ಫಲಿತಾಂಶ ಎಷ್ಟಕ್ಕೆ ಹೊರಬಳಬಹುದು?

ಮೊದಲ ಪ್ರಾಶಸ್ತ್ಯದ ಮತ ಎಣಿಕೆ ಮೊದಲು ನಡೆಯಲಿದೆ. ಅದರಲ್ಲಿ ಯಾವುದೇ ಅಭ್ಯರ್ಥಿ ನಿಗದಿತ ‘ಕೋಟಾ’ ಮುಟ್ಟಿದರೆ ಬುಧವಾರ ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳಬಹುದು. ಯಾರೂ ಕೋಟಾ ಮುಟ್ಟದೇ ಇದ್ದರೆ ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆ ನಡೆಯಲಿದೆ. ಆಗಲೂ ಯಾರೂ ಗೆಲ್ಲದಿದ್ದರೆ ‘ಎಲಿಮಿನೇಷನ್‌’ ಪ್ರಕ್ರಿಯೆ ಆರಂಭವಾಗಲಿದೆ. ಹೀಗಾದರೆ, ಫಲಿತಾಂಶ ಹೊರಬಳಲು ವಿಳಂಬವಾಗುವ ಸಾಧ್ಯತೆ ಇದೆ.

–ನಿತೇಶ್‌ ಪಾಟೀಲ, ಜಿಲ್ಲಾಧಿಕಾರಿ, ಬೆಳಗಾವಿ

*

ಬಿಗಿ ಭದ್ರತೆ

ಮತ ಎಣಿಕೆ ಮುಗಿಯುವರೆಗೂ ನಗರದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಮತ ಕೇಂದ್ರದ ಸುತ್ತ ಕೂಡ ಎರಡು ಸಿಎಆರ್‌ ಪೊಲೀಸ್‌ ತುಕಡಿ ಹಾಗೂ ಎರಡು ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಇವರ ಮೇಲೆ ಮೂರು ಶಿಫ್ಟ್‌ನಲ್ಲಿ ಹಿರಿಯ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.

ನಗರದ ಆಯಕಟ್ಟಿನ ಸ್ಥಳ, ಪ್ರಮುಖ ವೃತ್ತ– ಚೌಕ, ಪಾರ್ಕಿಂಗ್‌ ಸ್ಥಳಗಳಲ್ಲಿ ಪೊಲೀಸ್‌ ಪಹರೆ ಏರ್ಪಡಿಸಲಾಗಿದೆ. ಅಲ್ಲದೇ, ವಿಜೇತ ಅಭ್ಯರ್ಥಿಗಳು ನಗರದಲ್ಲಿ ಮೆರವಣಿಗೆ ನಡೆಸಲು ಅನುಮತಿ ‍ಪಡೆಯುವುದು ಕಡ್ಡಾಯ ಎಂದುನಗರ ಪೊಲೀಸ್‌ ಕಮಿಷನರ್‌ ಡಾ.ಎಂ.ಬಿ. ಬೋರಲಿಂಗಯ್ಯ ತಿಳಿಸಿದರು.

*

ಸಿಪಿಇಡಿ ಮೈದಾನದಲ್ಲಿ ಪಾರ್ಕಿಂಗ್‌

ಮತ ಎಣಿಕೆ ಕೇಂದ್ರಕ್ಕೆ ಬರುವವರಿಗಾಗಿ ಜ್ಯೋತಿ ಕಾಲೇಜಿನ ಪಕ್ಕದ ಸಿಪಿಇಡಿ ಮೈದಾನದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಬೈಕ್‌ ಹಾಗೂ ಕಾರ್‌ಗಳಿಗೆ ಪ್ರತ್ಯೇಕ ಜಾಗ ನೀಡಲಾಗಿದೆ.

ಚುನಾವಣಾಧಿಕಾರಿ ಆಮ್ಲಾನ್‌ ಆದಿತ್ಯ ಬಿಸ್ವಾಸ್‌, ಸಹಾಯಕ ಚುನಾವಣಾಧಿಕಾರಿ ನಿತೇಶ್‌ ಪಾಟೀಲ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದರ್ಶನ್‌ ಎಚ್‌., ನಗರ ಪೊಲೀಸ್‌ ಕಮಿಷನರ್‌ ಡಾ.ಎಂ.ಬಿ. ಬೋರಲಿಂಗಯ್ಯ ಅವರು ಮಂಗಳವಾರ ಈ ಎಲ್ಲ ಸ್ಥಳಗಳನ್ನು ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT