ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ ಬಳಿಯ ಔಷಧ ಕಂಪನಿಗೆ ₹11.68 ಕೋಟಿ ದಂಡ: ಕೆಎಸ್‌ಪಿಸಿಬಿ ಶಿಫಾರಸು

ಎನ್‌ಜಿಟಿಗೆ ವರದಿ ಸಲ್ಲಿಕೆ *ಮುಂದಿನ ತಿಂಗಳು ಅಂತಿಮ ವಿಚಾರಣೆ
Published 19 ಆಗಸ್ಟ್ 2023, 23:01 IST
Last Updated 19 ಆಗಸ್ಟ್ 2023, 23:01 IST
ಅಕ್ಷರ ಗಾತ್ರ

ನವದೆಹಲಿ: ಪರಿಸರ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ದೊಡ್ಡಬಳ್ಳಾಪುರ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿರುವ ಔಷಧ ಉ‌ತ್ಪಾದನಾ ಕಂಪನಿ ‘ರೆಸೋನೆನ್ಸ್‌ ಲ್ಯಾಬೊರೇಟರಿ’ಗೆ ₹11.68 ಕೋಟಿ ಪರಿಸರ ದಂಡ ವಿಧಿಸಬಹುದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಶಿಫಾರಸು ಮಾಡಿದೆ. 

‘ಈ ಕಂಪನಿಯು ಪರಿಸರ ಅನುಮತಿ ಪಡೆಯದೇ ದೀರ್ಘಕಾಲದಿಂದ ಬೃಹತ್‌ ಔಷಧ ಉತ್ಪಾದನಾ ಘಟಕ ನಡೆಸುತ್ತಿದೆ. ಉಲ್ಲಂಘನೆಯ ವಿಭಾಗದ ಅಡಿಯಲ್ಲಿ 2020ರ ಆಗಸ್ಟ್‌ನಲ್ಲಿ ಕರ್ನಾಟಕ ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರದಿಂದ ಪರಿಸರ ಅನುಮತಿ ಪಡೆದಿದೆ. ಹಿಂದಿನ ಉಲ್ಲಂಘನೆಗಳಿಗೆ ಪರಿಹಾರವನ್ನು ಮೌಲ್ಯಮಾಪನ ಮಾಡಿ ದಂಡ ಪಾವತಿಸದ ಹೊರತು ಪರಿಸರ ಅನುಮತಿ ನೀಡುವಂತಿಲ್ಲ. ನಿಯಮಬಾಹಿರವಾಗಿ ಪರಿಸರ ಅನುಮತಿ ನೀಡಲಾಗಿದೆ. ಜತೆಗೆ, ಪ್ರಾಧಿಕಾರಕ್ಕೆ ಈ ಅಧಿಕಾರವೇ ಇಲ್ಲ’ ಎಂದು ಆರೋಪಿಸಿ ಎಸ್‌.ಕೆ. ವಿಜಯಕುಮಾರ್ ಎಂಬುವರು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ದಕ್ಷಿಣ ವಲಯ ಪೀಠದ ಮೆಟ್ಟಿಲೇರಿದ್ದರು. 

ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಪೀಠವು ಈ ವರ್ಷದ ಫೆಬ್ರುವರಿ 1ರಂದು ಆದೇಶ ಹೊರಡಿಸಿ, ‘ಪ್ರಾಧಿಕಾರವು ಕ್ಯೋಟೋ ಪ್ರೋಟೋಕಾಲ್‌ ಪ್ರಕಾರ, ಪರಿಸರದ ಮೇಲಾಗಿರುವ ಹಾನಿಯ ಲೆಕ್ಕಾಚಾರ ಮಾಡಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳನ್ನು ಅನುಸರಿಸಿಲ್ಲ. ಕಂಪನಿಯ ಮನವಿಯ ಮೇರೆಗೆ ಪ್ರಾಧಿಕಾರವು ಈ ರೀತಿ ಮೌಲ್ಯಮಾಪನ ಮಾಡಿತ್ತು. ಇದು ಸರಿಯಲ್ಲ’ ಎಂದು ಹೇಳಿತ್ತು.

ಕೇಂದ್ರ ಅಥವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳ ಪ್ರಕಾರ ‍ಪರಿಸರ ಹಾನಿಯ ಮೌಲ್ಯಮಾಪನ ಮಾಡಿ ವರದಿ ಸಲ್ಲಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪೀಠ ನಿರ್ದೇಶನ ನೀಡಿತ್ತು. ಮಂಡಳಿಯ ಪರಿಸರ ಅಧಿಕಾರಿ ರಾಜಶೇಖರ ಎಸ್‌. ಅವರು ಪೀಠಕ್ಕೆ ಶುಕ್ರವಾರ ವರದಿ ಸಲ್ಲಿಸಿದ್ದು, ಇದನ್ನು ಪರಿಗಣನೆಗೆ ತೆಗೆದುಕೊಂಡು ಮುಂದಿನ ಆದೇಶ ಹೊರಡಿಸಬೇಕು ಎಂದು ಕೋರಿದ್ದಾರೆ. ಪ್ರಕರಣದ ಅಂತಿಮ ವಿಚಾರಣೆಯನ್ನು ಸೆಪ್ಟೆಂಬರ್‌ 25ಕ್ಕೆ ಮುಂದೂಡಲಾಗಿದೆ.  

ಕ್ಯೋಟೋ ಪ್ರೋಟೋಕಾಲ್‌ ನಿಯಮ ಅನುಸರಿಸಿ ಪರಿಸರಕ್ಕೆ ಆಗಿರುವ ಹಾನಿಯ ಲೆಕ್ಕಾಚಾರ ನಡೆಸಲಾಗಿದೆ. ಈ ಪ್ರಕಾರ, ದಂಡವು ₹7.63 ಲಕ್ಷ ಆಗಲಿದೆ ಎಂದು ಕಂಪನಿಯು ಪ್ರಾಧಿಕಾರಕ್ಕೆ ವರದಿ ಸಲ್ಲಿಸಿದೆ. ಇನ್ನೊಂದೆಡೆ, ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳ ಪ್ರಕಾರ, ಪರಿಸರ ಉಲ್ಲಂಘನೆಯ ಕಾರಣದಿಂದ ಪಡೆದ ಆರ್ಥಿಕ ಲಾಭಕ್ಕೆ ಸಂಬಂಧಿಸಿದಂತೆ/ಜಾಹೀರಾತುಗಳಿಗೆ ಸಂಬಂಧಿಸಿದಂತೆ ಹಾನಿಗೊಳಗಾದ ಪರಿಸರವನ್ನು ಲೆಕ್ಕಾಚಾರ ಮಾಡಲು ಅಥವಾ ನಿರ್ಣಯಿಸಲು ಯಾವುದೇ ಸೂತ್ರವಿಲ್ಲ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಮಾಲಿನ್ಯ ನಿಯಂತ್ರಣ ಮಂಡಳಿಯ ವರ್ಗೀಕರಣದ ಪ್ರಕಾರ, ಇದು ಕೆಂಪು ವರ್ಗದ ಕಂಪನಿ. ಕಂಪನಿ 2012ರ ಫೆಬ್ರುವರಿ 8ರಿಂದ ಕಾರ್ಯಾಚರಣೆ ನಡೆಸುತ್ತಿದೆ. ಪರಿಸರ ಅನುಮತಿ ಪಡೆದಿದ್ದು 2020ರ ಆಗಸ್ಟ್‌ 24ರಂದು. ಪರಿಸರ ಅನುಮತಿ ಇಲ್ಲದೆ 3,117 ದಿನ ಕಾರ್ಯಾಚರಣೆ ನಡೆಸಲಾಗಿದೆ. ಈ ಕಂಪನಿಯ ಯೋಜನಾ ವೆಚ್ಚ ₹10 ಕೋಟಿಯಿಂದ ₹25 ಕೋಟಿ ನಡುವೆ ಇದೆ. ಹಾಗಾಗಿ, ಇದೊಂದು ದೊಡ್ಡ ಕಂಪನಿ. 50 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪ್ರದೇಶದಲ್ಲಿ ಈ ಕಂಪನಿ ಇದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿ ಪ್ರಕಾರ, ಪರಿಸರ ಪರಿಹಾರ ₹11.68 ಕೋಟಿ ಆಗುತ್ತದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT